ADVERTISEMENT

ವಿದ್ಯುತ್‌ ಉತ್ಪಾದನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಮೇ 2014, 10:18 IST
Last Updated 29 ಮೇ 2014, 10:18 IST
ಆಲಮಟ್ಟಿ ಸಮೀಪದ ಅಂಗಡಗೇರಿ ಶ್ರೀ ಪವಾಡಬಸವೇಶ್ವರ ದೇವಾಲಯ ಆವರಣದಲ್ಲಿ ನಡೆದ ಕೂಡಗಿ ಶಾಖೋತ್ಪನ್ನ ವಿರೋಧ ಸಭೆಯಲ್ಲಿ ವಿವಿಧ ರೈತರು ಮಾತನಾಡಿದರು.
ಆಲಮಟ್ಟಿ ಸಮೀಪದ ಅಂಗಡಗೇರಿ ಶ್ರೀ ಪವಾಡಬಸವೇಶ್ವರ ದೇವಾಲಯ ಆವರಣದಲ್ಲಿ ನಡೆದ ಕೂಡಗಿ ಶಾಖೋತ್ಪನ್ನ ವಿರೋಧ ಸಭೆಯಲ್ಲಿ ವಿವಿಧ ರೈತರು ಮಾತನಾಡಿದರು.   

ಆಲಮಟ್ಟಿ: ಕೂಡಗಿ ಬಳಿ ಕೇಂದ್ರ ಸರ್ಕಾರ ಸೌಮ್ಯದ ಎನ್‌ಟಿಪಿಸಿ ಸ್ಥಾಪಿಸುತ್ತಿರುವ ಶಾಖೋತ್ಪನ್ನ ಘಟಕ ನಿರ್ಮಾಣ ವಿರೋಧಿಸಿ ಜೂನ್‌ ಎರಡನೇ ವಾರದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಅಂಗಡಗೇರಿಯಲ್ಲಿ ಸೇರಿದ್ದ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು. ಅಂಗಡಗೇರಿಯ ಪವಾಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ 12 ಕ್ಕೂ ಹೆಚ್ಚು ಗ್ರಾಮಗಳ 150 ಕ್ಕೂ ಅಧಿಕ ಜನರಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಲ್ಲದೇ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಸುಪ್ರಿಂಕೋರ್ಟ್‌ನಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ನಿವೃತ್ತ ಅಣುವಿಜ್ಞಾನಿ ಎಂ.ಪಿ. ಪಾಟೀಲ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಸಭೆ ತೀರ್ಮಾನಿಸಿತು. ನೀರಾವರಿ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ, ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕಾಶೀನಾಥ ಸಿಂಧೂರ, ಬಾಬು ಬೆಲ್ಲದ, ಮುರಗೇಶ ಹೆಬ್ಬಾಳ, ರುದ್ರಗೌಡ ಪೊಲೀಸ್‌ಪಾಟೀಲ, ರಮೇಶ ಕುಂಬಾರ ಮೊದಲಾದವರು ಮಾತನಾಡಿ, ಪರಿಸರಕ್ಕೆ ಹಾನಿಯಾಗುವ ಈ ಘಟಕ ನಿರ್ಮಾಣದಿಂದ ಉತ್ಪತ್ತಿಯಾಗುವ ಹಾರು ಬೂದಿಯಿಂದ ಸುತ್ತಮುತ್ತಲಿನ ಸುಮಾರು 40 ಕಿ.ಮೀ. ವರೆಗಿನ ಭೂಮಿಯ ಫಲವತ್ತತೆ ಕಡಿಮೆಯಾಗಲಿದೆ.

ಮಹಾರಾಷ್ಟ್ರದ ಚಂದ್ರಾಪುರ ಬಳಿ ಹಾರೂಬೂದಿಯಿಂದ ಸುಮಾರು 30 ಕಿ.ಮೀ. ವ್ಯಾಪ್ತಿಯ ಭೂಮಿ ಬಂಜರು ಭೂಮಿಯಾಗುತ್ತಿದೆ. ಎನ್‌ಟಿಪಿಸಿ ಕೂಡಗಿ ಬಳಿ ಸ್ಥಾಪಿಸುತ್ತಿರುವ ಘಟಕದಲ್ಲಿ 230 ಮೀಟರ್ ಎತ್ತರದವರೆಗೆ ಚಿಮಣಿ ನಿರ್ಮಿಸುತ್ತಿದೆ. ಇದರಿಂದ ಹಾರುಬೂದಿ ಬಹು ವಿಶಾಲ ಪ್ರದೇಶಕ್ಕೆ ಹಂಚಿಕೆಯಾಗುತ್ತದೆ ಎಂದು ಅವರು ಆರೋಪಿಸಿದರು.

ಪರಿಸರ ಮಾರಕ ಈ ಘಟಕ ನಿರ್ಮಾಣಕ್ಕೆ ಎನ್‌ಟಿಪಿಸಿ ಜೊತೆ ಎಲ್ಲಾ ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ.  ರಾಜಕಾರಣಿಗಳನ್ನು, ಜನಪ್ರತಿನಿಧಿಗಳನ್ನು ಹೊರತುಪಡಿಸಿ ಈ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದರು. ಛತ್ತಿಸಗಡದಿಂದ ಕಲ್ಲಿದ್ದಲು ತರಿಸಿ ಕೂಡಗಿ ಬಳಿ ಶಾಖೋತ್ಪನ್ನ ಘಟಕವನ್ನು ಆರಂಭಿಸುವುದರ ಬದಲು ಛತ್ತಿಸಗಡದಲ್ಲಿಯೇ ಶಾಖೋತ್ಪನ್ನ ಘಟಕ ಸ್ಥಾಪಿಸಿದರೇ ಏನಾಗುತ್ತಿತ್ತು? ಎಂದು ಅವರು ಪ್ರಶ್ನಿಸಿದರು. ಈಗ ಕೈಗೊಳ್ಳುವ ಹೋರಾಟ ನಿರಂತರವಾಗಿ ನಡೆಸಲಾಗುವುದು, ಯಾವುದೇ ಒತ್ತಡಕ್ಕೂ ಒಳಗಾಗದೇ ಹೋರಾಟ ನಡೆಸುತ್ತೇವೆ ಎಂದರು.

ರೈತ ವಿರೋಧಿ ಕಂಪೆನಿ: ಕೂಡಗಿ ಭಾಗದ ಜಮೀನು ವ್ಯವಸಾಯಕ್ಕೆ ಯೋಗ್ಯವಲ್ಲ ಎಂದು ಸುಳ್ಳು ಪ್ರಮಾಣಪತ್ರವನ್ನು ಎನ್‌ಟಿಪಿಸಿ ಸುಪ್ರಿಂಕೋರ್ಟ್‌ನ ಹಸಿರು ಪೀಠಕ್ಕೆ ನೀಡಿದೆ, ಫಲವತ್ತಾದ ಭೂಮಿ, ಜನ, ಜಾನುವಾರುಗಳಿಗೆ ಮಾರಕವಾಗುವ ಎಲ್ಲಾ ಕೈಗಾರಿಕೆಗಳನ್ನು ರದ್ದುಗೊಳಿಸಲು ಹಸಿರುಪೀಠ ಸೂಚಿಸುತ್ತದೆ. ಆದರೆ ಎನ್‌ಟಿಪಿಸಿ ತಪ್ಪು ಮಾಹಿತಿ ನೀಡಿ ಕಾಮಗಾರಿ ಆರಂಭಕ್ಕೆ ಅನುಮತಿ ಪಡೆದಿದೆ ಎಂದು ಮುಖಂಡ ಜಿ.ಸಿ. ಮುತ್ತಲದಿನ್ನಿ ಆರೋಪಿಸಿದರು.

ಆಲಮಟ್ಟಿ ಜಲಾಶಯದಿಂದ 5 ಟಿಎಂಸಿ ಅಡಿ ನೀರನ್ನು ರಾಜ್ಯ ಸರ್ಕಾರ ಎನ್‌ಟಿಪಿಸಿಗೆ ಉಚಿತವಾಗಿ ನೀಡುತ್ತಿದೆ. 5 ಟಿಎಂಸಿ ಅಡಿ ನೀರಿನಿಂದ ಪ್ರತಿವರ್ಷ 50 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಡುತ್ತಿತ್ತು. ಎನ್‌ಟಿಪಿಸಿಯಿಂದ ರಾಜ್ಯ ಸರ್ಕಾರ ವಿದ್ಯುತ್‌ನ್ನು ದುಡ್ಡು ಕೊಟ್ಟು ಖರೀದಿಸುತ್ತದೆ, ಉಚಿತವಾಗಿ ನೀರನ್ನು ನೀಡುವ ಅಗತ್ಯವಾದರೂ ಏನಿತ್ತು ?ಎಂದು ಮುತ್ತಲದಿನ್ನಿ ಪ್ರಶ್ನಿಸಿದರು.

ಮುತ್ತಗಿಯ ಶ್ರೀ ವೀರರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಾಬು ಬೆಲ್ಲದ, ಶಿವಶಂಕರ ಕುಳಗೇರಿ, ರಂಗನಗೌಡ ಕುಳಗೇರಿ, ಸಂಗನಗೌಡ ಕುಳಗೇರಿ, ಪರಶುರಾಮ ಚಲವಾದಿ, ಮಲ್ಲನಗೌಡ ಪಾಟೀಲ, ಶಿವನಗೌಡ ಪಾಟೀಲ, ಎಚ್‌.ಎಸ್‌. ಗುರಡ್ಡಿ ಉಪಸ್ಥಿತರಿದ್ದರು. ಕೂಡಗಿ, ತೆಲಗಿ, ಅಂಗಡಗೇರಿ, ಬೇನಾಳ, ಚೀರಲದಿನ್ನಿ, ಬೀರಲದಿನ್ನಿ, ಗೊಳಸಂಗಿ, ಬೇನಾಳ, ಹುಣಶ್ಯಾಳ, ವಂದಾಲ, ಗುಡದಿನ್ನಿ, ಚಿಮ್ಮಲಗಿ, ಮಲಘಾಣ, ಮಸೂತಿ, ಬುದ್ನಿ, ಕವಲಗಿ, ಮುತ್ತಗಿ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT