ADVERTISEMENT

ಸುಂಗಟಾನ ಸಿದ್ದಪ್ಪ ದೇವರ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 8:40 IST
Last Updated 17 ಮಾರ್ಚ್ 2012, 8:40 IST

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ಸುಂಗಟಾನ ಸಿದ್ದಪ್ಪ ದೇವರ ಪಲ್ಲಕ್ಕಿ ಉತ್ಸವ ಭಕ್ತಿ, ಶ್ರದ್ಧೆಯಿಂದ ನೆರವೇರಿತು.

ತಾಲ್ಲೂಕಿನ ಸರೂರ ಹಾಗೂ ಕೋಳೂರ ಗ್ರಾಮದಿಂದ ಗುರುವಾರ ಸಂಜೆ ಗ್ರಾಮಕ್ಕೆ ಆಗಮಿಸಿದ ದೇವರ ಪಲ್ಲಕ್ಕಿ ಹಾಗೂ ಸುಂಗಟಾನದಿಂದ ಬಂದ ಭಕ್ತರನ್ನು ತಂಗಡಗಿಯ ಸದ್ಭಕ್ತರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಮಹಿಳೆಯರು ಪಲ್ಲಕ್ಕಿ ಬರುವ ದಾರಿಗುಂಟ ನೀರು ಸುರಿದು ತಂಪು ಸೂಸಿದರು. ಕೆಲವು ಮಹಿಳೆಯರು ಹಾಗೂ ಪುರುಷರು ಪಲ್ಲಕ್ಕಿಯ ಕೆಳಗೆ ಮಲಗಿ ಭಕ್ತಿ ನಮನ ಸಲ್ಲಿಸಿದರು.

ನಂತರ ನೇರವಾಗಿ ಕುಂಚಗನೂರಗೆ ನಡೆದ ಸಿದ್ದಪ್ಪ ದೇವರ ಪಲ್ಲಕ್ಕಿಯು ಅಲ್ಲಿಯ ಕೃಷ್ಣಾ ನದಿ ತೀರದಲ್ಲಿ ಗಂಗಾ ಸ್ನಾನ ಮಾಡಲಾಯಿತು. ನಾಲ್ಕು ಸುತ್ತಿನ ಕಂಬಳಿಯಲ್ಲಿ ಸುಂಗಟಾನದಿಂದ ತಂದಿದ್ದ ದೇವರ ಕಲ್ಲುಗಳನ್ನು, ಬೆಳ್ಳಿ ಮೂರ್ತಿಗಳನ್ನು, ಬೆಳ್ಳಿ ದಂಡಗಳನ್ನು ತೊಳೆದು ಶುಚಿಗೊಳಿಸಲಾಗಿತ್ತು.

ದೇವರ ಮೂರ್ತಿಗಳನ್ನು ಅಂಬರಿ (ಹಳದಿ) ಹೂವಿನಲ್ಲಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಉತ್ಸವಕ್ಕೆ ಬಂದಿದ್ದ ಭಕ್ತರು ತಾವು ತಂದಿದ್ದ ಸಜ್ಜಿ ರೊಟ್ಟಿ, ಬಾನ, ಪುಂಡಿ ಪಲ್ಲೆ, ಕಡಬು ಹೋಳಿಗೆಗಳನ್ನು ಜೊತೆಗೆ ಮದ್ಯದ ಬಾಟಲಿಗಳನ್ನೂ ಸಹ ದೇವರಿಗೆ ನೆವೇದ್ಯ ಮಾಡಲಾಯಿತು. ಅದೇ ಪ್ರಸಾದವನ್ನು ಎಲ್ಲ ಭಕ್ತರಿಗೂ ವಿತರಿಸಲಾಯಿತು.

ನದಿ ದಂಡೆಯ ಮೇಲೆ ಸ್ನಾನ ಮಾಡಿದ ಭಕ್ತರು ಅಲ್ಲಿಯೇ ಕುಳಿತು ತಾವು ತಂದಿದ್ದ ಬುತ್ತಿಯನ್ನು ಇತರರಿಗೆ ಸಹ ಹಂಚಿ ಸಹಭೋಜನ ಮಾಡಿದರು.

ತಂಗಡಗಿಗೆ ಬಂದ ಸಿದ್ದಪ್ಪ ದೇವರನ್ನು ಮಂಕಣಿಯವರ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಶುಕ್ರವಾರ ದಿನವಿಡೀ ದೇವರ ದರ್ಶನಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸದ್ಭಕ್ತರಿಗೆ ಗ್ರಾಮಸ್ಥರು, ವಿಶೇಷವಾಗಿ ಯುವಕರು ಸ್ವತ: ನಿಂತು ಪ್ರಸಾದ ವ್ಯವಸ್ಥೆ ಮಾಡಿದರು. ಚಿತ್ರಾನ್ನ, ಸಾರು, ಮಜ್ಜಿಗೆಯ ಅಂಬಲಿ ಪ್ರಸಾದವನ್ನು ಪ್ರೀತಿಯಿಂದ ಎಲ್ಲರಿಗೂ ಬಡಿಸುವ ಕೆಲಸ ನಡೆಯಿತು. ಇಡೀ ಗ್ರಾಮವೇ ಬಂದ ಸದ್ಭಕ್ತರನ್ನು ಪ್ರೀತಿಯಂದ ಆದರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದೆಂಬ  ಒತ್ತಾಯದ ಮಧ್ಯವೂ ಕೆಲವು ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯಿತು ಎಂಬುದು ಜನಪರ ಸಂಘಟನೆಗಳ ದೂರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.