ADVERTISEMENT

ಪ್ರಜಾವಾಣಿ ಸಮೀಕ್ಷಾ ಸಪ್ತಾಹ ಆರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 6:10 IST
Last Updated 13 ಅಕ್ಟೋಬರ್ 2011, 6:10 IST
ಪ್ರಜಾವಾಣಿ ಸಮೀಕ್ಷಾ ಸಪ್ತಾಹ ಆರಂಭ
ಪ್ರಜಾವಾಣಿ ಸಮೀಕ್ಷಾ ಸಪ್ತಾಹ ಆರಂಭ   

ಆಲಮೇಲ: ಅತ್ಯಂತ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವಲ್ಲಿ ಪ್ರಜಾವಾಣಿಯ ಪಾತ್ರ ಗಮನಾರ್ಹವಾದುದು ಎಂದು ಸ್ಥಳೀಯ ಹೀರಾಬಾಯಿ ನಂದಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಎನ್. ಬಿರಾದಾರ ಅಭಿಪ್ರಾಯಪಟ್ಟರು.

 ಇತ್ತೀಚೆಗೆ ಇಲ್ಲಿನ ಆಲಮೇಲ್ ಶಿಕ್ಷಣ ಸಮಿತಿಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ `ಪ್ರಜಾವಾಣಿ ಸಮೀಕ್ಷಾ ಸಪ್ತಾಹ~ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೈಜ ಸಂಗತಿಗಳನ್ನು ನೀಡುವ ಮೂಲಕ ಪ್ರಜಾವಾಣಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶನ ನೀಡುವ ಏಕೈಕ ದಿನಪತ್ರಿಕೆ ಎಂದು ಶ್ಲಾಘಿಸಿದರು.

ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಇಂದು ಕಡಿಮೆಯಾಗಿದೆ. ಮುಂದುವರಿದ ಇಂದಿನ ಡಿಜಿಟಲ್ ಕಾಲದಲ್ಲೂ ಪತ್ರಿಕೆಯ ಅವಶ್ಯಕತೆ ಇದೆ ಎಂದು ಹೇಳಿದ ಅವರು, ಸಮಾಜದ ಸಾಮರಸ್ಯ ಕದಡದಂತೆ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಧರ್ಮ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವರದಿಗಾರ ರಮೇಶ ಕತ್ತಿ `ಪ್ರಜಾವಾಣಿ ಓದುವ ಅಗತ್ಯದ ಬಗ್ಗೆ ತಿಳಿಸಿದರು. ಇಂದಿನಿಂದ 7 ದಿನಗಳ ಕಾಲ ಶ್ರದ್ಧೆಯಿಂದ ಪತ್ರಿಕೆಯನ್ನು ಓದುವ ಹಾಗೂ ನಂತರ ಪರೀಕ್ಷೆ ಎದುರಿಸುವ ಕುರಿತು ಕಾರ್ಯಕ್ರಮ ಸಂಯೋಜಕ ಬಸವರಾಜ ಕೆಸರೆಟ್ಟಿ ಮಾಹಿತಿ ನೀಡಿದರು.

ಅಧೀಕ್ಷಕ ಎಸ್. ಜಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಪ್ರಾಚಾರ್ಯ ಆರ್.ಎಸ್.ಶಾಬಾದಿ, ಯು.ಎಸ್. ವಾಡೇಕರ, ಎಸ್.ಬಿ. ಕುಂಬಾರ, ಎಸ್. ಎಸ್. ಶಿವಗೊಂಡ ಮೊದಲಾದವರು ಭಾಗವಹಿಸಿದ್ದರು.

ಒಟ್ಟು 7 ದಿನಗಳ ಕಾಲ ನಡೆಯುವ ಈ ಸಮೀಕ್ಷೆಯಲ್ಲಿ ತರಬೇತಿ ಕೇಂದ್ರದ 43 ಪ್ರಶಿಕ್ಷಣಾರ್ಥಿಗಳು ಭಾಗವಹಿಸುವರು. ಎಸ್.ಎಚ್. ಆವಜಿ ಸ್ವಾಗತಿಸಿದರು. ಎ. ಎನ್. ಆಸಂಗಿಹಾಳ ವಂದಿಸಿದರು. ಎಲ್. ಬಿ. ಹರಿಂದ್ರಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.