ಕೊಲ್ಹಾರ: ಕಳೆದ ಒಂದು ತಿಂಗಳಿನಿಂದ ಉತ್ತರ ಭಾರತದ ಪ್ರವಾಸ ಕೈಗೊಂಡು ಉತ್ತರಾಖಂಡ ರಾಜ್ಯದ ಪ್ರಕೃತಿ ವಿಕೋಪ ದಲ್ಲಿ ಸಿಲುಕಿಕೊಂಡಿದ್ದ ಕೊಲ್ಹಾರದ ಯಾತ್ರಿಕರು ಬುಧವಾರ ಬೆಳಿಗ್ಗೆ ಸುರಕ್ಷಿತವಾಗಿ ಊರಿಗೆ ಬಂದಿಳಿದಿದ್ದಾರೆ.
ಮಂಗಳವಾರ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ಪ್ರವಾಸಿಗರು, ಮರುದಿನ ಬುಧವಾರ ರಾಜ್ಯ ಸರಕಾರವೇ ಯಾತ್ರಾರ್ಥಿಗಳ ಸಲುವಾಗಿ ಕಳುಹಿಸಿಕೊಟ್ಟ ಸಾರಿಗೆ ಬಸ್ ಮೂಲಕ ಸ್ವಗ್ರಾಮ ತಲುಪಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರೆಲ್ಲ ಇಲ್ಲಿನ ಯಲಗೂರೇಶ್ವರ ದೇವಾಲಯದ ಮುಂದೆ ಜಮಾಯಿಸಿ ಹೂಮಾಲೆ ಹಾಕಿ ಬರಮಾಡಿಕೊಂಡರು.
ಇಲ್ಲಿಯ ಬ್ರಾಹ್ಮಣ ಸಮಾಜದ ಜಯತೀರ್ಥ ನರಸಿಂಹ ಕಟ್ಟಿ ಹಾಗೂ ಅವರ ಪತ್ನಿ ಮಂಗಲಾ ಕಟ್ಟಿ ಮತ್ತು ಭೀಮಾಚಾರ್ಯ ಪಾಶ್ಚಾಪುರೆ ಮತ್ತು ಅವರ ಪತ್ನಿ ಕಮಲಾ ಪಾಶ್ಚಾಪುರೆ ಅವರು ಮೇ 30ರಿಂದ ಕೇದಾರನಾಥ, ಬದರಿ ಸಹಿತ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದರು.
`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಜಯತೀರ್ಥ ಕಟ್ಟಿ, `ಕೇದಾರನಾಥ ಯಾತ್ರೆಯು ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ದುಃಸ್ವಪ್ನ. ಅಲ್ಲಿ ದೇವಾಲಯವೊಂದನ್ನು ಬಿಟ್ಟು ಏನೂ ಉಳಿದಿಲ್ಲ. ನಮ್ಮ ಕಣ್ಣ ಮುಂದೆಯೇ ಸಾವಿರಾರು ಜನರು ಪ್ರವಾಹದಲ್ಲಿ ಕೊಚ್ಚಿ ಹೋದರು. ನಾವು ಎಲ್ಲರಿಗಿಂತ ಮೊದಲು ದೇವರ ದರ್ಶನ ಮಾಡಿ ಮುಂದೆ ಬಂದಿದ್ದರಿಂದ ಜೀವ ಸಹಿತ ಬದುಕಿದೆವು. ಎಲ್ಲ ದೇವರ ದಯೆ' ಎಂದರು.
`ನಮ್ಮ ಜೊತೆ ಬೇರೆ ಬೇರೆ ರಾಜ್ಯದ ಯಾತ್ರಾರ್ಥಿಗಳೂ ಇದ್ದರು. ನಾವೆಲ್ಲ ಒಂದು ವಾರ ಕಾಲ ಒಪ್ಪೊತ್ತಿನ ಊಟವಿಲ್ಲದೆ ಕಾಲ ಕಳೆದೇವು. ವಿಪರೀತ ಮಳೆ ಬಂದು ಒಮ್ಮೆಲೆ ಪ್ರವಾಹ ಉಂಟಾಗಿ ನಾವು ಹೋಗಬೇಕಾಗಿದ್ದ ರಸ್ತೆಯೇ ಮಾಯವಾಗಿ ಹೋಯಿತು. ಕಟ್ಟಡಗಳೆಲ್ಲ ಒಂದೊಂದಾಗಿ ಬೀಳತೊಡಗಿದವು. ರಸ್ತೆಯ ಮೇಲೆ ನಿಲ್ಲಿಸಿದ್ದ ಕಾರು ಸಹಿತ ಎಲ್ಲ ವಾಹನಗಳು ಆಟಿಕೆಯ ವಸ್ತುಗಳಂತೆ ನೀರಿನಲ್ಲಿ ತೇಲಿ ಹೋದವು. ಕೇದಾರನಾಥ ಪ್ರದೇಶ ದ್ವೀಪವಾಗಿ ಮಾರ್ಪಟ್ಟು ಎಲ್ಲಿ ನೋಡಿದರೂ ನೀರು, ನೀರಿನ ಸೆಳೆತಕ್ಕೆ ಸಿಕ್ಕವರ ಆರ್ತನಾದ, ಸಾವು, ನಾಶ..., ನಾವೆಲ್ಲ ಬದುಕಿ ಬಂದದ್ದೇ ಒಂದು ಪವಾಡ'
ನಮಗೆ ರಸ್ತೆ ಸಂಪರ್ಕ ಕಡಿದು ಹೋಗಿ ತೀವ್ರ ತೊಂದರೆಯುಂಟಾಯಿತು. ವಾತಾವರಣ ವಿಪರೀತ ತಂಪಾಗಿದ್ದರಿಂದ ನನ್ನ ಆಸ್ತಮಾ ಹೆಚ್ಚಾಗಿ ಆರೋಗ್ಯದಲ್ಲಿ ಏರು ಪೇರಾಯಿತು. ಜೋಶಿ ಮಠದಲ್ಲಿ ಹಾಗೂ ಪೇಜಾವರ ಮಠಗಳಲ್ಲಿ ನಮಗೆ ಆಶ್ರಯ ಸಿಕ್ಕಿದ್ದರಿಂದ ಅನುಕೂಲವಾಯಿತು. ನಾಲ್ಕು ಸಾವಿರ ರೂಪಾಯಿ ಕೊಟ್ಟು ತಂದಿದ್ದ ಗ್ಯಾಸ್ ಮುಗಿದು ಹೋಗಿ ಊಟಕ್ಕೆ ತಾಪತ್ರಯ ಉಂಟಾಯಿತು. ನಮ್ಮ ಬಳಿ ಉಳಿದದ್ದು ಬರೀ ಬಿಸ್ಕತ್‌ಗಳು ಮಾತ್ರ. ಅವುಗಳನ್ನು ತಿಂದೇ ದಿನದೂಡಿ ಬಂದೆವು ಎಂದು ತಿಳಿಸಿದರು.
ಇಲ್ಲಿನ ಯಲಗೂರೇಶ್ವರ ದೇವಾಲಯದಲ್ಲಿ ಗ್ರಾಮಸ್ಥರೆಲ್ಲ ವಿಶೇಷ ಪೂಜೆ ಮಾಡಿ ಪ್ರವಾಸಿ ದಂಪತಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಘೋತ್ತಮ ಅವಧಾನಿ, ರಂಗನಾಥ ಕುಲಕರ್ಣಿ, ಈರಯ್ಯ ಮಠಪತಿ, ಈರಣ್ಣಗೌಡ ಕೋಮಾರ, ಬಿ.ಆರ್. ಹಂಗರಗಿ, ಈರಪ್ಪ ಸೊನ್ನದ, ಈರಣ್ಣ ಔರಸಂಗ, ವಿವೇಕಾನಂದ ಹುಲ್ಯಾಳ, ಬಸಪ್ಪ ಸೊನ್ನದ, ಬಸವರಾಜ ಹಂಗರಗಿ, ಪರಶುರಾಮ ಗಣಿ, ಗಿರೀಶ ಕುಲಕರ್ಣಿ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.