ADVERTISEMENT

ನಾಡಗೌಡರಿಗೆ ಮತ ನೀಡಬೇಡಿ; ವರ್ತೂರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 10:36 IST
Last Updated 5 ಅಕ್ಟೋಬರ್ 2017, 10:36 IST

ಮುದ್ದೇಬಿಹಾಳ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೂ ಇಲ್ಲಿನ ಶಾಸಕ ಸಿ.ಎಸ್‌.ನಾಡಗೌಡರಿಗೆ ಮತ ನೀಡಬೇಡಿ’ ಎಂದು ಕೋಲಾರ ಶಾಸಕ ವರ್ತೂರು ಪ್ರಕಾಶ ಹಾಲುಮತ ಸಮಾಜಕ್ಕೆ ಮನವಿ ಮಾಡಿದರು.

ತಾಲ್ಲೂಕಿನ ಯರಝರಿ ಗ್ರಾಮದ ಯಲ್ಲಾಲಿಂಗೇಶ್ವರ ಮಠದಲ್ಲಿ ಬುಧವಾರ ನಡೆದ ನವರಾತ್ರೋತ್ಸವ, ಸರ್ವ ಧರ್ಮ ಸಮ್ಮೇಳನ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ವರ್ತೂರು ‘ಈ ಹಿಂದಿನಿಂದಲೂ ಹಿಂದುಳಿದ ನಾವು ನಾಡಗೌಡರಿಗೆ ಮತ ನೀಡಿದ್ದೇವೆ. ಈ ಬಾರಿ ಅವರು ನಮಗೆ ಈ ಕ್ಷೇತ್ರ ಬಿಟ್ಟುಕೊಡಲಿ’ ಎಂದು ಹೇಳಿದರು.

‘ಎ.ಎಸ್‌.ಪಾಟೀಲ ನಡಹಳ್ಳಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿ. ಅವರಿಗೆ ನಮ್ಮ ಸಮಾಜದ ಜನರೆಲ್ಲ ಆಶೀರ್ವಾದ ಮಾಡಲಿ. ಅದೇ ರೀತಿ ನಡಹಳ್ಳಿ ಇಲ್ಲಿ ನಮ್ಮ ಸಮಾಜದವರಿಗೆ ಆಶೀರ್ವಾದ ಮಾಡಬೇಕು’ ಎಂದು ವರ್ತೂರು ತಿಳಿಸಿದರು.

ADVERTISEMENT

ಇದೇ ಸಂದರ್ಭ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಹಾಲು ಮತ ಸಮಾಜದ ಧುರೀಣರಾದ ಎಂ.ಎಚ್.ಹಾಲಣ್ಣವರ, ನಿಂಗಪ್ಪಗೌಡ ಬಪ್ಪರಗಿ, ಮಲಕೇಂದ್ರಗೌಡ ಪಾಟೀಲ, ಡಾ.ಸಿ.ಎಚ್.ನಾಗರಬೆಟ್ಟ, ಕೆಂಚಪ್ಪ ಬಿರಾದಾರ, ಬಿ.ಕೆ.ಬಿರಾದಾರ ಅವರನ್ನು ವೇದಿಕೆಗೆ ಕರೆದು ಮಲ್ಲಾಲಿಂಗಪ್ರಭು ಸ್ವಾಮೀಜಿ ಸಮ್ಮುಖ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ ಎಂದು ಕೈ ಹಿಡಿದು ಪ್ರಮಾಣ ಮಾಡುವಂತೆ ಮಾಡಿದರು.

ಬಿಜೆಪಿ ಧುರೀಣರಾದ ಮಂಗಳಾದೇವಿ ಬಿರಾದಾರ, ಆರ್.ಎಸ್.ಪಾಟೀಲ ಕೂಚಬಾಳ, ಶಿವಶಂಕರಗೌಡ ಹಿರೇಗೌಡರ, ಲಿಂಗಣ್ಣ ಗುಂಡಳ್ಳಿ, ಡಾ.ಜಿ.ಬಿ.ನಂದನ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಐದು ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿತು. ತಿಂಥಣಿ ಮಠದ ಸಿದ್ಧರಾಮಾನಂದಪುರಿ ಸ್ವಾಮೀಜಿ, ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಮಲಕೇಂದ್ರಗೌಡ ಪಾಟೀಲ ಸ್ವಾಗತಿಸಿದರು. ಮಹಾಂತೇಶ ಪಟ್ಟಣದ ನಿರೂಪಿಸಿದರು. ಬಸವರಾಜ ಗುಳಬಾಳ ವಂದಿಸಿದರು.

ಮಹಾನ್‌ ನಾಯಕ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾನ್ ನಾಯಕ. ನಾನು ಅವರನ್ನು ಜಾತಿಗೆ ಸೀಮಿತಗೊಳಿಸುವುದಿಲ್ಲ. 2006ರಲ್ಲಿ ಅಹಿಂದ ಚಳವಳಿಯಲ್ಲಿ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಯಾಗಲು ಮತ ಹಾಕಿದ್ದೇನೆ, ಅವರ ಹೋರಾಟ ಯಶಸ್ವಿಯಾಗಲಿ’ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.