ADVERTISEMENT

15 ಶಾಸಕರು ರಾಜೀನಾಮೆ ನೀಡಲ್ಲ, ಬಿಜೆಪಿ ವ್ಯರ್ಥ ಪ್ರಯತ್ನ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 11:20 IST
Last Updated 2 ಜುಲೈ 2019, 11:20 IST
   

ವಿಜಯಪುರ:‘ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಕನಿಷ್ಠ 15 ಶಾಸಕರು ರಾಜೀನಾಮೆ ಕೊಡಬೇಕು. ಆದರೆ, ಅಷ್ಟು ಶಾಸಕರು ಯಾವ ಕಾಲಕ್ಕೂ ರಾಜೀನಾಮೆ ಕೊಡುವುದಿಲ್ಲ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಇನ್ನೂ ನಾಲ್ಕು ಜನ ಶಾಸಕರು ರಾಜೀನಾಮೆ ಕೊಡುವ ಬಗ್ಗೆ ಎಂ.ಬಿ.ಪಾಟೀಲ ಅವರಿಗೆ ಮಾಹಿತಿ ಇದೆ’ ಎಂಬ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿಕೋಟಾ ತಾಲ್ಲೂಕು ಸೋಮದೇವರಹಟ್ಟಿಯಲ್ಲಿ ಮಂಗಳವಾರ ತಿರುಗೇಟು ನೀಡಿದ ಅವರು, ‘ಈಶ್ವರಪ್ಪ ಅವರಷ್ಟು ಇಂಟೆಲಿಜೆನ್ಸ್‌ ನೆಟ್‌ವರ್ಕ್‌ ನಮ್ಮದಿಲ್ಲ. ಅವರು ದೊಡ್ಡವರು, ಮೇಧಾವಿಗಳು. ಹೀಗಾಗಿ ಈ ಬಗ್ಗೆ ಅವರನ್ನೇ ಕೇಳಿ’ ಎಂದು ಕುಟುಕಿದರು.

‘ಆನಂದಸಿಂಗ್, ರಮೇಶ ಜಾರಕಿಹೊಳಿ ರಾಜೀನಾಮೆ ಪತ್ರ ಕಳುಹಿಸಿದ ಮಾತ್ರಕ್ಕೆ ರಾಜೀನಾಮೆ ಅಂಗೀಕಾರ ಆಗುವುದಿಲ್ಲ. ಅವರು ಖುದ್ದಾಗಿ ಬಂದು ಸ್ಪೀಕರ್‌ಗೆ ರಾಜೀನಾಮೆ ಪತ್ರ ನೀಡಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಈಗ ಸಂಖ್ಯಾಬಲ ನಮ್ಮ ಕಡೆ ಇದೆ. ಹೀಗಾಗಿ ಅಧಿಕಾರ ನಡೆಸುತ್ತಿದ್ದೇವೆ. ನಾಲ್ಕು ವರ್ಷ ಸರ್ಕಾರ ಸುಭದ್ರವಾಗಿರುತ್ತದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆಯೇ’ ಎಂಬ ಪ್ರಶ್ನೆಗೆ, ‘ಈಗ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

‘ಎಂ.ಬಿ.ಪಾಟೀಲ ಸಿ.ಎಂ ಆಗಲಿ’
‘ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಅದೇ ರೀತಿ ಎಂ.ಬಿ.ಪಾಟೀಲ ಅವರಿಗೂ ಒಳ್ಳೆಯದಾಗಲಿ. ಅವರು ಕರ್ನಾಟಕದ ಮುಖ್ಯಮಂತ್ರಿ ಆಗಲಿ’ ಎಂದು ಗೋವಾ ವಿಧಾನಸಭೆ ಉಪ ಸಭಾಧ್ಯಕ್ಷ ಮೈಕಲ್ ಲೊಬೊ ಹೇಳಿದರು.

ಇದೇ ವೇಳೆ ಮಾತನಾಡಿದ ಪೌರಾಡಳಿತ ಸಚಿವ ಆರ್.ಶಂಕರ, ‘ದುರ್ಗಾದೇವಿ ಆಶೀರ್ವಾದದಿಂದ ಎಂ.ಬಿ.ಪಾಟೀಲ ಮುಖ್ಯಮಂತ್ರಿ ಆಗುತ್ತಾರೆ’ ಎಂದರು.

ಇಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ, ‘ಮೈಕಲ್ ಲೊಬೊ ನನ್ನ ಆತ್ಮೀಯ ಸ್ನೇಹಿತರು. ಅವರ ಪಕ್ಷ ಬೇರೆ, ನನ್ನ ಪಕ್ಷ ಬೇರೆ. ಸ್ನೇಹದ ಪ್ರತೀಕವಾಗಿ ಅವರು ಶುಭ ಹಾರೈಸಿದ್ದಾರೆ. ಇದಕ್ಕೆ ನೀವು ಈಗಲೇ ಬಣ್ಣ ಕೊಟ್ಟರೆ ಉಪಯೋಗವಿಲ್ಲ. ಒಂದಿಲ್ಲ ಒಂದು ದಿನ ಸಿ.ಎಂ ಆಗಬೇಕು ಎಂದು ಅವರು ಹೇಳಿದ್ದಾರೆ. ನಿಮಗೆ ಆಗೋದು ಬೇಡವಾ’ ಎಂದು ಸುದ್ದಿಗಾರರನ್ನು ಕಿಚಾಯಿಸಿದರು.

‘ನಾವು ಬಯಸಿದರೆ ಸಿ.ಎಂ ಆಗಲು ಆಗುವುದಿಲ್ಲ. ಜನರು ತೀರ್ಮಾನ ಮಾಡಬೇಕು. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು. ಪಕ್ಷ ನಿರ್ಣಯ ತೆಗೆದುಕೊಳ್ಳಬೇಕು. ಶಾಸಕರು ತೀರ್ಮಾನ ತೆಗೆದುಕೊಳ್ಳಬೇಕು. ಇದೆಲ್ಲ ಆದ ಮೇಲೆ ಮುಖ್ಯಮಂತ್ರಿ ಆಗೋದು. ಮಾಧ್ಯಮಗಳಿಗೆ ಇಂಥದ್ದೇ ಬೇಕು ಜಗಳ ಹಚ್ಚಲು’ ಎಂದು ಚಟಾಕಿ ಹಾರಿಸಿದರು.

‘ಆಪರೇಷನ್‌ನಿಂದ ಪ್ರಯೋಜನವಿಲ್ಲ’
‘ಆಪರೇಷನ್ ಕಮಲ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇದು ಬಿಜೆಪಿಯ ಹುಚ್ಚು ಆಸೆ ಅಷ್ಟೆ. ಅವರಿಗೆ ಬೇಕಾದಷ್ಟು ಸಂಖ್ಯಾಬಲ ಸಿಗುವುದಿಲ್ಲ’ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

‘ಇಬ್ಬರು ರಾಜೀನಾಮೆ ಕೊಟ್ಟರೆ ಏನೂ ಆಗುವುದಿಲ್ಲ. ಬಿಜೆಪಿಯವರು ಮೋಸದಿಂದ ರಾಜಕಾರಣ ಮಾಡುತ್ತ ಬಂದಿದ್ದಾರೆ. ಈ ನಾಲ್ಕು ವರ್ಷದಲ್ಲಿ ಬಿಜೆಪಿಯವರಿಗೆ ಅಧಿಕಾರ ನಡೆಸಲು ಆಗುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.