ADVERTISEMENT

ರೌಡಿಗಳಿಗೆ ಐಜಿಪಿ ಖಡಕ್ ಸೂಚನೆ

‘ಜೈಲಿನಲ್ಲಾದರೂ ಇರಿ, 500 ಕಿ.ಮೀ ದೂರವಾದ್ರೂ ಹೋಗಿ’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 12:11 IST
Last Updated 27 ಮಾರ್ಚ್ 2018, 12:11 IST
ಕ್ರಿಮಿನಲ್ ಹಿನ್ನೆಲೆಯುಳ್ಳ 63 ಜನರ ವಿಚಾರಣೆಯನ್ನು ಇಂಡಿ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಐಜಿಪಿ ಅಲೋಕ್ ಕುಮಾರ್  ನಡೆಸಿದರು
ಕ್ರಿಮಿನಲ್ ಹಿನ್ನೆಲೆಯುಳ್ಳ 63 ಜನರ ವಿಚಾರಣೆಯನ್ನು ಇಂಡಿ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಐಜಿಪಿ ಅಲೋಕ್ ಕುಮಾರ್ ನಡೆಸಿದರು   

ಇಂಡಿ: ಅಪರಾಧಿ ಹಿನ್ನೆಲೆವುಳ್ಳ 63 ಜನರನ್ನು ಠಾಣೆಗೆ ಕರೆಸಿದ ಐಜಿಪಿ ಅಲೋಕ್ ಕುಮಾರ್, ಚುನಾವಣೆ ಮುಗಿಯವವರೆಗೂ ಜೈಲಿನಲ್ಲಿರಬೇಕು. ಇಲ್ಲದಿದ್ದರೇ 500 ಕಿ.ಮೀ ದೂರದ ಪ್ರದೇಶಕ್ಕೆ ತೆರಳಬೇಕು ಎಂದು ಖಡಕ್‌ ಸೂಚನೆ ನೀಡಿದರು.

ಸೋಮವಾರ ಪಟ್ಟಣಕ್ಕೆ ಬಂದ ಅಲೋಕ್‌ ಕುಮಾರ್, ಇಂಡಿ, ಚಡಚಣ, ದೇವರ ಹಿಪ್ಪರಗಿ, ಸಿಂದಗಿ, ಆಲಮೇಲ ಮುಂತಾದ ಸ್ಥಳಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ 63 ಜನರನ್ನು ಪೊಲೀಸ್‌ ಠಾಣೆಗೆ ಕರೆಸಿ ಕ್ರಿಮಿನಲ್‌ ಹಿನ್ನೆಲೆ ತಿಳಿದುಕೊಂಡರು.

ಮೂರು ದಿನಗಳಲ್ಲಿ ಈ ಎಲ್ಲಾ ಅಪರಾಧಿಗಳ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಎಂದು ಇದೇ ವೇಳೆ ಪೊಲೀಸರಿಗೆ ಸೂಚಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಐಜಿಪಿ ಅಲೋಕ್‌ಕುಮಾರ್, ‘ಮಧ್ಯಪ್ರದೇಶ ದಿಂದ ಜಿಲ್ಲೆಗೆ ನಾಡಪಿಸ್ತೂಲ್‌ ಬರುವುದು ಸಂಪೂರ್ಣ ನಿಂತಿದೆ. ಈಗಾಗಲೇ ಜಿಲ್ಲೆಯಲ್ಲಿರುವ ಬಹುತೇಕ ಪಿಸ್ತೂಲ್‌ಗಳನ್ನು ಜಪ್ತ ಮಾಡಲಾಗಿದ್ದು, ಕೆಲ ಕಡೆ ಉಳಿ ದಿರುವುದು ಕೂಡ ತಮ್ಮ ಗಮನಕ್ಕೆ ಬಂದಿದೆ. ಇಂಡಿ ಡಿವೈಎಸ್‌ಪಿ ನೇತೃತ್ವ ದಲ್ಲಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಚುನಾವಣೆ ಸಂದರ್ಭ ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಕ್ರಿಮಿನಲ್‌ ಹಿನ್ನೆಲೆವುಳ್ಳವರ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅಮೃತ್, ಡಿವೈಎಸ್‌ಪಿ ರವೀಂದ್ರ ಶಿರೂರ, ಸಿಪಿಐಗಳಾದ ಎಸ್.ಎಂ.ಪಾಟೀಲ, ಶ್ರೀನಿವಾಸಗೌಡ ಆರ್‌, ಪಿಎಸ್ಐ ಸಿ.ಬಿ.ಚಿಕ್ಕೊಡಿ, ಎಚ್.ಡಿ.ಅನಿಲಕುಮಾರ ಉಪಸ್ಥಿತರಿದ್ದರು.

ಮನೆಗಳ ಮೇಲೆ ದಾಳಿ

ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪಟ್ಟಣ ಸೇರಿದಂತೆ ವಿವಿಧೆಡೆ ಇರುವ ರೌಡಿಶೀಟರ್ ಮನೆಗಳಿಗೆ ಡಿವೈಎಸ್ಪಿ ಮಹೇಶ್ವರಗೌಡ ನೇತೃತ್ವದಲ್ಲಿ ಪೊಲೀಸರು ಇತ್ತೀಚೆಗೆ ದಾಳಿ ಮಾಡಿ, ಶಸ್ತ್ರಾಸ್ತ ಹುಡುಕಾಟ ನಡೆಸಿದರು.

‘ಪೊಲೀಸರು ಪ್ರತಿಯೊಬ್ಬ ರೌಡಿಶೀಟರ್‌ ವಿಚಾರಣೆ ನಡೆಸಿದ್ದು, ಶಸ್ತಾಸ್ತ್ರ ಇಟ್ಟುಕೊಂಡಿದ್ದೇ ಆದಲ್ಲಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು. ಯಾವುದೇ ರೀತಿಯಲ್ಲಿ ಕಾನೂನು– ಸುವ್ಯವಸ್ಥೆಗೆ ಭಂಗ ಉಂಟು ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸುವುದಾಗಿ ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಡಿವೈಎಸ್‌ಪಿ ಮಹೇಶ್ವರಗೌಡ ಮಾಹಿತಿ ನೀಡಿದರು.

ಪಿಎಸ್‌ಐ ಶರಣಗೌಡ ಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.