ADVERTISEMENT

‘ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಿ; ಬೆಲೆ ಹೆಚ್ಚಿಸಿ’

ತೊಗರಿಗೆ ₨5,500 ಬೆಂಬಲ ಬೆಲೆಗಾಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 7:12 IST
Last Updated 23 ಡಿಸೆಂಬರ್ 2013, 7:12 IST

ವಿಜಾಪುರ: ತೊಗರಿ ಸೇರಿದಂತೆ ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಬೇಕು. ಪ್ರತಿ ಕ್ವಿಂಟಲ್‌ ತೊಗರಿಗೆ ₨5,500 ಬೆಂಬಲ ಬೆಲೆ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದರು.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಪ್ರತಿ ವರ್ಷ 50 ಲಕ್ಷ ಕ್ವಿಂಟಲ್‌ ತೊಗರಿ ಬೆಳೆಯಲಾಗುತ್ತಿದೆ. ದರ ಈಗ ₨3,700ಕ್ಕೆ ಕುಸಿದಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸಕ್ಕರೆ, ರೇಷ್ಮೆ, ಹಾಲಿನ ಉತ್ಪನ್ನ ಹಾಗೂ ಕೃಷಿ ಉತ್ಪನ್ನ, ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳ ಲಾಗುತ್ತಿದೆ. ಅದಕ್ಕೆ ಆಮದು ಸುಂಕ ವಿನಾಯಿತಿ ನೀಡುತ್ತಿರುವುದೇ ನಮ್ಮ ಉತ್ಪನ್ನಗಳ ಬೆಲೆ ಇಳಿಕೆಗೆ ಕಾರಣ. ಆಮದು ಸುಂಕವನ್ನು ಶೇ.30ಕ್ಕೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರ ತೊಗರಿಗೆ ₨4,300 ಬೆಂಬಲ ಬೆಲೆ ನಿಗದಿ ಮಾಡಿದ್ದು ಅವೈಜ್ಞಾನಿಕ. ಉತ್ಪಾದನೆ ವೆಚ್ಚ ಹೆಚ್ಚಾಗಿರುವುದರಿಂದ ಪ್ರತಿ ಕ್ವಿಂಟಲ್‌ಗೆ ₨1,200 ಪ್ರೋತ್ಸಾಹಧನ ನೀಡಿ ಒಟ್ಟಾರೆ ₨5,500 ದರ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿ  ಏಳು ಸಂಘಟನೆಗಳು ಹೋರಾಟ ಆರಂಭಿಸಿದ್ದು, ಇದೇ 30ರಂದು ಗುಲ್ಬರ್ಗದಲ್ಲಿ ರ್‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಗುಲ್ಬರ್ಗ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ, ‘ವಿದೇಶದಿಂದ ಆಮದು ಮಾಡಿಕೊಳ್ಳು ತ್ತಿರುವ ತೊಗರಿ ಚೀಲಗಳ ಮೇಲೆ ಇದು ಹಂದಿಯ ಆಹಾರ ಎಂಬ ಲೇಬಲ್‌ ಇದೆ. ವಿದೇಶದಲ್ಲಿ ಹಂದಿಗಳಿಗಾಗಿ ಬೆಳೆದ ತೊಗರಿಯನ್ನು ನಮ್ಮ ಕೇಂದ್ರ ಸರ್ಕಾರ ಆಮದು ಮಾಡಿಕೊಂಡು ಇಲ್ಲಿಯ ಜನತೆಗೆ ತಿನ್ನಿಸುತ್ತಿದೆ. ಅಷ್ಟೇ ಅಲ್ಲ, ಆಮದು ಸುಂಕದಲ್ಲಿ ಶೇ.15ರಷ್ಟು ರಿಯಾಯಿತಿಯನ್ನೂ ನೀಡುತ್ತಿದೆ’ ಎಂದು ದೂರಿದರು.

ಅಖಿಲ ಭಾರತ ಕಿಸಾನ್‌ ಸಭಾದ ಮೌಲಾ ಮುಲ್ಲಾ, ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಆಮದು ಸುಂಕದಲ್ಲಿ ಶೇ.70ರ ವರೆಗೆ ವಿನಾಯಿತಿ ನೀಡಿ ಆಹಾರ ಧಾನ್ಯಗಳನ್ನು ವಿದೇಶ ಗಳಿಂದ ಆಮದು ಮಾಡಿಕೊಳ್ಳಲಾಗು ತ್ತಿದೆ. ಇದರಿಂದಾಗಿ ನಮ್ಮ ರೈತರು ಬೆಳೆದ ಬೆಳೆಗೆ ಸೂಕ್ತ ದರ ದೊರೆಯುತ್ತಿಲ್ಲ ಎಂದರು.

ಇಂಡಿಯ ಮಾಜಿ ಶಾಸಕ ಎನ್‌.ಎಸ್‌. ಖೇಡ, ‘ಈ ದೇಶದಲ್ಲಿ ಕೃಷಿ ನೀತಿ ಇಲ್ಲದಿರುವುದೇ ಈ ಎಲ್ಲ ಅವಾಂತರಕ್ಕೆ ಕಾರಣ. ನೌಕರರು ಮುಷ್ಕರ ಮಾಡಿದರೆ ಅವರ ಬೇಡಿಕೆ ಈಡೇರಿಸಲಾಗುತ್ತದೆ. ಆದರೆ, ಬಹು ಸಂಖ್ಯಾತ ರೈತರ ಬೇಡಿಕೆಗಳನ್ನು  ಈಡೇ ರಿಸದಿರುವುದು ದುರಂತ’ ಎಂದರು.

ಭೀಮಾ ನದಿ ನೀರು ರಕ್ಷಣಾ ರೈತ ವರ್ಗ ಸಮಿತಿಯ ಅಧ್ಯಕ್ಷ ಪಂಚಪ್ಪ ಕಲಬುರ್ಗಿ, ‘ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಜೀವ ಸತ್ವ ಕೊರತೆ ಇರುವ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡು ಕಡಿಮೆ ದರದಲ್ಲಿ ನಮ್ಮ ಜನರಿಗೆ ಪೂರೈಸುತ್ತಿದೆ. ನಮಗೆ ಜೀವ ಸತ್ವ ಇರುವ ಆಹಾರ ಧಾನ್ಯವೂ ದೊರೆಯುತ್ತಿಲ್ಲ. ನಮ್ಮ ರೈತರೂ ಉದ್ಧಾರ ಆಗುತ್ತಿಲ್ಲ’ ಎಂದು ಹೇಳಿದರು.

ಇದೇ 30ರಂದು ಗುಲ್ಬರ್ಗದಲ್ಲಿ ನಡೆಯಲಿರುವ ತೊಗರಿ ಬೆಳೆಗಾರರ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಳ್ಳುತ್ತೇವೆ ಎಂದೂ ಹೇಳಿದರು.

ತೊಗರಿ, ಉದ್ದು, ಹೆಸರು, ಕಡಲೆ, ಬೇಳೆಕಾಳು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಬೇಕು.  ತೊಗರಿ ಮಂಡಳಿ ಯನ್ನು ಬೇಳೆಕಾಳು ಅಭಿವೃದ್ಧಿ ಮಂಡಳಿ ಎಂದು ಪುನರ್‌ ರಚಿಸಿ ಅದಕ್ಕೆ  ₨100 ಕೋಟಿ ಅನುದಾನ ನೀಡಬೇಕು ಮತ್ತು ರೈತರನ್ನು ಸದಸ್ಯರನ್ನಾಗಿ ಮಾಡಿಕೊಳ್ಳ ಬೇಕು. ತೊಗರಿ ಬೆಳೆಯ ಹೂವು ಉದುರಿ ಬೆಳೆ ನಾಶವಾಗುತ್ತಿದ್ದು, ಸಮೀಕ್ಷೆ ನಡೆಸಿ ನಷ್ಟಕ್ಕೆ ಪರಿಹಾರ ನೀಡಬೇಕು ಮತ್ತು ಬೆಳೆ ವಿಮೆ ಕೊಡಬೇಕು ಎಂದು ಈ ಎಲ್ಲ ಮುಖಂಡರು ಆಗ್ರಹಿಸಿದರು.

1966ರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾ ಗಿದೆ.  ವಿದೇಶಿ ಕಂಪೆನಿಗಳಿಗೆ ರತ್ನಗಂಬಳಿ ಸ್ವಾಗತ ಕೋರುವ, ರೈತ ವಿರೋಧಿ ಯಾದ ಈ ತಿದ್ದುಪಡಿ ಕೈಬಿಡಬೇಕು. ಡಾ.ಎಂ.ಎಸ್‌. ಸ್ವಾಮಿನಾಥನ್‌ ಶಿಫಾರಸಿನಂತೆ ಬೇಳೆಕಾಳುಗಳಿಗೆ ಪ್ರತಿ ಕ್ವಿಂಟಲ್‌ಗೆ ₨6,450 ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ಭೀಮಶಿ ಕಲಾದಗಿ, ಸಿದ್ರಾಮಪ್ಪ ರಂಜಣಗಿ, ಅರವಿಂದ ಕುಲಕರ್ಣಿ, ಎಸ್‌.ವಿ. ಪಾಟೀಲ, ಅಪ್ಪಾಸಾಹೇಬ ಯರನಾಳ, ವಿಠ್ಠಲ ಗೌಡ ಬಿರಾದಾರ, ಅರವಿಂದ ಹಿರೊಳ್ಳಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.