ADVERTISEMENT

ಚಡಚಣ: ದಾಳಿಂಬೆ ಬೆಳೆದು ಬದುಕು ರೂಪಿಸಿಕೊಂಡ ರೈತ

ಲೋಣಿ(ಬಿ.ಕೆ) ಗ್ರಾಮದ ರೈತನ ಯಶೋಗಾಥೆ

ಅಲ್ಲಮಪ್ರಭು ಕರ್ಜಗಿ
Published 20 ಅಕ್ಟೋಬರ್ 2022, 19:30 IST
Last Updated 20 ಅಕ್ಟೋಬರ್ 2022, 19:30 IST
ಚಡಚಣ ಸಮೀಪದ ಲೋಣಿ(ಬಿ.ಕೆ) ಗ್ರಾಮದ ರೈತ ಸಿದ್ಧಾರಾಮ ಅಕಮನಿ ಎಂಬುವವರು ತಮ್ಮ ಜಮೀನಿನಲ್ಲಿ ಉತ್ತಮ ಗುಣಮಟ್ಟದ ದಾಳಿಂಬೆ ಬೆಳೆದಿರುವುದು
ಚಡಚಣ ಸಮೀಪದ ಲೋಣಿ(ಬಿ.ಕೆ) ಗ್ರಾಮದ ರೈತ ಸಿದ್ಧಾರಾಮ ಅಕಮನಿ ಎಂಬುವವರು ತಮ್ಮ ಜಮೀನಿನಲ್ಲಿ ಉತ್ತಮ ಗುಣಮಟ್ಟದ ದಾಳಿಂಬೆ ಬೆಳೆದಿರುವುದು   

ಚಡಚಣ: ಮೂರು ಎಕರೆ ಜಮೀನಿನಲ್ಲಿ ಸುಮಾರು ಎರಡು ಎಕರೆ ದಾಳಿಂಬೆ ಬೆಳೆದು ವಾರ್ಷಿಕ ಸುಮಾರು ₹ 15 ಲಕ್ಷ ಆದಾಯ ಪಡೆಯುತ್ತಿರುವ ಲೋಣಿ(ಬಿ.ಕೆ) ಗ್ರಾಮದ ರೈತ ಸಿದ್ಧಾರಾಮ ಅಕಮನಿ ಅವರ ಕೃಷಿ ಯಶೋಗಾಥೆಯೇ ರೈತ ಸಮುದಾಯಕ್ಕೆ ಮಾದರಿಯಾಗಿದೆ.

ಆರಂಭದಲ್ಲಿ ತಂದೆಯಿಂದ ಬಂದ 3 ಎಕರೆ ಜಮೀನಿನಲ್ಲಿ ಎರಡು ಎಕರೆ ದಾಳಿಂಬೆ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯೊಂದಿಗೆ ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಕೆಯೊಂದಿಗೆ ಹೊರ ರಾಜ್ಯಗಳಿಗೆ ರಫ್ತು ಮಾಡುವ ಗುಣಮಟ್ಟದ ದಾಳಿಂಬೆ ಬೆಳೆದು ಗಮನ ಸೆಳೆದರು.

ದಾಳಿಂಬೆ ಬೆಳೆಯ ಆದಾಯದಿಂದ ಮತ್ತೆ 7 ಎಕರೆ ಜಮೀನು ಖರೀದಿಸಿದ ರೈತ ಸಿದ್ಧಾರಾಮ, ಅದರಲ್ಲಿ ಒಂದು ಎಕರೆ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು, ಇನ್ನೆರಡು ಎಕರೆ ಜಮೀನಿನಲ್ಲಿ ದಾಳಿಂಬೆ ಗಿಡಗಳನ್ನು ಬೆಳೆದು, ಈ ವರ್ಷ ಸುಮಾರು ₹ 25 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ದಾಳಿಂಬೆ ಬೆಳೆಯೊಂದಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು ತಮ್ಮ ಜಮೀನಿನಲ್ಲಿ ತೊಗರಿ, ಜೋಳ, ಸೂರ್ಯಕಾಂತಿ, ತೆಂಗು, ಮಾವು ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತ ಹೈನುಗಾರಿಕೆಯನ್ನು ಕೈಗೊಂಡು, ಆದಾಯವನ್ನು ಹೆಚ್ಚಿಸಿಕೊಂಡಿಂದ್ದಾರೆ. ಅವರ ಕೃಷಿ ಪದ್ಧತಿ ಹಾಗೂ ದಾಳಿಂಬೆ ಬೆಳೆಯಲ್ಲಿ ಅವರು ಮಾಡಿದ ಸಾಧನೆ ಈ ಭಾಗದಲ್ಲಿಯೇ ಹೆಚ್ಚು ಪ್ರಸಿದ್ಧಿ ಹೊಂದಿದೆ. ಅವರು ಬೆಳೆದ ಹಣ್ಣುಗಳಿಗೆ ಬೇಡಿಕೆ ಹೆಚ್ಚು ಇರುವುದರಿಂದ ಸಗಟು ಹಣ್ಣು ವ್ಯಾಪಾರಿಗಳು ತೋಟಕ್ಕೆ ಆಗಮಿಸಿ ಫಸಲು ಖರೀದಿಸುತ್ತಿರುವುದು ಇವರ ಹೆಗ್ಗಳಿಕೆ.

ಯಶೋಗಾಥೆ:ಸುಮಾರು 10 ವರ್ಷಗಳ ಹಿಂದೆ ರೈತ ಸಿದ್ಧಾರಾಮ ಅವರ ತಂದೆ ರೇವಪ್ಪ ತಮ್ಮ 10 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯಲು ಪ್ರಯತ್ನಿಸಿದರು. ಅದರೆ, ಅದು ಅವರಿಂದ ಸಾಧಿಲಾಗದೆ, ಕೈ ಸುಟ್ಟುಕೊಂಡು ಸಾಲ ಮಾಡಿದರು. ಅದಕ್ಕಾಗಿ ತಮ್ಮ 10 ಎಕರೆ ಜಮೀನಿನಲ್ಲಿ 7 ಎಕರೆ ಜಮೀನು ಮಾರಾಟ ಮಾಡಬೇಕಾಯಿತು. ಆಗ ಶಾಲೆಗೆ ಹೋಗುತ್ತಿದ್ದ ಬಾಲಕ ಸಿದ್ಧಾರಾಮ ಅವರ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿತು.

ತಮ್ಮ ಓದನ್ನು ಪಿಯುಸಿಗೆ ನಿಲ್ಲಿಸಿದರು. ತಂದೆ ಸಾಧಿಲಾಗದನ್ನು ತಾನು ಸಾಧಿಸಬೇಕು ಎಂದು ಛಲಕ್ಕೆ ಬಿದ್ದರು. ಯಾವ ದಾಳಿಂಬೆಯಿಂದ ತಮ್ಮ ಜಮೀನು ಕೆಳೆದುಕೊಂಡಿದ್ದೇವೆಯೋ ಅದೇ ದಾಳಿಂಬೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಟಕ್ಕೆ ಬಿದ್ದು, ಅದೇ 3 ಎಕರೆ ಜಮೀನಿನಲ್ಲಿ ವ್ಯವಸಾಯ ಅರಂಭಿಸಿ, ಕ್ರಮೇಣ ದಾಳಿಂಬೆಯಿಂದಲೇ ಆರ್ಥಿಕವಾಗಿ ಸಬಲರಾದ ರೈತ ಸಿದ್ಧಾರಾಮ, ತಂದೆ ಮಾರಿದ ತಮ್ಮ ಅದೇ ಏಳು ಎಕರೆ ಜಮೀನನ್ನು ಮತ್ತೆ ತಾವೇ ಖರೀದಿಸಿದರು. ಇದು ಅವರಲ್ಲಿರುವ ಧೃಡ ಸಂಕಲ್ಪಕ್ಕೆ ಸಾಕ್ಷಿ. ಈ ಭಾಗದಲ್ಲಿ ದಾಳಿಂಬೆ ಬೆಳೆಗೆ ಇವರು ಮಾರ್ಗದರ್ಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.