ADVERTISEMENT

ತುರ್ತು ನೀರು ಪೂರೈಕೆಗೆ ಒಂದೇ ಒಂದು ಟ್ಯಾಂಕರ್ ಇಲ್ಲ!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 9:10 IST
Last Updated 25 ಏಪ್ರಿಲ್ 2012, 9:10 IST

ವಿಜಾಪುರ: ನಂಬಿ ಇಲ್ಲವೆ ಬಿಡಿ, ವಿಜಾಪುರ ನಗರದ ಯಾವುದೇ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದರೆ ತುರ್ತಾಗಿ ನೀರು ಪೂರೈಸಲು ಜಲಮಂಡಳಿ ಮತ್ತು ನಗರಸಭೆಯವರ ಬಳಿ ಒಂದೇ ಒಂದು ನೀರಿನ ಟ್ಯಾಂಕರ್ ಇಲ್ಲ!

`ಭೀಕರ ಬರ ಪರಿಸ್ಥಿತಿ ಎದುರಿಸಲು ಈ ಎರಡೂ ಸಂಸ್ಥೆಗಳು ಯಾವುದೇ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ. ಕೇಳಿದರೆ ನಮ್ಮಲ್ಲಿ ನೀರಿನ ಸಮಸ್ಯೆಯೇ ಇಲ್ಲ. ಪರಿಸ್ಥಿತಿ ಕೈಮೀರಿದರೆ ಬಾಡಿಗೆ ಟ್ಯಾಂಕರ್ ಪಡೆಯೋಣ ಎಂಬ ಉದಾಸೀನತೆ~ ಎಂಬುದು ಈ ಕಚೇರಿಗಳ ಸಿಬ್ಬಂದಿಯಿಂದಲೇ ಕೇಳಿ ಬರುತ್ತಿರುವ ಮಾತು.

ವಿಜಾಪುರ ನಗರಕ್ಕೆ ನೀರು ಪೂರೈಕೆಯ ಹೊಣೆಯನ್ನು ನಗರಸಭೆಯವರು ಜಲಮಂಡಳಿಗೆ ವಹಿಸಿದ್ದಾರೆ. ಹಿಂದೆ 24 ಸಾವಿರ ಇದ್ದ ನಳಗಳ ಸಂಖ್ಯೆ ಈಗ 38,600ಕ್ಕೆ ತಲುಪಿದೆ. ಈ ವರೆಗೂ ಭೂತನಾಳ ಕೆರೆ ಕೈ ಹಿಡಿದಿತ್ತು. ತಿಂಗಳ ಹಿಂದೆಯೇ ಅದು ಬರಿದಾಗಿದ್ದು, ಕೃಷ್ಣಾ ನದಿಯ ನೀರಿನ ಮಟ್ಟವೂ ಕುಸಿಯುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

`ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸುವುದು ಸಾಮಾನ್ಯ. ನಗರದಲ್ಲಿ ಎಲ್ಲಿಯಾದರೂ ಪ್ರತಿಭಟನೆ ನಡೆದರೆ ಆ ಜನರಿಗೆ ತುರ್ತಾಗಿ ನೀರು ಪೂರೈಸಲೇಬೇಕು. ತಲಾ ಒಂದೊಂದು ಬಿಂದಿಗೆಯಷ್ಟಾದರೂ ನೀರು ಪೂರೈಸಿ ಅವರನ್ನು ಸಂತೈಸಲಿಕ್ಕೂ ನಮ್ಮ ಬಳಿ ಒಂದೇ ಒಂದು ಟ್ಯಾಂಕರ್ ಇಲ್ಲ~ ಎಂಬುದು ಸಿಬ್ಬಂದಿಯ ಅಳಲು.

`ನೀರು ಪೂರೈಕೆಯ ಹೊಣೆ ಜಲಮಂಡಳಿಯದ್ದು. ಟ್ಯಾಂಕರ್ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳಬೇಕು~ ಎಂದು ನಗರಸಭೆಯವರು, `ಟ್ಯಾಂಕರ್ ಕೊಡುತ್ತೇವೆ ಎಂದು ಹೇಳಿದ್ದವರು ಇನ್ನೂ ಕೊಟ್ಟಿಲ್ಲ. ಅದನ್ನು ಖರೀದಿಸಲು ನಮ್ಮಲ್ಲಿ ಯಾವುದೇ ಅವಕಾಶವಿಲ್ಲ~ ಎಂದು ಜಲಮಂಡಳಿಯವರು ಕೈಚೆಲ್ಲಿದ್ದಾರೆ.

ಇನ್ನು ಖಾಸಗಿ ಟ್ಯಾಂಕರ್‌ಗಳವರಿಗೆ ಇದು ಸುಗ್ಗಿಯ ಕಾಲ. ಜಿಲ್ಲಾ ಆಡಳಿತವೇ ಜಿಲ್ಲೆಯಲ್ಲಿ 160 ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದಿದ್ದು, 83 ಗ್ರಾಮಗಳ 129 ಜನವಸತಿಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದೆ.

`ತುರ್ತಾಗಿ ನೀರು ಬೇಕೆಂದರೆ ಖಾಸಗಿ ಟ್ಯಾಂಕರ್‌ಗಳವರು ಹೇಳಿದಷ್ಟು ಹಣವನ್ನು ತೆರಲೇಬೇಕಾದ ಅನಿವಾರ್ಯತೆ ಉಂಟಾಗಿದೆ. ನಗರದಲ್ಲಿ ಒಂದು ಟ್ಯಾಂಕರ್ ನೀರು ಪಡೆಯಬೇಕೆಂದರೆ 500ರಿಂದ 600 ರೂಪಾಯಿ ವರೆಗೂ ಹಣ ಕೊಡಬೇಕು. ಇಷ್ಟೊಂದು ಹಣ ಪಡೆದರೂ ಅವರು ಪೂರೈಸುವ ನೀರು ಶುದ್ಧವಾಗಿರುವುದಿಲ್ಲ. ಕುಡಿಯಲು ಹೋಗಲಿ. ಸ್ನಾನ ಮಾಡಿದರೆ ಮೈ ತುರಿಕೆ ಉಂಟಾಗುತ್ತದೆ~ ಎನ್ನುತ್ತಾರೆ ಗೃಹಿಣಿ ವಿಮಲಾದೇವಿ.

`ಈಗ ಇಂಧನ ಸೇರಿದಂತೆ ಎಲ್ಲ ದರ ಹೆಚ್ಚಳವಾಗಿದೆ. ನಿರ್ವಹಣಾ ವೆಚ್ಚವೂ ಅಧಿಕ. ಮೇಲಾಗಿ ನಾವೂ ನೀರು ಖರೀದಿಸಿ ತರುತ್ತಿದ್ದೇವೆ. ದರ ಹೆಚ್ಚಳ ಮಾಡಿದ್ದರೂ ನಮಗೆ ಬರುವ ಲಾಭ ಅಷ್ಟಕಷ್ಟೆ~ ಎನ್ನುತ್ತಾರೆ ಟ್ಯಾಂಕರ್ ಚಾಲಕ ಹನುಮಂತ.

`ಜಲಮಂಡಳಿಗೆ ಸ್ವಂತ ಟ್ಯಾಂಕರ್ ಪಡೆಯುವ ಯತ್ನ ನಡೆದಿದೆ. ತುರ್ತಾಗಿ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು~ ಎನ್ನುತ್ತಾರೆ ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನಮೂರ್ತಿ.

`ಭೂತನಾಳ ಕೆರೆಯಿಂದ ನಗರದ ಒಂಬತ್ತು ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿತ್ತು. ಕೆರೆ ಬತ್ತಿದ್ದರಿಂದ ಈ ಪ್ರದೇಶಕ್ಕೂ ಕೃಷ್ಣಾ ನೀರನ್ನೇ ಪೂರೈಸಲಾಗುತ್ತಿದೆ. ಕೆರೆಯಲ್ಲಿ ಈಗ ಕೇವಲ ಒಂಬತ್ತು ಇಂಚು ನೀರಿದೆ. ಅದೇ ನೀರನ್ನು ಭೂತನಾಳ  ಮತ್ತು ಸೇವಾಲಾಲ ತಾಂಡಾಗಳಿಗೆ ಪೂರೈಸಲಾಗುತ್ತಿದೆ. ತಕ್ಷಣ ಮಳೆಯಾಗದಿದ್ದರೆ ಈ ತಾಂಡಾಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯವಾಗುತ್ತದೆ~ ಎನ್ನುತ್ತಾರೆ ಅವರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.