ಮುದ್ದೇಬಿಹಾಳ: ಕಳೆದ ಒಂದೂವರೆ ತಿಂಗಳಿನಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೆ, ಪಾಠ ಪ್ರವಚನಗಳು ನಡೆಯದೆ ಇರುವುದನ್ನು ಪ್ರತಿಭಟಿಸಿ ಸ್ಥಳೀಯ ಎರಡು ಸರ್ಕಾರಿ ಪದವಿ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಪ್ಪು ಹಲಗೆ ಇಟ್ಟು ಪಾಠ ಮಾಡುವ ಮೂಲಕ ತಮಗೆ ಆಗುತ್ತಿರುವ ತೊಂದರೆಯನ್ನು ಸರ್ಕಾರದ ಗಮನಕ್ಕೆ ತಂದರು.
ವಿದ್ಯಾರ್ಥಿ ಮುಖಂಡ ಶಿವನಗೌಡ ಬಿರಾದಾರ ಮಾತನಾಡಿ, ರಾಜ್ಯ ಸರ್ಕಾರ ಶೇ 70 ಇರುವ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ನೀಡದೆ, ಇಲ್ಲಿಯವರೆಗೆ ಕೆಲಸ ಮಾಡಿಸಿಕೊಂಡು ಅವರ ಸೇವೆಯನ್ನು ಕಡೆಗಣಿಸುತ್ತಿದೆ. ಎಲ್ಲಾ ಸರ್ಕಾರಿ ಕಾಲೇಜುಗಳ ಅಧಾರಸ್ತಂಭ ಆಗಿದ್ದ ಅವರು ಕಡಿಮೆ ವೇತನ ಪಡೆದು ಕಾಯಂ ನೌಕರರಂತೆ ಕೆಲಸ ಮಾಡುತ್ತಿದ್ದರು. ಹಲವಾರು ವರ್ಷ ದುಡಿದವರಿಗೆ ಸೇವಾ ಭದ್ರತೆ ಕೊಡದೆ ಇರುವುದು ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ. ಈಗ ವರ್ಗಗಳು ನಡೆಯದೇ ಇರುವುದರಿಂದ ತಮ್ಮ ಪಾಠ ಪ್ರವಚನಕ್ಕೆ ತೊಂದರೆಯಾಗಿದ್ದು ಪರೀಕ್ಷೆಗಳು ಬಂದರು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ರಾಜ್ಯದ ಸರ್ಕಾರಿ ಪದವಿ ಮಹಾವಿದ್ಯಾಲಯಗಳಲ್ಲಿ ಅಗಸ್ಟ್ ತಿಂಗಳನಿಂದ ಸರ್ಕಾರ ರಾಜ್ಯದ ಎಲ್ಲಾ ಅತಿಥಿ ಮತ್ತೊಮ್ಮೆ ಹೊಸದಾಗಿ ಕೌನ್ಸೆಲಿಂಗ್ ನಡೆಸಲು ಮುಂದಾಗಿರುವುದನ್ನು ಖಂಡಿಸಿದರು. ವಿದ್ಯಾರ್ಥಿಗಳು ಪದವಿ ಕಾಲೇಜಿನಿಂದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿಯ ಆಡಳಿತ ಸೌಧಕ್ಕೆ ಆಗಮಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ಮಲ್ಲಮ್ಮ ಪಾಟೀಲ್, ಮುಖಂಡರಾದ ಓಂಕಾರ್ ಪವಾರ, ರಮೇಶ್ ಹೂಗಾರ, ರೇವಣಸಿದ್ದ ಹರಿಂದ್ರಾಳ ಸೇರಿದಂತೆ ವಸತಿ ಪದವಿ ಕಾಲೇಜು ಹಾಗೂ ಸಾಮಾನ್ಯ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಬಿವಿಪಿ ಧ್ವಜವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತಾಲೂಕು ದಂಡಾಧಿಕಾರಿ ಕೀರ್ತಿ ಚಾಲಕ್ ಮನವಿ ಸ್ವೀಕರಿಸಿದರು,ಅಪರಾಧ ವಿಭಾಗದ ಪಿಎಸೈ ಆರ್.ಎಲ್.ಮನ್ನಾಭಾಯಿ, ಎಎಸೈ ಕೆ.ಎಸ್.ಅಸ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.