ADVERTISEMENT

ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 4:33 IST
Last Updated 20 ಡಿಸೆಂಬರ್ 2025, 4:33 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಶತಮಾನದ ಅಂಚಿನ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ ಅನುದಾನವನ್ನು ಮಂಜೂರಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಲಾಗಿತ್ತು.  ಶತಮಾನದ ಅಂಚಿನ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ಪುನರ್ ನಿರ್ಮಾಣಕ್ಕೆ ಒತ್ತಾಯಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ನಾಡಿನ ಅನೇಕ ಚಲನಚಿತ್ರ ನಟ, ನಟಿಯರು, ಹವ್ಯಾಸಿ ಕಲಾವಿದರಿಗೆ ಅತ್ಯುತ್ತಮ ವೇದಿಕೆ ಆಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ನೆಲಸಮಗೊಂಡು 8 ವರ್ಷಗಳು ಗತಿಸಿದರೂ ಈವರೆಗೆ ಪುನರ್ ನಿರ್ಮಾಣ ಆಗಿರುವುದಿಲ್ಲ. ಅನುದಾನ ಮಂಜೂರಾತಿಗಾಗಿ ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದರೂ ಬಿಡುಗಡೆಗೊಳ್ಳದೆ, ಈ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ನೆನಗೂದಿಗೆ ಬಿದ್ದಿದ್ದರಿಂದ ನಾಟಕಗಳ ಪ್ರದರ್ಶನಕ್ಕೆ ಸಮಸ್ಯೆ ಆಗುತ್ತಿರುವ ಬಗ್ಗೆ ಹಿಂದಿನ ಬಜೆಟ್ ಅಧಿವೇಶನದಲ್ಲಿಯೂ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮೂಲಕವೂ ಸರ್ಕಾರದ ಗಮನಸೆಳೆಯಲಾಗಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ಪ್ರಸಕ್ತ ಚಳಿಗಾಲ ಅಧಿವೇಶನದಲ್ಲಿ ಮತ್ತೆ ನಾಟಕ ಪ್ರೋತ್ಸಾಹಿಸಲು ಹಾಗೂ ಹಲವು ದಶಕಗಳ ಕಾಲ ಸಾವಿರಾರು ಕಲಾವಿದರ ಕಲೆ ಪ್ರದರ್ಶನಕ್ಕೆ ವೇದಿಕೆ ಆಗಿದ್ದ ಈ ನಾಟ್ಯ ಮಂದಿರ ಪುನರುಜ್ಜೀವನಗೊಳಿಸಲು ಅಗತ್ಯ ಅನುದಾನ ಮಂಜೂರಿಸಿ, ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರದ ಗಮನಸೆಳೆದಿದ್ದರಿಂದ ಸರ್ಕಾರ ₹ 50 ಲಕ್ಷ ಮಂಜೂರಿಸಿ, ಬಿಡುಗಡೆಗೊಳಿಸಿರುವುದಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ ಎಂದು ಯತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.