ADVERTISEMENT

ಮೂಲ ಇತಿಹಾಸಕ್ಕೆ ಧಕ್ಕೆ: ಸತೀಶ ಜಾರಕಿಹೊಳಿ

ದಲಿತ ವಿದ್ಯಾರ್ಥಿ ಪರಿಷತ್‌; ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 12:35 IST
Last Updated 31 ಜನವರಿ 2023, 12:35 IST
ವಿಜಯಪುರದಲ್ಲಿ ಮಂಗಳವಾರ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು
ವಿಜಯಪುರದಲ್ಲಿ ಮಂಗಳವಾರ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು   

ವಿಜಯಪುರ: ನಮ್ಮ ಮೂಲ ಇತಿಹಾಸವೇ ಬೇರೆ, ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿರುವ ಇತಿಹಾಸವೇ ಬೇರೆ. ನಾಲ್ಕು ಸಾವಿರ ವರ್ಷದಿಂದ ನಮ್ಮ ಮೂಲ ಇತಿಹಾಸ ತಿರುಚುವ ಕಾರ್ಯ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ 2022ರ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದಶಕದ ಈಚೆಗೆ ದೇಶದ ಮೂಲ ಇತಿಹಾಸ ತಿರುಚುವ ಕಾರ್ಯ ವೇಗ ಪಡೆದುಕೊ‌ಂಡಿದೆ. ಸುಳ್ಳು ಇತಿಹಾಸ ಸೃಷ್ಟಿಸಲಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕಿದೆ ಎಂದರು.

ADVERTISEMENT

ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಕೆ.ಸಿ.ಮಾತನಾಡಿ, ಜೈ ಭೀಮ್ ಎಂಬ ಘೋಷಣೆ ನಮ್ಮೆಲ್ಲರ ಘನತೆ, ಸ್ವಾಭಿಮಾನದ ಪ್ರತೀಕವಾಗಿದೆ ಎಂದರು.

ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಶೋಷಿತರ ತಾಯಿಯಾಗಿದ್ದಾರೆ. ಮನೆ ಅಂಗಳದಿಂದ‌ ಮಂಗಳನ ಅಂಗಳದ ವರೆಗೆ ಮಹಿಳೆ ಮುನ್ನುಡಿ ಬರೆಯಲು ದೇವರು ಕಾರಣವರಲ್ಲ, ಅಂಬೇಡ್ಕರ್ ಸಂವಿಧಾನ ಮತ್ತು ಸಾವಿತ್ರಿಬಾಯಿ ಫುಲೆ ಅವರ ಶೈಕ್ಷಣಿಕ ಕ್ರಾಂತಿ ಕಾರಣ ಎಂದರು.

ಬಾಗಲಕೋಟೆ ಜಿ.ಪಂ.ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಸಾವಿತ್ರಿಬಾಯಿ ಫುಲೆ ಪ್ರಥಮ ಮಹಿಳಾ ಶಿಕ್ಷಕಿಯಾಗಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದ ಪರಿಣಾಮ ನಾವೆಲ್ಲ ಅಕ್ಷರ ವಂತರಾಗಲು ಕಾರಣವಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಮೇಲು, ಕೀಳು ಭಾವನೆ ತೊರೆದು ಸ್ತ್ರೀ, ಪುರುಷರು ಸಮಾನರಾಗಿ ಇರಲು ಅಂಬೇಡ್ಕರ್ ಅವಕಾಶ ಕಲ್ಪಿಸಿದರು. ಪರಿಣಾಮ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಮಾನತೆ ಸಾಧಿಸುತ್ತಿದ್ದೇವೆ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಮಂತ್ರ, ತೀರ್ಥ, ಪ್ರಸಾದಕ್ಕೆ ಕೈಯೊಡ್ಡಿ, ಅಂಬೇಡ್ಕರ್, ಬುದ್ದ, ಬಸವನ ವಿಚಾರವನ್ನು ಮರೆಯುತ್ತಿದ್ದೇವೆ. ಮಂತ್ರ, ತಂತ್ರಗಳ ಮೋಸಕ್ಕೆ ಯಾರೂ ಬಲಿಯಾಗಬಾರದು ಎಂದು ಹೇಳಿದರು.

ಸಂವಿಧಾನ ರಕ್ಷಣೆಯಾಗಬೇಕು. ಹಣ, ಹೆಣದ ರಾಜಕೀಯ ರಾಜ್ಯದಲ್ಲಿ ನಡೆಯುತ್ತಿದೆ. ಬಹಳ ಎಚ್ಚರಿಕೆಯಿಂದ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದರು.

ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಫಾದರ್ ಟಿಯೋಲಾ ಇದ್ದರು.

ಬಹುಮಾನ: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ವಿಜೇತ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಬೋಳ ಚಿಕ್ಕಲಕಿಯ ಮಾಲಾ ಗೋಪಾಲ್ ಕೆ. ಅವರಿಗೆ ₹ 3 ಲಕ್ಷ ನಗದು, ದ್ವಿತೀಯ ಬಹುಮಾನ ವಿಜೇತ ಬೆಳಗಾವಿಯ ಅನಿಲ್ ವಿಜಯ್ ಕೆ. ಅವರಿಗೆ ₹ 2 ಲಕ್ಷ ಹಾಗೂ ತೃತೀಯ ಬಹುಮಾನ ವಿಜೇತ ತುಮಕೂರಿನ ಪ್ರಜ್ವಲ್ ಆರ್. ಅವರಿಗೆ ₹ 1 ನಗದು ಬಹುಮಾನ ನೀಡಿ, ಸನ್ಮಾನಿಸಲಾಯಿತು.

****

ಪೆನ್ನಿನ ಭಾರತ ನಿರ್ಮಿಸಬೇಕೇ ಹೊರತು, ಗನ್ನಿನ ಭಾರತ ಬೇಡ. ಆದರ್ಶ ಭಾರತ ನಿರ್ಮಾಣವಾಗಬೇಕು, ಧರ್ಮಕ್ಕಿಂತ ದೇಶ ಮುಖ್ಯ ಆಗಬೇಕು
–ಜ್ಞಾನ ಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.