ADVERTISEMENT

ವಿಜಯಪುರ | ₹17 ಸಾವಿರ ಕೋಟಿ ಹೂಡಿಕೆ ಪ್ರಸ್ತಾಪ: ಎಂ.ಬಿ. ಪಾಟೀಲ

ಮುಳವಾಡದಲ್ಲಿ ರಿಲಯನ್ಸ್‌ ಕ್ಯಾಂಪಾಕೋಲಾ ಘಟಕ: ₹1,622 ಕೋಟಿ ಹೂಡಿಕೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 8:25 IST
Last Updated 5 ಆಗಸ್ಟ್ 2025, 8:25 IST
ಬೆಂಗಳೂರಿನ ಖನಿಜ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾತನಾಡಿದರು
ಬೆಂಗಳೂರಿನ ಖನಿಜ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾತನಾಡಿದರು   

ವಿಜಯಪುರ: ತಂಪು ಪಾನೀಯ, ಧಾನ್ಯ ಸಂಸ್ಕರಣೆ, ಪವನ ವಿದ್ಯುತ್‌ ಬ್ಲೇಡ್‌, ಸಿವಿಸಿ/ಪಿವಿಸಿ ಪೈಪ್‌, ಸೋಲಾರ್‌ ವೇಫರ್‌, ಬಣ್ಣ ಮತ್ತು ರಾಸಾಯನಿಕಗಳು ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದಲ್ಲಿ ಬೇರೆ ಬೇರೆ ಉದ್ಯಮ ಸಮೂಹಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು ₹17 ಸಾವಿರ ಕೋಟಿಗಳಿಗೂ ಹೆಚ್ಚು ಬಂಡವಾಳ ತೊಡಗಿಸಲು ಮುಂದೆ ಬಂದಿವೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬೆಂಗಳೂರು ಖನಿಜ ಭವನದಲ್ಲಿ ಸೋಮವಾರ ವಿಜಯಪುರ ಜಿಲ್ಲೆಯಲ್ಲಿನ ಉದ್ದೇಶಿತ ಹೂಡಿಕೆ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ರಿಲಯನ್ಸ್‌ ಸಮೂಹದ ಭಾಗವಾಗಿರುವ ಕ್ಯಾಂಪಾಕೋಲಾದ ತಂಪು ಪಾನೀಯ ಮತ್ತು ಬಾಟ್ಲಿಂಗ್‌ ಘಟಕದ ಸ್ಥಾಪನೆಗಾಗಿ ₹1,622 ಕೋಟಿ ಮೊತ್ತದ ಹೂಡಿಕೆಗೆ ಅನುಮೋದನೆ ಕೊಡಲಾಗಿದೆ ಎಂದರು.

ADVERTISEMENT

ತಂಪು ಪಾನೀಯ, ಕುಡಿಯುವ ನೀರು ಮತ್ತು ಬಾಟ್ಲಿಂಗ್‌ ಚಟುವಟಿಕೆಗಳಿಗೆ ಕ್ಯಾಂಪಾಕೋಲಾ ಹೂಡಿಕೆಯಿಂದ 1,200 ಜನರಿಗೆ ನೇರ ಉದ್ಯೋಗ ಸಿಗಲಿದೆ. ಈ ಯೋಜನೆಗಾಗಿ ಮುಳವಾಡ ಕೈಗಾರಿಕಾ ಪ್ರದೇಶದ 2ನೇ ಹಂತದ ವ್ಯಾಪ್ತಿಯಲ್ಲಿ 100 ಎಕರೆ ಕೊಡಲಾಗುವುದು. ಈ ಸಂಬಂಧ ಅಧಿಕೃತ ಆದೇಶ ಕೂಡ ಆಗಿದೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಸದ್ಯದಲ್ಲೇ ವಿಮಾನ ನಿಲ್ದಾಣ ಆರಂಭವಾಗಲಿರುವುದನ್ನು ಪರಿಗಣಿಸಿ ಮೆಲ್‌ಸ್ಟಾರ್‌ ಕಂಪನಿಯು ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭಿಸಲು ಮುಂದೆ ಬಂದಿದೆ. ಇದೇ ರೀತಿ ಶಾಲೆ ತೆರೆಯಲು ಮತ್ತೊಂದು‌ ಕಂಪನಿ ಬರುತ್ತಿದ್ದು, ಅದಕ್ಕೂ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಸಿವಿಸಿ/ಪಿವಿಪಿ ಪೈಪ್‌ ತಯಾರಿಸುವ ಪೊದ್ದಾರ್‌ ಕಂಪನಿಯು ಜಿಲ್ಲೆಯಲ್ಲಿ ತನ್ನ ಘಟಕ ತೆರೆಯಲು ತೀರ್ಮಾನಿಸಿವೆ. ಇವುಗಳ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು. ಈ ಪೈಕಿ ಒಂದೆರಡು ಕಂಪನಿಗಳೊಂದಿಗೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

ಮರುಬಳಕೆ ಮಾಡಬಹುದಾದ ಇಂಧನ ಕ್ಷೇತ್ರದಲ್ಲಿ ರೆನ್ಯೂ ಪವರ್‌ ₹4,700 ಕೋಟಿ, ಆರ್ಸೊಲೆಕ್‌ ₹4 ಸಾವಿರ ಕೋಟಿ ಮತ್ತು ಹೆಕ್ಲಾ ಕ್ಲೈಮೇಟ್‌ ಕಂಪನಿ ₹8 ಸಾವಿರ ಕೋಟಿಯನ್ನು ವಿಜಯಪುರ ಜಿಲ್ಲೆಯಲ್ಲಿ ಹೂಡಿಕೆಯ ಪ್ರಸ್ತಾವನೆ ಮುಂದಿಟ್ಟಿವೆ. ಇವು ಕಾರ್ಯಗತಗೊಂಡರೆ ₹16,700 ಕೋಟಿ ಜಿಲ್ಲೆಗೆ ಹರಿಯಲಿದೆ. ಹಾಗೆಯೇ, ಬಣ್ಣ ಮತ್ತು ರಾಸಾಯನಿಕಗಳ ಕ್ಷೇತ್ರದಲ್ಲಿ ಗ್ರಾಸಿಂ ಕಂಪನಿ ಕೂಡ ಹೂಡಿಕೆಯ ಒಲವು ಹೊಂದಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಎಫ್‌ಎಂಸಿಜಿ ವಲಯದಲ್ಲಿ 30, ಸೋಲಾರ್‌ ವಲಯದಲ್ಲಿ 25 ಮತ್ತು ಜವಳಿ ವಲಯದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಮುಂದಾಗಿವೆ. ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್‌, ಚಾಕೊಲೇಟ್‌ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದ್ದು, 20ಕ್ಕೂ ಹೆಚ್ಚು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತವಾಗಿದ್ದು, ಇವುಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ , ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎಂ.ಮಹೇಶ, ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಇದ್ದರು.

ಧಾನ್ಯ ಸಂಸ್ಕರಣೆಗೆ ಹೆಸರಾಗಿರುವ ವಿಂಗ್ಸ್‌ ವಿಟೆರಾ ಕಂಪನಿಯು ₹350 ಕೋಟಿ ಪವನ ವಿದ್ಯುತ್‌ ಕ್ಷೇತ್ರದಲ್ಲಿ ಬೇಕಾಗುವ ದೈತ್ಯ ಅಲಗುಗಳ (ಬ್ಲೇಡ್‌) ತಯಾರಿಕೆಗೆ ಹೆಸರಾದ ಸುಜ್ಲಾನ್‌ ಕಂಪನಿ ₹360 ಕೋಟಿ  ಹೂಡಿಕೆ ಮಾಡಲಿದೆ
ಎಂ.ಬಿ. ಪಾಟೀಲ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.