ADVERTISEMENT

ವಿಜಯಪುರ ವಿಕಾಸಕ್ಕೆ ಮುನ್ನುಡಿ..!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 9:54 IST
Last Updated 11 ಅಕ್ಟೋಬರ್ 2017, 9:54 IST

ವಿಜಯಪುರ: ನವ ಕರ್ನಾಟಕ ಹೇಗಿರಬೇಕು? ವಿಜಯಪುರದ ವಿಕಾಸಕ್ಕೆ ಪೂರಕವಾದ ಅಭಿವೃದ್ಧಿ ಯೋಜನೆಗಳು ಹೇಗೆ ರೂಪಿತವಾಗಬೇಕು? ಸಂಪನ್ಮೂಲಗಳ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಜಿಲ್ಲೆಯ ಜನರು, ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಕನಸು ಹಂಚಿಕೊಂಡರು...

ನವ ಕರ್ನಾಟಕ ವಿಷನ್- 2025ರ ಪ್ರಯುಕ್ತ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಭಿಪ್ರಾಯ ಸಂಗ್ರಹಣೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು, ವಿಜಯಪುರ ನಗರಾಭಿವೃದ್ಧಿ ಚಿಂತಕರು, ಪಾಲಿಕೆ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ಮಾಜಿ ಜನಪ್ರತಿನಿಧಿಗಳು ವಿಜಯಪುರ ಅಭಿವೃದ್ಧಿಯ ಬಗ್ಗೆ ತಮ್ಮ ವಿಚಾರ–ಅನಿಸಿಕೆ ಹಂಚಿಕೊಂಡರು.

ತಮ್ಮ ಕನಸು (ವಿಷನ್) ಹೇಳುವ ಮೂಲಕ ಅಭಿಪ್ರಾಯ ಸಂಗ್ರಹಣೆಗೆ ಚಾಲನೆ ನೀಡಿದ ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ, ‘ಅಭಿವೃದ್ಧಿಗೆ ವಿಶಾಲ ಅರ್ಥವಿದೆ. ನಗರದ ಸೌಂದರ್ಯೀಕರಣ, ರಸ್ತೆಗಳ ಅಭಿವೃದ್ಧಿಯ ಜತೆಗೆ ನನ್ನದು ಒಂದು ಕನಸಿದೆ’ ಎಂದರು.

ADVERTISEMENT

‘ಒಬ್ಬ ವ್ಯಕ್ತಿ ಜನನ ಪ್ರಮಾಣಪತ್ರ ಪಡೆದುಕೊಳ್ಳಲು ಒಂದು ಇಲಾಖೆಗೆ, ನಂತರ ವೋಟಿಂಗ್ ಕಾರ್ಡ್‌ನಲ್ಲಿ ಹೆಸರು ನೋಂದಣಿಗೆ ಮತ್ತೊಂದು ಇಲಾಖೆಗೆ, ಬೇರೆ- ಬೇರೆ ಸೌಲಭ್ಯ ಪಡೆಯಲು ಸಂಬಂಧಿಸಿದ ಇಲಾಖೆಗೆ, ಸೇವಾ ನಿವೃತ್ತಿಯ ನಂತರ ಪಿಂಚಣಿಗಾಗಿ ಬೇರೊಂದು ಇಲಾಖೆಗೆ ಪತ್ರ ವ್ಯವಹಾರ, ಅಲೆದಾಟ ಮಾಡಿ ಕಾರ್ಡ್‌ ಅಥವಾ ನೋಂದಣಿ ಪ್ರಕ್ರಿಯೆ ನೆರವೇರಿಸಬೇಕಾಗುತ್ತದೆ.

ಇದರಿಂದ ಸಮಯ ವ್ಯರ್ಥವಾಗುವ ಜತೆಗೆ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಆನ್‌ಲೈನ್‌ ಮೂಲಕ ಈ ಎಲ್ಲ ಪ್ರಕ್ರಿಯೆ ನಿರ್ವಹಿಸಬೇಕು.
‘ಒಬ್ಬ ವ್ಯಕ್ತಿ ಜನ್ಮ ತಾಳಿದಾಗ ಆತನಿಗೆ ಜನನ ಪ್ರಮಾಣಪತ್ರ ನೋಂದಾಯಿತವಾಗಬೇಕು, 18 ವರ್ಷ ಪೂರೈಸುತ್ತಿದ್ದಂತೆ ಮತದಾರನ ಪಟ್ಟಿಯಲ್ಲಿ ಆತನ ಹೆಸರು ದಾಖಲಾಗಬೇಕು.

ಸೇವೆಗೆ ಸೇರಿದಾಗ, ನಿವೃತ್ತಿಯಾದಾಗ ತಾನೇ ಅಪಡೇಟ್ ಆಗುವಂತಹ ವ್ಯವಸ್ಥೆ ಜಾರಿಯಾಗಬೇಕು’ ಎಂದು ಬಾಗವಾನ ತಮ್ಮ ಕನಸು ಹಂಚಿಕೊಂಡರು. ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ ಸಹ ತಮ್ಮ ಕನಸು ಹಂಚಿಕೊಂಡರು. ಸರ್ಕಾರ ಸೌಲಭ್ಯಗಳನ್ನು ರೂಪಿಸುತ್ತದೆ. ಆದರೆ ಅವುಗಳ ಪ್ರಯೋಜನ ಫಲಾನುಭವಿಗೆ ಸಿಕ್ಕಾಗ ಮಾತ್ರ ಆ ಯೋಜನೆ ಸಾರ್ಥಕವಾಗಲು ಸಾಧ್ಯ.

ಸೀಮಿತ ಪ್ರದೇಶಗಳಲ್ಲಿ ಬೆಳೆಯುವ ಆಹಾರ ಧಾನ್ಯ, ತೋಟಗಾರಿಕೆ ಬೆಳೆಗಳ ಬಗ್ಗೆಯೇ ವಿಶೇಷ ಸಂಶೋಧನೆ ನಡೆಸಲು ಸಂಶೋಧನಾ ಕೇಂದ್ರಗಳ ಸ್ಥಾಪನೆಯಾಗಬೇಕು’ ಎಂಬುದು ನನ್ನ ಆಶಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉನ್ನಿಕೃಷ್ಣನ್ ವಿಷನ್–2025 ಕುರಿತಂತೆ ವಿವರಣೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್ ಮೊಹಸೀನ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಸಿಇಓ ಎಂ.ಸುಂದರೇಶಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪಕುಮಾರ್‌ ಆರ್‌.ಜೈನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.