ADVERTISEMENT

ಭೀಮಾ ತೀರದವರೆಲ್ಲ ಹಂತಕರಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 9:35 IST
Last Updated 16 ಏಪ್ರಿಲ್ 2012, 9:35 IST
ಭೀಮಾ ತೀರದವರೆಲ್ಲ ಹಂತಕರಲ್ಲ
ಭೀಮಾ ತೀರದವರೆಲ್ಲ ಹಂತಕರಲ್ಲ   

ಆಲಮೇಲ: ಭೀಮಾ ತೀರದಲ್ಲಿ  ಚಿತ್ರದ ನಾಯಕ ದುನಿಯಾ ವಿಜಯ್ ಶನಿವಾರ ಸಂಜೆ ಭೀಮಾ ತೀರದ ಹಳ್ಳಿಗಳಾದ ದೇವಣಗಾವ, ಸೊನ್ನ ಮತ್ತು ಬಮ್ಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು.

ಅವರು ದೇವಣಗಾಂವ ಬ್ಯಾರೇಜು ಮತ್ತು ಸೊನ್ನ ಗ್ರಾಮಕ್ಕೆ ಭೇಟಿ ನೀಡಿದ ನಂತರ ನೇರವಾಗಿ ಬಮ್ಮನಹಳ್ಳಿ ಗ್ರಾಮಕ್ಕೆ ತರಳಿ ಅಲ್ಲಿ ಚಂದಪ್ಪ ಹರಿಜನನ ಅಣ್ಣ ಯಲ್ಲಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸಂಜೆ 5.30ರ ಸುಮಾರಿಗೆ ಆಗಮಿಸಿದ ವಿಜಯ್, ಯಲ್ಲಪ್ಪ ಅವರೊಂದಿಗೆ ಒಂದು ಗಂಟೆ ಕಾಲ ಮಾತುಕತೆ ನಡೆಸಿ ಭೀಮಾ ತೀರದಲ್ಲಿನ ಬದುಕಿನ ಕೆಲವು ಘಟನೆಗಳನ್ನು ತಿಳಿದುಕೊಂಡರು.

ಇತ್ತೀಚೆಗೆ ತೀವ್ರ ವಿವಾದಕ್ಕೀಡಾಗಿದ್ದ ಭೀಮಾ ತೀರದಲ್ಲಿ ಸಿನಿಮಾದಲ್ಲಿ ಈ ಭಾಗದ ಕಥೆಯ ವಸ್ತು ತಿರುಚಲಾಗಿದೆ. ಇದರಿಂದ ಶಿವಾಜಿ ಮತ್ತು ಕೇಶಪ್ಪ ತಾವರಖೇಡ ಕುಟುಂಬಗಳಿಗೆ ನೋವಾಗಿದ್ದು, ಅವರಿಗೆ ಸಾಂತ್ವನ ಹೇಳಲು ಈ ಗ್ರಾಮಗಳಿಗೆ ಬರುವುದಾಗಿ ಹೇಳಿದ್ದರು. ಅದರಂತೆ ಶನಿವಾರ ಸಂಜೆ ವಿಜಯ್ ಭೇಟಿ ನೀಡಿದ್ದರು.

`ಈ ಭಾಗದ ಮುಗ್ಧರನ್ನು ಭೀಮಾ ತೀರದ ಹಂತಕರು ಎಂದು ಏಕೆ ಕರೆಯುತ್ತೀರಿ ಇದು ಸರಿಯಲ್ಲ~ ಎಂದರು.
`ಈ ಭಾಗದಲ್ಲಿ ಕೆಲವರನ್ನು ವೈಭವೀಕರಿಸಿ ಮುಗ್ದ ಜನರಿಗೆ ಬಂದೂಕು ನೀಡುವ ಮೂಲಕ ಅವರನ್ನು ಹಂತಕ ಪಟ್ಟ ಕಟ್ಟಿರುವುದು ದುರಾದೃಷ್ಟಕರ. ಇವರು ಮುಗ್ಧ ಜನರಾಗಿದ್ದು ಇವರಿಗೆ ಉತ್ತಮ ಶಿಕ್ಷಣ ಸಿಗುವಂತಾಗಲಿ. ಇವರಿಗೆ ಗನ್ ಬದಲು ಪೆನ್ನು ನೀಡಿ ಶಾಂತಿ ಕಾಪಾಡುವುದು ತಮ್ಮ ಚಿತ್ರದ ಉದ್ದೇಶವಾಗಿದೆ. ಇದಕ್ಕಾಗಿ ಈ ಗ್ರಾಮಕ್ಕೆ ಭೇಟಿ ನೀಡಿದ್ದೇನೆ ಎಂದರು.

ದುನಿಯಾ ವಿಜಯ್ ಜೊತೆ ಸಹ ನಟ ಚಂದ್ರಶೇಖರ, ಅನಿಲ ಮತ್ತು ಉದಯ ಇದ್ದರು. ಚಂದಪ್ಪನ ಅಣ್ಣ ಯಲ್ಲಪ್ಪ, ಸೋದರರಾದ ಬಸವರಾಜ, ಜಿಪಂ ಮಾಜಿ ಸದಸ್ಯ ಬಿ.ಆರ್. ಯಂಟಮಾನ ಮೊದಲಾದವರು ಹಾಜರಿದ್ದರು.

ದೇವಣಗಾಂವಕ್ಕೆ ಭೇಟಿ:
ದೇವಣಗಾಂವ ಗ್ರಾಮಕ್ಕೆ ಭೇಟಿ ನೀಡಿದ ದುನಿಯಾ ವಿಜಯ್, ಕೇಶಪ್ಪ ತಾವರಖೇಡ ಅವರ ಮನೆಗೆ ತೆರಳಿ  ಮಾತುಕತೆ ನಡೆಸಿದರು.

`ನಾನು ಯಾರ ಮನಸ್ಸಿಗೂ ನೋವು ಮಾಡಿಲ್ಲ. ನನ್ನ ಪಾತ್ರವನ್ನು ಅಭಿನಯಿಸುವುದಷ್ಟೇ ಕೆಲಸ. ಇಲ್ಲಿನ ಜನರಿಗೆ ಈ ಚಿತ್ರದಿಂದಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ~ ಎಂದ ವಿಜಯ್ ಭೀಮಾ ತೀರದಲ್ಲಿ ಶಾಂತಿ ನೆಲೆಸಲಿ ಎಂದು ಅವರು ಈ ಭಾಗ ಶಾಂತಿ ಯಾತ್ರೆ ಆಗಬೇಕು. ಇಲ್ಲಿನ ಶಿಕ್ಷಣ ಇನ್ನೂ ಸುಧಾರಿಸಬೇಕು. ನಾನು ಕೂಡಾ ಇಲ್ಲಿನ ಜನರ ಸೇವೆ ಮಾಡುವೆ. ಅದಕ್ಕಾಗಿ ಯೋಜನೆಯೂ ಹಾಕಿಕೊಂಡಿದ್ದೇನೆ ಎಂದರು.

ಪತ್ರಕರ್ತ ಟಿ.ಕೆ. ಮಲಗೊಂಡ, ಕೇಶಪ್ಪ ತಾವರಖೇಡ ಪುತ್ರ ಮಂಜುನಾಥ ಮತ್ತು ಸಹೋದರರು ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.