ADVERTISEMENT

ಭ್ರಮಾಲೋಕದಲ್ಲಿ ಮೋದಿ: ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಕೊಂದ ಸಂಘಟನೆಯ ವ್ಯಕ್ತಿ ಪ್ರಧಾನಿ ಆಗುವುದು ಬೇಡ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:52 IST
Last Updated 6 ಮಾರ್ಚ್ 2014, 6:52 IST

ವಿಜಾಪುರ: ‘ಚುನಾವಣೆಗೆ ಮೊದಲೇ ಪ್ರಧಾನ ಮಂತ್ರಿ ಆಗಿಯೇ ಬಿಟ್ಟಿದ್ದೇನೆ ಎಂಬ ಭ್ರಮಾಲೋಕದಲ್ಲಿರುವ ನರೇಂದ್ರ ಮೋದಿ, ಆ ಧಾಟಿಯಲ್ಲಿಯೇ ಮಾತನಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಬುಧವಾರ ಇಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮೋದಿ ಆರ್‌ಎಸ್‌ಎಸ್‌ ಮೂಲದಿಂದ ಬಂದವರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರನ್ನು ಕೊಲೆ ಮಾಡಿದ ಆರ್‌ಎಸ್‌ಎಸ್‌ನವರು ಪ್ರಧಾನಿಯಾದರೆ ದೇಶ ನೆಮ್ಮದಿಯಿಂದ ಇರಲು ಸಾಧ್ಯವೇ? ಗೋಧ್ರಾ ನರಮೇಧಕ್ಕೆ ಕಾರಣರಾದ ಮೋದಿ, ಪ್ರಧಾನಿಯಾದರೆ ದೇಶಕ್ಕೇ ಬೆಂಕಿ ಹಚ್ಚುತ್ತಾರೆ’ ಎಂದು ಎಚ್ಚರಿಸಿದರು.

‘ಕಾಂಗ್ರೆಸ್‌ ಮುಕ್ತ ಭಾರತ ತಮ್ಮ ಗುರಿ ಎಂದು ಮೋದಿ ಹೇಳುತ್ತಿದ್ದಾರೆ. ಹಸಿವು ಮುಕ್ತ ರಾಜ್ಯ–ದೇಶ ನಿರ್ಮಾಣ ನಮ್ಮ ಬದ್ಧತೆ ಎಂದು ನಾವು ಹೇಳುತ್ತಿದ್ದೇವೆ. ಬಿಜೆಪಿಯಂತೆ ಸಮಾಜ ಒಡೆಯುವ ಪಕ್ಷ ನಮ್ಮದಲ್ಲ. ಸಾಮಾಜಿಕ ನ್ಯಾಯ ನಮ್ಮ ಪಕ್ಷದಿಂದ ಮಾತ್ರ ಸಾಧ್ಯ. ಭಾರತ ಅಂದ್ರೆ ಕಾಂಗ್ರೆಸ್‌. ಕಾಂಗ್ರೆಸ್‌ ಅಂದರೆ ಭಾರತ’ ಎಂದು ಹೇಳಿದರು.

‘ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮಾಹಿತಿ ಹಕ್ಕು ಅಸ್ತ್ರ ಕೊಟ್ಟಿದ್ದು ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ. ವಾಜಪೇಯಿ, ಅಡ್ವಾಣಿ ಅವರು ಅಧಿಕಾರದಲ್ಲಿದ್ದಾಗ ಏಕೆ ಈ ಕಾನೂನು ಜಾರಿಗೆ ತರಲಿಲ್ಲ?  ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  46 ದಿನ ಜೈಲುವಾಸ ಅನುಭವಿಸಿದ್ದಾರೆ.

ಭ್ರಷ್ಟಾಚಾರದ ಹಣ ಎಣಿಸಲು ಮನೆಯಲ್ಲಿ ಯಂತ್ರ ಇಟ್ಟುಕೊಂಡಿದ್ದ ಈಶ್ವರಪ್ಪ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಆಗಿತ್ತು. ಈ ಇಬ್ಬರನ್ನು ಅಕ್ಕಪಕ್ಕ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗೆಗೆ ಮಾತನಾಡುವುದು ಢೋಂಗಿತನ’ ಎಂದರು.

‘ಶಾಲಾ ಮಕ್ಕಳಿಗೆ ಸೈಕಲ್‌ ವಿತರಿಸಿದ್ದೇನೆ ಎಂದು ಯಡಿಯೂರಪ್ಪ ಊರು ತುಂಬೆಲ್ಲ ತಮಟೆ ಹೊಡೆದರು. ಸೈಕಲ್‌ಗಳಿಗೆ ಆಗ ರಾಜ್ಯ ಸರ್ಕಾರ ಕೊಟ್ಟ ಸಹಾಯಧನ ₨120 ಕೋಟಿ ಮಾತ್ರ. ನಾವು ಅನ್ನಭಾಗ್ಯಕ್ಕೆ ನೀಡುತ್ತಿರುವ ಸಬ್ಸಿಡಿ ₨4,400 ಕೋಟಿ. ಯಡಿಯೂರಪ್ಪ ನಾನು ರೈತನ ಮಗ ಎಂದು ಕರೆದುಕೊಳ್ಳುತ್ತಿದ್ದಾರೆ. ನಾವ್ಯಾರ ಮಕ್ಕಳು? ನಾವೂ ಹೊಲ ಉತ್ತಿಯೇ ಇಲ್ಲಿಗೆ ಬಂದಿದ್ದೇವೆ’ ಎಂದು ಎದಿರೇಟು ನೀಡಿದರು.

‘ಹಾಲು ಉತ್ಪಾದಕರಿಗೆ ಲೀಟರ್‌ಗೆ ₨4 ಸಹಾಯಧನ ನೀಡುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಹಾಲು ಉತ್ಪಾದನೆಯಲ್ಲಿ ಕರ್ನಾಟಕವು ಗುಜರಾತನ್ನು ಹಿಂದಿಕ್ಕಿ ದೇಶದಲ್ಲಿ ಮೊದಲ ಸ್ಥಾನಕ್ಕೇರುತ್ತದೆ’ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಖಾತೆ ಸಚಿವ ಎಚ್‌.ಕೆ. ಪಾಟೀಲ, ‘ಸಿದ್ದರಾಮಯ್ಯ ಬಡವರ ಪಕ್ಷಪಾತಿ. ಬಡವರ ಏಳ್ಗೆಗೆ ಅವರು ಕಾರ್ಯಕ್ರಮ ರೂಪಿಸಿದರೆ ವಿರೋಧ ಪಕ್ಷದವರು ಅಸೂಯೆ ಪಡುತ್ತಿದ್ದಾರೆ’ ಎಂದು ಆರೋಪಿಸಿದರು.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ಆರ್‌. ಪಾಟೀಲ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.