ADVERTISEMENT

ಸಂಚಾರಿ ನ್ಯಾಯಾಲಯ: ಮನೆ ಬಾಗಿಲಿಗೆ ನ್ಯಾಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 6:50 IST
Last Updated 21 ಏಪ್ರಿಲ್ 2011, 6:50 IST

ಕೊಲ್ಹಾರ: ಸಂಚಾರಿ ನ್ಯಾಯಾಲಯಗಳು ಜನರ ಮನೆ ಬಾಗಿಲಿಗೆ ನ್ಯಾಯ ಒದಗಿಸುತ್ತಿವೆ. ಇದರಿಂದ ಜನರ ಅಮೂಲ್ಯ ಸಮಯ ಉಳಿತಾಯವಾಗುತ್ತದೆ,  ಸ್ಥಳೀಯ ಮಟ್ಟದಲದಲ್ಲೇ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲೂ ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮೋಹನ ಪ್ರಭು ಹೇಳಿದರು. ಬೆಂಗಳೂರಿನ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಪಟ್ಟಣದ ಮಾದರಿ ಶಾಲಾ ಆವರಣದಲ್ಲಿ ನಡೆದ ಸಂಚಾರಿ ಜನತಾ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ರಥಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಮೂಡಿಸುವುದಕ್ಕಾಗಿ ಪ್ರಾಧಿಕಾರ ಜಾರಿಗೆ ತಂದಿರುವ ಸಂಚಾರಿ ನ್ಯಾಯಾಲಯದಲ್ಲಿ ಜನರು ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಪಡಿಸಿಕೊಂಡು ಸಹಬಾಳ್ವೆ ನಡೆಸಬೇಕೆಂದು ಹೇಳಿದರು. ವಕೀಲರಾದ ಆರ್.ವಿ.ಗುತ್ತರಗಿಮಠ ಕಾರ್ಮಿಕರ ಸೌಲಭ್ಯಗಳು ಹಾಗೂ ಬಿ.ಆರ್.ಅಡ್ಡೋಡಗಿ ಅಪರಾಧಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ದಿಗಂಬರಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್.ಎಂ. ಚಿಂಚೋಳಿ, ವಕೀಲರಾದ ವಿ.ಬಿ.ಮರ್ತೂರಕರ, ಬಿ.ಜೆ.ಪಿ. ಯುವ ಧುರೀಣ ಸಂಗರಾಜ ದೇಸಾಯಿ, ತಾ.ಪಂ.ಸದಸ್ಯ ಕಲ್ಲಪ್ಪ ಸೊನ್ನದ, ಗ್ರಾ.ಪಂ. ಉಪಾಧ್ಯಕ್ಷ ಈರಯ್ಯ ಮಠಪತಿ, ಟಿ.ಟಿ.ಹಗೇದಾಳ, ಕೊಲ್ಹಾರ ಪೊಲೀಸ್ ಠಾಣೆಯ ಎಸ್.ಐ. ಎಸ್. ಬಿ. ಮಾಳಗೊಂಡ, ಬಸು ಚವಡಪ್ಪಗೊಳ, ಎಸ್.ಎ. ಯರನಾಳ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.