ಮುದ್ದೇಬಿಹಾಳ: ರಸ್ತೆ ಬದಿ ಪುಟ್ಟ ಟೀ, ಬೀಡ ಗೂಡಂಗಡಿ ಇಟ್ಟುಕೊಂಡು ಉಪಜೀವನ ನಡೆಸುತ್ತಿರುವ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ಎರಡನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆಯುವ ಸಾಧನೆ ಮಾಡಿದ್ದಾಳೆ.
ಪಟ್ಟಣದ ಆಶ್ರಯ ಕಾಲೊನಿ ನಿವಾಸಿ, ಮುದ್ದೇಬಿಹಾಳ ವಿಬಿಸಿ ಪ್ರೌಢಶಾಲೆ ಮುಂದೆ ಟೀ ಮಾರಿ ಉಪಜೀವನ ಸಾಗಿಸುವ ಬಸವರಾಜ ಹಳ್ಳದ ಹಾಗೂ ಸುರೇಖಾ ಹಳ್ಳದ ದಂಪತಿ ಪುತ್ರಿ ವಾಣಿಶ್ರೀ ಹಳ್ಳದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 97.83 ಅಂಕಗಳನ್ನು ಪಡೆದುಕೊಂಡಿದ್ದಾರೆ.
ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಹೆಸರು ತಂದಿದ್ದಾಳೆ. ಆದರೆ, ಮನೆಯಲ್ಲಿ ಬಡತನದ ಕಾರಣದಿಂದ ಆಕೆಯ ಭವಿಷ್ಯದ ಶಿಕ್ಷಣಕ್ಕೆ ಅಡ್ಡಿಯಾಗುವ ಆತಂಕವನ್ನು ಪೋಷಕರು ವ್ಯಕ್ತಪಡಿಸುತ್ತಿದ್ದಾರೆ.
ಇರಲು ಸ್ವಂತ ಮನೆಯಿಲ್ಲದೇ ತಾಯಿಯ ಮನೆಯಲ್ಲಿರುವ ಸುರೇಖಾ ಹಳ್ಳದ ಅವರು ತಮ್ಮ ಮಗಳು ಎಲ್ಲಿಯವರೆಗೆ ಓದುತ್ತೇನೆ ಎನ್ನುತ್ತಾಳೋ ಅಲ್ಲಿಯವರೆಗೂ ಓದಿಸುವುದಾಗಿ ಹೇಳುತ್ತಾರೆ. ಅಲ್ಲದೇ, ನಾಗರಬೆಟ್ಟದ ಮಠ್ಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಬಿ.ಜಿ.ಮಠ, ಪ್ರಾಚಾರ್ಯ ಇರ್ಫಾನ್ ಬಾಗವಾನ ಅವರ ಸಹಾಯವನ್ನು ಸ್ಮರಿಸುತ್ತಾರೆ.
ಕಾಲೇಜಿನ ಪ್ರಾಚಾರ್ಯ ಇರ್ಫಾನ ಬಾಗವಾನ ಮಾತನಾಡಿ, ವಾಣಿಶ್ರೀ ಹಳ್ಳದ ಅವಳ ಸಾಧನೆಗೆ ಸಂಸ್ಥೆಯಿಂದ ನೀಟ್ ಓದಲು ಅನುಕೂಲ ಕಲ್ಪಿಸಿಕೊಡಲಾಗಿದ್ದು, ಮೆಡಿಕಲ್ ಸೀಟು ದೊರೆತರೆ ಅರ್ಧದಷ್ಟು ಶುಲ್ಕವನ್ನು ಸಂಸ್ಥೆ ಭರಿಸಲಿದೆ ಎಂದು ಅಧ್ಯಕ್ಷರು ಮಾತು ನೀಡಿದ್ದಾರೆ ಎಂದು ತಿಳಿಸಿದರು.
ನಾನು ಚೆನ್ನಾಗಿ ಓದಿ ಎಂ.ಬಿ.ಬಿ.ಎಸ್ ಮಾಡಿಯೇ ತೀರುತ್ತೇನೆ. ಆತ್ಮವಿಶ್ವಾಸದಿಂದ ಓದಿದರೆ ಇಟ್ಟ ಗುರಿ ತಲುಪುವುದು ಕಷ್ಟವೇನಲ್ಲ. ಸೋಷಿಯಲ್ ಮಿಡಿಯಾಗಳಿಂದ ವಿದ್ಯಾರ್ಥಿಗಳಾದವರು ದೂರ ಇದ್ದಷ್ಟು ವಿದ್ಯೆ ತಲೆಗೆ ಹತ್ತುತ್ತದೆ.-ವಾಣಿಶ್ರೀ ಹಳ್ಳದ ವಿದ್ಯಾರ್ಥಿನಿ
ಬಡತನದಲ್ಲಿಯೇ ನಮ್ಮ ಜೀವನ ಕಳೆದಿದ್ದೇವೆ. ಡಬ್ಬ ಅಂಗಡಿ ಇಟ್ಟುಕೊಂಡು ಪಾನ್ ಬೀಡಾ ಮಾರುತ್ತಾ ಉಪಜೀವನ ಸಾಗಿಸುತ್ತಿದ್ದೇವೆ. ಮೊಮ್ಮಗಳ ಸಾಧನೆ ಖುಷಿಯಾಗಿದೆ.-ಶಾಂತಮ್ಮ ಮಾಟಲದಿನ್ನಿ ವಾಣಿಶ್ರೀ ಹಳ್ಳದ ಅಜ್ಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.