ADVERTISEMENT

ಜ್ಞಾನಯೋಗಾಶ್ರಮ ಬಳಿ ‘ಅಮೃತ್‌’ ಉದ್ಯಾನ

ಸಿವಿಲ್‌ ಕಾಮಗಾರಿಗೆ ಚಾಲನೆ, ಜೂನ್‌ ಅಂತ್ಯದೊಳಗೆ ಉದ್ಘಾಟನೆ

ಡಿ.ಬಿ, ನಾಗರಾಜ
Published 15 ಮಾರ್ಚ್ 2018, 11:20 IST
Last Updated 15 ಮಾರ್ಚ್ 2018, 11:20 IST
ವಿಜಯಪುರದ ಜ್ಞಾನಯೋಗಾಶ್ರಮ ಬಳಿಯ ವಿಶ್ವೇಶ್ವರಯ್ಯ–ಟೀಚರ್ಸ್‌ ಕಾಲೊನಿ ನಡುವಿನ ಜಾಗದಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು
ವಿಜಯಪುರದ ಜ್ಞಾನಯೋಗಾಶ್ರಮ ಬಳಿಯ ವಿಶ್ವೇಶ್ವರಯ್ಯ–ಟೀಚರ್ಸ್‌ ಕಾಲೊನಿ ನಡುವಿನ ಜಾಗದಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದು   

ವಿಜಯಪುರ: ಕೇಂದ್ರ ಸರ್ಕಾರದ ‘ಅಮೃತ್‌’ ಯೋಜನೆಯಡಿ ನಗರದ ಜ್ಞಾನಯೋಗಾಶ್ರಮ ಬಳಿ ಉದ್ಯಾನ ನಿರ್ಮಾಣಕ್ಕೆ ಚಾಲನೆ ದೊರೆತಿದೆ.

ವಿಶ್ವೇಶ್ವರಯ್ಯ ಕಾಲೊನಿ, ಟೀಚರ್ಸ್‌ ಕಾಲೊನಿಯ ಉದ್ಯಾನದ ಜಾಗವನ್ನು ಒಟ್ಟುಗೂಡಿಸಿ, 9,712 ಚದರ ಮೀ. ಪ್ರದೇಶದಲ್ಲಿ ಉದ್ಯಾನ ನಿರ್ಮಿಸುವ ಯೋಜನೆಗೆ ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಚಾಲನೆ ನೀಡಿದೆ.

‘ಉದ್ಯಾನಕ್ಕೆ ಮೀಸಲಿಟ್ಟ ಈ ಎರಡೂ ಸ್ಥಳದಲ್ಲಿ ಹೊಲಸು ತುಂಬಿತ್ತು. ಚರಂಡಿ ನೀರು ನಿಂತು ಹಂದಿಗಳ ಆವಾಸ ಸ್ಥಾನವಾಗಿತ್ತು. ದೇಗುಲಕ್ಕೆ ಹೋಗಿ ಬರುವುದು ದುಸ್ತರ ಎನ್ನುವಂತಿತ್ತು. ನಮ್ಮ ವಾರ್ಡ್‌ ಸದಸ್ಯ ರವೀಂದ್ರ ಲೋಣಿ ಅವರ ಅಭಿವೃದ್ಧಿ ಕಾಳಜಿಯಿಂದ ಇಲ್ಲಿ ಯುಜಿಡಿ ನಿರ್ಮಾಣಗೊಂಡಿದೆ. ಹೊಲಸು ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

ADVERTISEMENT

ಇದೀಗ ಉದ್ಯಾನ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡರೆ ಈ ಭಾಗದ ಹತ್ತಕ್ಕೂ ಹೆಚ್ಚು ಬಡಾವಣೆಗಳ ಜನರು, ಆಶ್ರಮಕ್ಕೆ ವಿವಿಧೆಡೆಯಿಂದ ಬರುವ ಭಕ್ತರಿಗೆ ಮುಂದಿನ ಮಳೆಗಾಲದಿಂದಲೇ ಆಹ್ಲಾದಕರ ವಾತಾವರಣ ಒದಗಿಸಿದಂತಾಗುತ್ತದೆ’ ಎಂದು ಸ್ಥಳೀಯರಾದ ಬಸವರಾಜ ಜಾಲಗೇರಿ, ಸಂದೀಪ, ಲಿಂಗರಾಜ ಹೇಳಿದರು.

ಪಾರ್ಕ್‌ನ ವೈಶಿಷ್ಟ್ಯ: ಉದ್ಯಾನವನ್ನು ರಸ್ತೆ ವಿಭಜಿಸಿದೆ. ಒಂದೆಡೆ ಲಕ್ಷ್ಮೀ ದೇಗುಲವಿದೆ. ಅದರ ಸನಿಹವೇ ತೆರೆದ ಬಾವಿಯಿದೆ. ಬರದಲ್ಲೂ ಬತ್ತದ ಬಾವಿಯಿದು. ಇದರ ನೀರನ್ನೇ ಉದ್ಯಾನ ನಿರ್ವಹಣೆಗೆ ಬಳಸಿಕೊಳ್ಳುವ ಆಲೋಚನೆ ಪಾಲಿಕೆ ಆಡಳಿತದ್ದು.

‘ಬಾವಿ, ಗುಡಿಯಿರುವ ಪ್ರದೇಶವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಂಡಿದ್ದೇವೆ. ಬಾವಿ, ಗುಡಿ ಸುತ್ತಲೂ ಲಾನ್ ಬೆಳೆಸುವುದು. ಇನ್ನೊಂದೆಡೆ 35X80 ಅಡಿ ಸ್ಥಳದಲ್ಲಿ ಹಿರಿಯರಿಗಾಗಿಯೇ ಪ್ರತ್ಯೇಕವಾಗಿ ಕೂರಲು ಆಸನ ವ್ಯವಸ್ಥೆ, ವಾಕಿಂಗ್‌ ಪಾಥ್‌ ನಿರ್ಮಾಣದ ನೀಲನಕ್ಷೆ ರೂಪಿಸಲಾಗಿದೆ’ ಎಂದು ಸಿವಿಲ್‌ ಎಂಜಿನಿಯರ್ ಆನಂದ ಕೋಳೂರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಉಳಿದ ಎರಡು ಕಡೆ, ಒಂದೆಡೆ ಮಕ್ಕಳ ಆಟದ ಸಾಮಗ್ರಿ ಅಳವಡಿಸಿದರೆ, ಇನ್ನೊಂದೆಡೆ ಲಾನ್‌ ಬೆಳೆಸುತ್ತೇವೆ. ಇದೇ ರೀತಿ ಉದ್ಯಾನದ ಮತ್ತೊಂದು ಭಾಗದಲ್ಲೂ ಮೂರು ವಿಭಾಗ ಮಾಡಿದ್ದೇವೆ. ಒಂದರಲ್ಲಿ ಲಾನ್‌ ಬೆಳೆಸಿದರೆ, ಇನ್ನೊಂದರಲ್ಲಿ ಯುವಕರ ಚಟುವಟಿಕೆ
ಗಾಗಿ ಜಿಮ್‌ ರೂಪಿಸಲಾಗುವುದು. ಮತ್ತೊಂದೆಡೆ ನೀರಿನ ಕಾರಂಜಿ ನಿರ್ಮಿಸುವ ಆಲೋಚನೆಯಿದೆ. ನಗರಾಭಿವೃದ್ಧಿ ಇಲಾಖೆಯ ಅನುಮತಿಯೂ ಇದಕ್ಕೆ ದೊರೆತಿದೆ’ ಎಂದು ಅವರು ಹೇಳಿದರು.

‘ಎರಡೂ ಬದಿಯ ಉದ್ಯಾನದಲ್ಲಿ 700 ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಬೇವು, ಸಂಕೇಶ್ವರ, ರಾಜಾ–ರಾಣಿ, ವರ್ಜಿನಾ, ವೆಡೆಲ್ಲಾ, ಅಲಮಂಡಾ, ಪೇಪರ್‌ ಹೂವಿನ ಗಿಡಗಳು ಸೇರಿದಂತೆ ಅಲಂಕಾರಿಕ ಗಿಡಗಳನ್ನು ನೆಡಲಾಗುವುದು. 30ರಿಂದ 50 ಕೂರುವ ಬೆಂಚ್‌ ಅಳವಡಿಸಿ, ವಾಯುವಿಹಾರಕ್ಕೆ ಪೂರಕ ವಾತಾವರಣ ನಿರ್ಮಿಸುವ ಜತೆಗೆ, ಪಿಕ್‌ನಿಕ್‌ ಸ್ಪಾಟ್‌ ಆಗಿ ರೂಪಿಸಲಾಗುವುದು’ ಎಂದು ಆನಂದ ತಿಳಿಸಿದರು.

‘₹ 1.54 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪಾರ್ಕ್‌’
‘ಮಕ್ಕಳು, ಯುವ ಸಮೂಹ, ಹಿರಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ₹ 1.54 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಉದ್ಯಾನ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಅಮೃತ್‌ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯತ್ನಿಸಿದ್ದೇನೆ’ ಎಂದು ಪಾಲಿಕೆ ಸದಸ್ಯ ರವೀಂದ್ರ ಲೋಣಿ ಹೇಳಿದರು.

‘ಈಗಾಗಲೇ ಹನುಮಾನ್‌ ದೇಗುಲದ ಬಳಿ ಅಮೃತ ಯೋಜನೆಯಡಿಯೇ ₹ 50 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಆನಂದ ನಗರದಲ್ಲೂ ₹ 50 ಲಕ್ಷ ವೆಚ್ಚದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಆಶ್ರಮ ಬಳಿಯ ಉದ್ಯಾನದ ಸಿವಿಲ್‌ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜೂನ್‌ನಲ್ಲಿ ಪ್ಲಾಂಟೇಶನ್‌ ಆರಂಭಿಸಿ, ಅಂತ್ಯದೊಳಗೆ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.