ADVERTISEMENT

ಮುದ್ದೇಬಿಹಾಳ ಕ್ಷೇತ್ರದಲ್ಲಿ 239 ಮತಗಟ್ಟೆ

ಪ್ಯಾರಾ ಮಿಲಿಟರಿ ಸಿಬ್ಬಂದಿಯಿಂದ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 12 ಮೇ 2018, 7:04 IST
Last Updated 12 ಮೇ 2018, 7:04 IST
ಮುದ್ದೇಬಿಹಾಳದಲ್ಲಿ ಶುಕ್ರವಾರ ಮತಗಟ್ಟೆ ಸಿಬ್ಬಂದಿ ಎಂ.ಜಿ.ವಿ.ಸಿ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಸಾಮಗ್ರಿ  ಪಡೆದುಕೊಳ್ಳಲು ಸೇರಿದ್ದರು
ಮುದ್ದೇಬಿಹಾಳದಲ್ಲಿ ಶುಕ್ರವಾರ ಮತಗಟ್ಟೆ ಸಿಬ್ಬಂದಿ ಎಂ.ಜಿ.ವಿ.ಸಿ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಸಾಮಗ್ರಿ ಪಡೆದುಕೊಳ್ಳಲು ಸೇರಿದ್ದರು   

ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ 1,05,284 ಪುರುಷರು, 1,00,374 ಮಹಿಳೆಯರು ಮತ್ತು 36 ತೃತೀಯ ಲಿಂಗಿಗಳು ಸೇರಿ ಒಟ್ಟು 2,05,694 ಮತದಾರರು ಇದ್ದಾರೆ. 239 ಮತಗಟ್ಟೆಗಳಲ್ಲಿ 56 ಸೂಕ್ಷ್ಮ ಮತ್ತು 7 ಅತಿಸೂಕ್ಷ್ಮ ಮತಗಟ್ಟೆಗಳಿಗೆ ಪ್ಯಾರಾ ಮಿಲಿಟರಿ ಸಿಬ್ಬಂದಿ ಹೆಚ್ಚಿನ ಬಂದೋಬಸ್ತ್ ವಹಿಸಲಾಗಿದೆ.

ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ನಾಲ್ವರು ಮತದಾನ ಅಧಿಕಾರಿ, ಒಬ್ಬ ‘ಡಿ’ ದರ್ಜೆ ನೌಕರ ಸೇರಿ ಆರು ಜನರಂತೆ ಸಿಬ್ಬಂದಿ ನಿಯೋಜಿಸಿದ್ದು ಎಲ್ಲರೂ ಶುಕ್ರವಾರ ಇಲ್ಲಿನ ಎಂಜಿವಿಸಿ ಕಾಲೇಜಿನಲ್ಲಿರುವ ಮಸ್ಟರಿಂಗ್ ಕೇಂದ್ರ
ದಿಂದ ಮತದಾನ ಸಾಮಗ್ರಿ ಪಡೆದು ತಮಗೆ ನಿಗದಿಪಡಿಸಿದ ಮತಗಟ್ಟೆ ಸೇರಿ ಶನಿವಾರ ನಡೆಯಲಿರುವ ಮತದಾನದ ಸಿದ್ಧತೆ ಮಾಡಿಕೊಂಡಿದ್ದಾರೆ.

ಚುನಾವಣಾಧಿಕಾರಿ ಎನ್.ರಾಘವೇಂದ್ರ, ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಮಂಜುಳಾ ನಾಯಕ್ ಮತದಾನದ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಬಸವನ ಬಾಗೇವಾಡಿ ಸಬ್ ಡಿವಿಜನ್ ಡಿವೈಎಸ್ಪಿ ಮಹೇಶಗೌಡ ಮಾರ್ಗದರ್ಶನದಲ್ಲಿ ಸಿಪಿಐ ರವಿಕುಮಾರ ಕಪ್ಪತ್ತನ್ನವರ್, ಮುದ್ದೇಬಿಹಾಳ ಮತ್ತು ತಾಳಿಕೋಟೆ ಠಾಣೆಗಳ ಪಿಎಸ್‌ಐಗಳು ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವಿವಿಧ ವೀಕ್ಷಕರು ಮತಕ್ಷೇತ್ರದಲ್ಲಿ ಬೀಡುಬಿಟ್ಟು ಮತದಾನ ವ್ಯವಸ್ಥೆ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಮತದಾನ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲು ಇಂಡೋ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಪೊಲೀಸ್, ಸೆಂಟ್ರಲ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಪೋರ್ಸ್‌ ಪೊಲೀಸ್ ಪೇದೆಗಳು, ಹೋಮಗಾರ್ಡ್ಸ್‌ಗಳನ್ನು ಮತಗಟ್ಟೆ ಭದ್ರತೆಗೆ ನಿಯೋಜಿಸಲಾಗಿದೆ. ಆಯಾ ಮತಗಟ್ಟೆ ವ್ಯಾಪ್ತಿಯ ರೂಟ್ ಆಫೀಸರ್ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಮತದಾನ ಸುವ್ಯವಸ್ಥಿತವಾಗಿ ನಡೆಸುವ ಜವಾಬ್ದಾರಿ ವಹಿಸಿಕೊಡಲಾಗಿದೆ.

ಡಿಮಸ್ಟರಿಂಗ್: ಇಲ್ಲಿನ ಎಂಜಿವಿಸಿ ಕಾಲೇಜಿನಲ್ಲೇ ಡಿಮಸ್ಟರಿಂಗ್ ಕೇಂದ್ರವೂ ಇದ್ದು ಶನಿವಾರ ಸಂಜೆ ಮತದಾನ ಮುಗಿದ ಮೇಲೆ ಮತಯಂತ್ರ ಸಹಿತ ಎಲ್ಲ ಸಾಮಗ್ರಿಗಳನ್ನು ಮರಳಿ ಪಡೆದುಕೊಳ್ಳಲು, ಮತಯಂತ್ರಗಳನ್ನು ಮತ ಎಣಿಕೆ ಸ್ಥಳವಾಗಿರುವ ವಿಜಯಪುರದ ಸೈನಿಕ ಶಾಲೆಗೆ ಕಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.