ADVERTISEMENT

ಸಮುದಾಯ ಒಗ್ಗಟ್ಟು ಅಭಿವೃದ್ಧಿ ಸಂಕೇತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 6:20 IST
Last Updated 19 ಸೆಪ್ಟೆಂಬರ್ 2011, 6:20 IST

ಚಡಚಣ:`ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು. ಹಿಂದೂ-ಮುಸ್ಲಿಂ ಎಂಬ ಭೇದ-ಭಾವ ಮರೆತು ಒಗ್ಗಟ್ಟಿನಿಂದ ಗ್ರಾಮಸ್ಥರು ಸರ್ಕಾರದ ಯೋಜನೆ ಗಳನ್ನು ಸದುಪಯೋಗಪಡಿಸಿಕೊಂ ಡಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ~ ಎಂದು ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯಪಟ್ಟರು.

ಸ್ಥಳೀಯ ಈದ್ಗಾ ಮೈದಾನದಲ್ಲಿ ಶನಿವಾರ ಅಡಿಗಲ್ಲನ್ನಿರಿಸಿ ಅವರು ಮಾತನಾಡಿದರು.
ನಾನು ಅತ್ಯಂತ ಬಡ ಕುಟುಂಬದಿಂದ ಬಂದವ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಸಮಾಜದಲ್ಲಿ, ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆ. ಬಡವರ, ದೀನ ದಲಿತರ ಸೇವೆಯಲ್ಲಿ ತೃಪ್ತಿ ಇದೆ. ವೋಟಿಗಾಗಿ ನಾನು ದುಡಿಯುತ್ತಿಲ್ಲ. ದೇವರನ್ನು ನಂಬಿ ಕೆಲಸ ಮಾಡುತ್ತಿದ್ದೇನೆ ಎಂದರು.

ಈದಗಾ ಮೈದಾನದ ಅಭಿವೃದ್ಧಿಗೆ ತಮ್ಮ ಅನುದಾನದಲ್ಲಿ ರೂ 3 ಲಕ್ಷ ನೀಡುವದಲ್ಲದೆ, ಚಡಚಣದಲ್ಲಿ ದಲಿತರ ಕಲ್ಯಾಣ ಮಂಟಪಕ್ಕೆ ರೂ. 10 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ. ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಪಟ್ಟಣದ ಸಮಗ್ರ ಅಭಿವೃದ್ದಿಗೆ ಕ್ರಿಯಾ ಯೋಜನೆ  ಸಿದ್ಧಗೊಳಿಸ ಲಾಗಿದೆ. ಶಾಸಕರ, ಸಂಸದರ ಸಹಕಾರದೊಂದಿಗೆ ಪಟ್ಟಣವೂ ಸೇರಿದಂತೆ ಮತಕ್ಷೇತ್ರದ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಯತ್ನ ಮಾಡುವುದಾಗಿ ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ರಾಜ್ಯದ ಗಡಿ ಅಂಚಿನಲ್ಲಿ ರುವ ಚಡಚಣ ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದೆ.  ಚಡಚಣ ಗಾ.ಪಂ. ಅನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಹಾಗೂ ಚಡಚಣ ತಾಲ್ಲೂಕು ರಚನೆಗೆ ಸೂಕ್ತ ಕ್ರಮ ಕೈಗೊಳ್ಳ ಲಾಗಿದೆ.

ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಾಗೂ ಒಳ ಚರಂಡಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಝಳಕಿ-ಶಿರಾಡೋಣ ರಾಜ್ಯ ಹೆದ್ದಾರಿ ಪುನರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಇಷ್ಟರಲ್ಲಿಯೇ ಕಾಮಗಾರಿ ಆರಂಭವಾಗುವುದಾಗಿ ತಿಳಿಸಿದ ಅವರು, ಈದ್ಗಾ ನಿರ್ಮಾಣಕ್ಕೆ 20 ಲಕ್ಷ ರೂಪಾಯಿಗಳ ಅನುದಾನ ಒದಗಿಸುವ ವಾಗ್ದಾನ ಮಾಡಿದರು.

ಹಿರಿಯ ಕಾಂಗ್ರೆಸ್ ಮುಖಂಡ ಶೇರ್ ಅಲಿ ಮಕಾನದಾರ ಮಾತನಾಡಿದರು.ಜಿ.ಪಂ. ಸದಸ್ಯ ಆರ್.ಜಿ.ಪಾಟೀಲ, ತಾ.ಪಂ. ಸದಸ್ಯರಾದ ರಾಮ ಅವಟಿ, ಚಂದ್ರಶೇಖರ ನಿರಾಳೆ, ಅಶೋಕ ನಡಗಟ್ಟಿ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ದಿವಾನಸಾಬ ಮುಲ್ಲಾ, ಮುಖಂಡರಾದ ಬಾಬುಗೌಡ ಪಾಟೀಲ, ಜಟ್ಟೆಪ್ಪ ಬನಸೋಡೆ, ವರ್ತಕರ ಮುಖಂಡ ಎಸ್.ಆರ್.ಅವಜಿ, ಡಾ.ಡಿ.ಬಿ. ಕಟಗೇರಿ, ಡಾ.ವಿ.ಎಸ್.ಪತ್ತಾರ, ವಕೀಲ ಎ.ಆರ್. ಕುಲಕರ್ಣಿ, ಅನ್‌ಹೆಲೆನ್ ಕಠವಠೆ, ಉಮೇಶ ಕೊಂಕಣಗಾಂವ, ಸಲೀಂ ಅರಕೇರಿ, ಮುರ್ತುಜ ನದಾಫ,ಸಿಕಂದರ ಸಾವಳಸಂಗ, ಗ್ರಾ.ಪಂ.ಸದಸ್ಯ ಪ್ರಭಾಕರ ನಿರಾಳೆ, ಸಂಗಮೇಶ ಮುಂಡೊಡಗಿ, ಗುಲಾಬ ಶೇಖ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಮುಖಂಡ ಐ.ಎಚ್. ಮಕಾನಾದರ ಸ್ವಾಗತಿಸಿದರು. ಶಿಕ್ಷಕ ಐ.ಎಂ. ಬೆಂದ್ರೇಕರ ಹಾಗೂ ಮಲ್ಲಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.