ADVERTISEMENT

ಸಿದ್ಧರಾಮನ ಮದುವೆ, ಭೋಗಿ ವೈಭವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 7:30 IST
Last Updated 15 ಜನವರಿ 2012, 7:30 IST

ವಿಜಾಪುರ: ಸಿದ್ಧೇಶ್ವರ ದೇವಸ್ಥಾನದ ಎದುರು ಶನಿವಾರ ಸಂಜೆ ಮದುವೆಯ ಸಂಭ್ರಮ. ತಮ್ಮ ಮಕ್ಕಳ ಮದುವೆ ಎಂಬಂತೆ ಭಕ್ತರು ಹೊಸ ಬಟ್ಟೆ ತೊಟ್ಟು, ಕೈಯಲ್ಲಿ ಅರಿಷಿಣ-ಕುಂಕುಮ, ಅಕ್ಷತೆಯ ಭರಣಿ ಹಿಡಿದುಕೊಂಡು  ಬಂಧು-ಬಾಂಧವರೊಂದಿಗೆ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.

ಸಿದ್ಧೇಶ್ವರ ದೇವಸ್ಥಾನದ ಎದುರು ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಸಿದ್ಧರಾಮನ ಯೋಗ ದಂಡದೊಂದಿಗೆ ಕುಂಬಾರ ಕನ್ಯೆ ಗುಂಡವ್ವಳ ಮದುವೆಯನ್ನು ಅವರೆಲ್ಲ ಸೇರಿ ನೆರವೇರಿಸಿದರು. ಎಲ್ಲರೂ ಅಕ್ಷತೆ ಹಾಕಿ ಹರಿಸಿದರು; ಮರುಕ್ಷಣವೇ ಸಮೃದ್ಧಿಗಾಗಿ ಪ್ರಾರ್ಥಿಸಿದರು!

ಮದುವೆ ಮಂಟಪದಲ್ಲಿ ಸಿದ್ಧರಾಮನ ಯೋಗದಂಡ ಹಾಗೂ ಕುಂಬಾರ ಕನ್ಯೆ ಗುಂಡವ್ವಳ ಮೂರ್ತಿ ಮದುಮಕ್ಕಳಾಗಿದ್ದರು. ಸಂಪ್ರದಾಯದಂತೆ ಪಂಚ ಕಮೀಟಿಯವರ ನೇತೃತ್ವದಲ್ಲಿ ಅಕ್ಷತಾರ್ಪಣೆ, ಭೋಗಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು. ಈ ವಿವಾಹ ಸಾಕ್ಷೀಕರಿಸಲು ಎಂಬಂತೆ ಸಪ್ತ ನಂದಿ ಧ್ವಜಗಳ ಭವ್ಯ ಮೆರವಣಿಗೆಯೂ ಜರುಗಿತು.

ಸಿದ್ಧರಾಮನ ಯೋಗ ದಂಡದ ವಿವಾಹಕ್ಕೆ ಹಿನ್ನೆಲೆಯೂ ಇದೆ. ಸೊನ್ನಲಗಿಯ ಸಿದ್ಧರಾಮ ಒಬ್ಬ ಯೋಗಿ, ಬ್ರಹ್ಮಚಾರಿ. ಅವರಿಗೆ ಅಪಾರ ಶಿಷ್ಯಬಳಗವಿತ್ತು. ಅವರ ಶಿಷ್ಯ ಬಳಗದ ಸದಸ್ಯೆಯಾಗಿದ್ದ ಕುಂಬಾರ ಗುಂಡವ್ವಳಿಗೆ ಸಿದ್ಧರಾಮರ ಬಗ್ಗೆ ಎಲ್ಲಿಲ್ಲದ ಪ್ರೀತಿ-ಗೌರವ.

`ನಿನ್ನನ್ನು ನಾನು ಮದುವೆಯಾಗುತ್ತೇನೆ~ ಎಂದು ತನ್ನ ಆರಾಧಕಿ ಗುಂಡವ್ವ ಹೇಳಿದಾಗ ಭಕ್ತೆಯ ಬಯಕೆಯನ್ನು ತಿರಸ್ಕರಿಸಲು ಸಿದ್ಧರಾಮರಿಗೆ ಆಗಲಿಲ್ಲ. ಹಾಗಂತ ಆ ಯೋಗಿ ಮದುವೆಯನ್ನೂ ಆಗುವಂತಿರಲಿಲ್ಲ. `ನನ್ನ ಬದಲು ನನ್ನ ಯೋಗದಂಡದೊಂದಿಗೆ ಮದುವೆಯಾಗು~ ಎಂದು ಸಿದ್ಧರಾಮ ಸಲಹೆ ನೀಡಿದರು.

ಅದಕ್ಕೆ ಒಪ್ಪಿದ ಗುಂಡವ್ವ ಅವರ ಯೋಗದಂಡದೊಂದಿಗೆ ವಿವಾಹವಾದಳು ಎಂಬುದು ಪ್ರತೀತಿ.
ಈ ಪೌರಾಣಿಕ ಘಟನೆಯ ಹಿನ್ನೆಲೆಯಲ್ಲಿ ಪ್ರತಿ ವರ್ಷ ಈ ಮದುವೆಯನ್ನು ನೆರವೇರಿಸಲಾಗುತ್ತಿದೆ.

ಪ್ರತಿ ವರ್ಷ ಜನವರಿ 14ರಂದೇ ಸಂಕ್ರಮಣ ಆಚರಿಸುವುದು ವಾಡಿಕೆ. ಆದರೆ, ಪಂಚಾಂಗದ ಪ್ರಕಾರ ಈ ವರ್ಷ ಸಿದ್ಧೇಶ್ವರ ಸಂಸ್ಥೆಯವರು ಇದೇ 15ರಂದು (ಭಾನುವಾರ) ಸಂಕ್ರಮಣ ಆಚರಿಸುತ್ತಿದ್ದಾರೆ. ಇದರ ಮುನ್ನಾದಿನವಾದ ಶನಿವಾರ ಭೋಗಿ ಕಾರ್ಯಕ್ರಮ ಜರುಗಿತು.

ಈ ವರ್ಷ ಭೋಗಿಯ ಖಾದ್ಯ ಹುಗ್ಗಿ ಬಂದಿತ್ತು. ಭಕ್ತರು ತಮ್ಮ ಮನೆಯಲ್ಲಿ ಹುಗ್ಗಿಯ ಅಡುಗೆ ಮಾಡಿ ತಾವೂ ಸವಿದು, ಮಿತ್ರರಿಗೂ ನೀಡಿ ಸಂಭ್ರಮಿಸಿದರು.

ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ (ಯತ್ನಾಳ) ನೇತೃತ್ವದಲ್ಲಿ ನಡೆದ ಅಕ್ಷತಾರ್ಪಣೆ ಮತ್ತು ಭೋಗಿ ಕಾರ್ಯಕ್ರಮದಲ್ಲಿ ವಿಜಯಕುಮಾರ ಇಜೇರಿ, ಎಸ್.ವಿ. ಹಕ್ಕಾಪಕ್ಕಿ, ಡಿ.ಕೆ. ದೇವೂರ, ಬಸವರಾಜ ಸೂಗೂರ, ಶಿವಾನಂದ ನೀಲಾ, ಎಂ.ಎಂ. ಸಜ್ಜನ, ನಿಂಗೊಂಡಪ್ಪ ಗೋಲಾಯಿ ಇತರರು ಪಾಲ್ಗೊಂಡಿದ್ದರು.

ನಂತರ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಬಾಲ ಕಲಾವಿದರಾದ ಐಶ್ವರ್ಯ ಅಕ್ಷಂತಿ, ಸ್ಪೂರ್ತಿ ಪಾಟೀಲ ಅವರಿಂದ ಭರತ ನಾಟ್ಯ, ಅಕಾಶವಾಣಿ ಕಲಾವಿದೆ ಶಶಿಕಲಾ ಕುಲಹಳ್ಳಿ ಅವರಿಂದ ಸುಗಮ ಸಂಗೀತ, ಚಿಕ್ಕಮಗಳೂರಿನ ಪ್ರಿಯಾ ಭಟ್, ಪ್ರೀಯಾಂಕಾ ಅವರಿಂದ ಶಿವ ತಾಂಡವ ಹಾಗೂ ವಚನ ನೃತ್ಯ ವೈಭವ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.