ಕಡತ
(ಸಾಂದರ್ಭಿಕ ಚಿತ್ರ)
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಎಲ್ಲ 35 ಸದಸ್ಯರು ತಮ್ಮ ಸ್ಥಿರಾಸ್ಥಿ ಮತ್ತು ಚರಾಸ್ಥಿ ವಿವರವನ್ನು ಮೇಯರ್ ಅವರಿಗೆ ನಿಗದಿತ ಅವಧಿಯೊಳಗೆ ಸಲ್ಲಿಸದ ಕಾರಣ ಅವರನ್ನು ಅನರ್ಹಗೊಳಿಸಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟಣ್ಣವರ ಆದೇಶ ಹೊರಡಿಸಿದ್ದಾರೆ.
ಬಿಜೆಪಿಯ 17, ಕಾಂಗ್ರೆಸ್‌ನ 10, ಎಐಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರ 5 ಸದಸ್ಯರು ಸೇರಿ ಎಲ್ಲ ಸದಸ್ಯರು ಅನರ್ಹರಾಗಿದ್ದಾರೆ. 2022ರ ಅಕ್ಟೋಬರ್ 28ರಂದು ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ಬಳಿಕ 2024ರ ಜನವರಿ 9ರಂದು ಮೇಯರ್, ಉಪ ಮೇಯರ್ ಆಯ್ಕೆ ನಡೆದು, ಚುನಾಯಿತ ಸದಸ್ಯರು ಅಧಿಕಾರ ಸ್ವೀಕರಿಸಿದ್ದರು.
ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976 ಕಲಂ 19ರ ಉಪ ಕಲಂ(1)ರಂತೆ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲಿ ಸದಸ್ಯರು, ಮೇಯರ್‌ಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕಿತ್ತು. ಆದರೆ, ಮೇಯರ್, ಉಪಮೇಯರ್ ಸೇರಿ ಯಾರೂ ಆಸ್ತಿ ವಿವರ ಸಲ್ಲಿಸಿಲ್ಲ.
ಪಾಲಿಕೆ ಸದಸ್ಯರು ಆಸ್ತಿ ವಿವರ ನೀಡದಿರುವುದನ್ನು ಪ್ರಶ್ನಿಸಿ ಮತ್ತು ಅವರ ಸದಸ್ಯತ್ವ ರದ್ದುಗೊಳಿಸಲು ಕೋರಿ ಪಾಲಿಕೆಯ ಮಾಜಿ ಸದಸ್ಯರಾದ ಬಿಜೆಪಿಯ ಪ್ರಕಾಶ ಮಿರ್ಜಿ ಮತ್ತು ಕಾಂಗ್ರೆಸ್‌ನ ಮೈನುದ್ದೀನ್ ಬೀಳಗಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.