ADVERTISEMENT

ಜಿಲ್ಲೆಯಾದ್ಯಂತ ವಿವಿಧೆಡೆ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 6:50 IST
Last Updated 23 ಜುಲೈ 2013, 6:50 IST

ತಾಳಿಕೋಟೆ: ಪಟ್ಟಣ ಹಾಗೂ ಸುತ್ತಮುತ್ತ ಬೆಳಿಗ್ಗೆಯಿಂದ  ಮೋಡ ಕವಿದ ವಾತಾವರಣ. ಕಡುಗಪ್ಪು ಮೋಡಗಳು  ಜಿಟಿಜಿಟಿ ಮಳೆಯಿಂದ ಆರಂಭಿಸಿ ಮಧ್ಯಾಹ್ನ ಜೋರಾಗಿ ಸುರಿ ಯಿತು. ರಾತ್ರಿಯವರೆಗೆ ಒಮ್ಮೆ ಜಿಟಿ-ಜಿಟಿ ಹಾಗೂ ಒಮ್ಮೆ  ಜೋರಾಗಿ ಸುರಿಯುತ್ತ ಜನಜೀವನ ಅಸ್ತವ್ಯಸ್ತಗೊಳಿಸಿತು.

ಸಂತೆಯ ದಿನವಾದ ಸೋಮವಾರ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗೆ ಹಾಗೂ ವಾರದ ಸಂತೆಗೆ ಬಂದಿದ್ದ ಹಳ್ಳಿಯ ಜನತೆಗೆ ಮಳೆ ಅಡ್ಡಿಯುಂಟು ಮಾಡಿತು. ಪಟ್ಟಣದಲ್ಲಿನ ರಸ್ತೆಗಳು ರಾಡಿಗಳಿಂದ ಹಾಗೂ ತೆಗ್ಗುಗಳು ನೀರಿನಿಂದ ತುಂಬಿ ರಸ್ತೆಯಲ್ಲಿ ನಡೆಯುವವರಿಗೆ, ದ್ವಿಚಕ್ರ ವಾಹನ ಸಂಚಾರಿಗಳಿಗೆ ತೊಂದರೆ ಯಾಯಿತು.

ಖಾಸ್ಗತೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ಭಾನುವಾರ ಮುಕ್ತಾ ಯಗೊಂಡಿದ್ದು, ಜಾತ್ರೆಯಲ್ಲಿ ಜೋಕಾಲಿ, ತೊಟ್ಟಿಲು, ಡಿಸ್ಕೊಡ್ಯಾನ್ಸ್ ಜೋಕಾಲಿ ಚೇರ್‌ಗಳು, ಪುಠಾಣಿ ರೈಲುಗಳು, ಮಳೆಯಿಂದಾಗಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ. ಬಿತ್ತನೆ ಮಾಡಿದ ರೈತಾಪಿಗಳ ಮೊಗದಲ್ಲಿ ಸಂತಸ ಅರಳಿದ್ದರೆ ಬಿತ್ತನೆಗಾಗಿ ಕಾಯ್ದು ಕುಳಿತ ವರಿಗೆ ಮಳೆ ಅಡ್ಡಿಯುಂಟು ಮಾಡಿತು.

ಆಲಮಟ್ಟಿ ವರದಿ
ಆಲಮಟ್ಟಿ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ಇಂದು ಬೆಳಿಗ್ಗೆಯಿಂದಲೂ ಸಂಜೆಯವರೆಗೂ ಎಡೆಬಿಡದೇ ಮಳೆ ಸುರಿಯಿತು.

ಬೆಳಿಗ್ಗೆ ತುಂತುರು ಮಳೆಯಿದ್ದ ಮಳೆರಾಯ ಮಧ್ಯಾಹ್ನದ ನಂತರ ಬಿರುಸಾಗಿ ಸುರಿದ. ಇದು ರಾತ್ರಿಯ ವರೆಗೂ ಮುಂದುವರೆದಿತ್ತು. ಇಂತಹ ಜಡಿ ಮಳೆಯಲ್ಲಿಯೇ ನೂರಾರು ಜನ ರೈತರು ಸೇರಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.

ಜಲಾಶಯದ ಮಟ್ಟ: 519.6 ಮೀಟರ್ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಸೋಮವಾರ ಸಂಜೆ 518.35 ಮೀಟರ್‌ವರೆಗೆ ನೀರು ಸಂಗ್ರಹವಾಗಿತ್ತು. ಜಲಾಶಯದ 23 ಗೇಟ್‌ಗಳನ್ನು ತೆರೆದು 82,631 ಕ್ಯೂಸೆಕ್ ಹಾಗೂ ಬಲಭಾಗದ ಕೆಪಿ ಸಿಎಲ್ ಮೂಲಕ 42,000 ಕ್ಯೂಸೆಕ್ 124,631 ಕ್ಯೂಸೆಕ್ ನೀರನ್ನು ನಾರಾ ಯಣಪುರ ಜಲಾಶಯಕ್ಕೆ ಹಾಗೂ 365 ಕ್ಯೂಸೆಕ್ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ.

ಜಲಾಶಯದಲ್ಲಿ 103 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿತ್ತು.

ಬಸವನಬಾಗೇವಾಡಿ ವರದಿ
ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಮಳೆಯಾಗಿದೆ.
ಮಧ್ಯಾಹ್ನದ ವೇಳೆ ಆರಂಭವಾದ ಜಿಟಿ ಜಿಟಿ ಮಳೆ ನಂತರ ಕೆಲಹೊತ್ತು ಜೊರಾಗಿ ಸುರಿಯಿತು.

ಸಂಜೆಯು ಮಳೆ ಮುಂದುವರಿ ದಿತ್ತು. ಕೆಲ ದಿನ ಗಳಿಂದ ತಾಲ್ಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ರೈತರಲ್ಲಿ ಉತ್ಸಾಹ ಹೆಚ್ಚಿಸಿದೆ. ಕಡ್ಲಿಗರ ಹುಣ್ಣಿಮೆ ದಿನವಾಗಿದ್ದರಿಂದ ಬಾವಿ ಹಾಗೂ ಬೋರವೆಲ್‌ಗಳಿಗೆ ಸುಮಂಗಲೆಯರು ಪೂಜೆ ಸಲ್ಲಿಸಿ ನೈವೇದ್ಯ ಹಿಡಿದು ಬಾಗಿನ ಸಲ್ಲಿಸಿದರು.

ಪಟ್ಟಣದಲ್ಲಿ ಸಂತೆಯ ದಿನವಾದ ಸೋಮವಾರ ಹೆಚ್ಚಿನ ಸಂಖ್ಯೆಯ ರೈತರು ಕಂಡು ಬಂದರು.

ಕೃಷಿ ಚಟು ವಟಿಕೆಗೆ ಸಂಬಂಧಿಸಿದ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ತಾಲ್ಲೂಕಿನಲ್ಲಿ ಕೆಲ ದಿನಗಳಿಂದ  ಮಳೆ ಯಾಗುತ್ತಿರುವುದ ರಿಂದ  ಮಣ್ಣಿನ ಮೇಲ್ಚಾವಣಿ ಹೊಂದಿದ ಮನೆಗಳು ಸೋರದಂತೆ ನೋಡಿಕೊಳ್ಳಲು ಮಾಳಿಗೆ ಮೇಲೆ ಹೊದಿಸಲು ಪ್ಲಾಸ್ಟಿಕ್ ಹಾಳೆ ಖರೀದಿಸುತ್ತಿರುವುದು ಸಾಮಾನ್ಯ ವಾಗಿತ್ತು.

ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಕೆಲ ವಾರ್ಡುಗಳಲ್ಲಿ ನಲ್ಲಿಯ ನೀರು ಬಾರದೇ ಇರುವುದರಿಂದ ಮಾಳಿಗೆ  ಮೇಲಿನಿಂದ ಸುರಿದ ನೀರನ್ನು ಮನೆಯವರು ಸಂಗ್ರಹಿಸಿದರು.

ವಿವಿಧ ಸಸಿಗಳ ಮಾರಾಟ: ಮಳೆ ಆರಂಭವಾಯಿತೆಂದರೆ ರೈತರು ತಮ್ಮ ತೋಟಗಳಲ್ಲಿ ವಿವಿಧ ಗಿಡಮರಗಳನ್ನು ಬೆಳೆಸಲು ಮುಂದಾಗುತ್ತಾರೆ.

ಸಂತೆಯ ದಿನ ಪಟ್ಟಣದಲ್ಲಿ ಸಿತಾಪಳ, ನಿಂಬೆ, ಕರಿಬೇವು, ಟೆಂಗಿನ ಸಸಿಗಳು ಸೇರಿದಂತೆ ವಿವಿಧ ಸಸಿಗಳ ಮಾರಾಟದ ಭರಾಟೆ ಜೊರಾಗಿತ್ತು.  ಟೆಂಗಿನ ಮತ್ತು ನಿಂಬೆ ಸಸಿಗಳನ್ನು ಹೆಚ್ಚಿನ ಸಂಖ್ಯೆಯ ರೈತರು ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.