ADVERTISEMENT

`ವಚನ ಸಾಹಿತ್ಯ ಶ್ರೀಮಂತ ಜನಪರ ಸಾಹಿತ್ಯ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 5:45 IST
Last Updated 6 ಸೆಪ್ಟೆಂಬರ್ 2013, 5:45 IST

ಮುದ್ದೇಬಿಹಾಳ: ಯಾವುದೋ ಗುಂಗಿನಲ್ಲಿರುವ ನಾವು ನೂರೆಂಟು ಕೆಲಸಗಳ ಮಧ್ಯೆ ಭ್ರಮಾಲೋಕದಲ್ಲಿ ಮುಳುಗಿದ್ದೇವೆ ಎಂದು ಮುಂಡರಗಿಯ ಬೆಲ್ಲದ ಕಾಲೇಜಿನ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಹೇಳಿದರು.

ಅವರು ಬುಧವಾರ ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನ ದಲ್ಲಿ `ಮನೆಯಲ್ಲಿ ಮಹಾಮನೆ' ಬಳಗ ದವರು ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಕಾಲ ಹಮ್ಮಿಕೊಂಡಿದ್ದ ಶರಣ ಶ್ರಾವಣ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು.

ಜನ ಸಾಮಾನ್ಯರಿಗೆ ತಿಳಿಯುವ ಭಾಷೆ ಯಲ್ಲಿ ಬರೆದ ವಚನ ಸಾಹಿತ್ಯಕ್ಕೆ ಒಂದು ಸಾವಿರ ವರ್ಷಗಳ ಇತಿಹಾಸವಿದ್ದು, ಜಗತ್ತಿನ ಯಾವ ಸಾಹಿತ್ಯವೂ ಇಷ್ಟೊಂದು ಶ್ರೀಮಂತವೂ ಹಾಗೂ ಜನಪರವಾಗಿಲ್ಲ. ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಒಯ್ದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.

ಪ್ರೊ.ಕೆ.ವೈ. ನವಲಗುಂದ ಮಾತ ನಾಡಿ, ಪ್ರಸ್ತುತ ಸಮಾಜಕ್ಕೆ ಮಾರ್ಗ ದರ್ಶಿಗಳ ಕೊರತೆ ಕಾಡುತ್ತಿದೆ. ಎಲ್ಲ ಕ್ಷೇತ್ರಗಳೂ ಪ್ರಾಮಾಣಿಕರ ಕೊರತೆ ಯಿಂದ ಬಳಲುತ್ತಿವೆ. ಈಗಿನ ಎಲ್ಲ ಸಮಸ್ಯೆಗಳಿಗೆ 12ನೇ ಶತಮಾನದ ಶರಣರ ವಚನಗಳಲ್ಲಿ ಪರಿಹಾರವಿದೆ. ಶರಣ ಪಥ, ಬಸವ ಪಥ ನಮಗೆ ಬೇಕಾಗಿದೆ. ಸಮಸ್ಯೆ ಪರಿಹಾರಕ್ಕೆ ವಿಧಾನಸಭೆ, ಸಂಸತ್ತು ಬೇಕಾಗಿಲ್ಲ. ಶರಣರ ವಚನಗಳ ಮೌಲ್ಯಗಳೇ ಸಾಕು ಎಂದರು.

ಹಿರಿಯ ಸಾಹಿತಿ ಪ್ರೊ.ಬಿ.ಎಂ. ಹಿರೇಮಠ, ಅಧ್ಯಕ್ಷತೆ ವಹಿಸಿದ್ದ ತಾಳಿಕೋಟಿಯ ಗಣ್ಯ ವರ್ತಕ ಎಸ್.ಪಿ. ಸರಶೆಟ್ಟಿ ಮಾತನಾಡಿದರು. ರಾಚಪ್ಪ ಸಂಗಪ್ಪ ಕಲಬುರ್ಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಾಸೋಹ ನಡೆಸಿಕೊಟ್ಟ ಕರ್ನಾಟಕ ಬ್ಯಾಂಕ್ ಉಪಾಧ್ಯಕ್ಷ ಪ್ರಭುರಾಜ ಕಲಬುರ್ಗಿ ಹಾಗೂ ಕಾರ್ಯಕ್ರಮಕ್ಕೆ ನಿರಂತರ ನೆರವು ನೀಡಿದ ಎಂ.ಟಿ.ಪಾಟೀಲ, ಅಶೋಕ ಮಣಿ, ಎಚ್.ಬಿ.ದಳವಾಯಿ, ಎಸ್.ಕೆ.ಕತ್ತಿ, ಬಸವರಾಜ ಲಿಂಗದಳ್ಳಿ, ಬಸವರಾಜ ನಾಲತವಾಡ ದಂಪತಿಯನ್ನು ಹಾಗೂ ಸಂಗೀತ ಸೇವೆ ನೀಡಿದ ಚಂದ್ರಶೇಖರ ಪತ್ತಾರ, ಶಾಂತಿಪ್ರಿಯ ಡಂಬಳ, ಬಸವರಾಜ ಹುನಗುಂದ ಅವರನ್ನು ಒಂದು ತಿಂಗಳು ಅನುಭಾವ ನೀಡಿದ ಅನುಭಾವಿಗಳನ್ನು ಹಾಗೂ ಸ್ಥಳ ದಾಸೋಹಿಗಳನ್ನು ಸನ್ಮಾನಿಸಲಾಯಿತು.
ಬಿ.ಜಿ.ಕೆರೆಯ ವೇ.ಫಾಲಾಕ್ಷ ಶಾಸ್ತ್ರಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಾಪುಗೌಡ ಪಾಟೀಲ, ಬಿ.ಎಂ. ರಾಂಪೂರ ಅವರಿಂದ ವಚನ ಗಾಯನ ನಡೆಯಿತು. ಬಸವರಾಜ ನಾಲತವಾಡ ಸ್ವಾಗತಿಸಿದರು. ಅಶೋಕ ಮಣಿ ನಿರೂಪಿಸಿದರು. ಎಸ್.ಬಿ. ಬಂಗಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.