ADVERTISEMENT

ಶಿಕ್ಷಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪೊಲೀಸ್‌ ಕಾನ್‌ಸ್ಟೆಬಲ್‌ ವಿರುದ್ಧ ಕ್ರಮ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ದೃಶ್ಯಾವಳಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 16:05 IST
Last Updated 6 ಜೂನ್ 2023, 16:05 IST
ನಿಂದಿಸಿದ ಪೊಲೀಸ್‌ ಕಾನ್‌ಸ್ಟೆಬಲ್‌
ನಿಂದಿಸಿದ ಪೊಲೀಸ್‌ ಕಾನ್‌ಸ್ಟೆಬಲ್‌   

ವಿಜಯಪುರ: ನಗರದಲ್ಲಿ ನಿವೇಶನ ಒತ್ತುವರಿಗೆ ಸಂಬಂಧಿಸಿದಂತೆ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಘಟನೆಯ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಪೊಲೀಸ್‌ ಕಾನ್‌ಸ್ಟೆಬಲ್‌ ವಿರುದ್ಧ ಅಶಿಸ್ತು ಪ್ರದರ್ಶನ ಹಾಗೂ ಇಲಾಖೆಗೆ ಅಗೌರವವಾಗುವ ರೀತಿ ವರ್ತನೆ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿ, ಒಂದು ವರ್ಷದ ಇನ್‌ಕ್ರಿಮೆಂಟ್‌ ಕಡಿತಗೊಳಿಸಿ, ಕ್ರಮಕೈಗೊಂಡಿದ್ದಾರೆ. 

ಘಟನೆಯ ವಿವರ: 

ADVERTISEMENT

ನಗರದ ಎಂ.ಬಿ.ಪಾಟೀಲ ಬಡಾವಣೆಯಲ್ಲಿ ಅಕ್ಕಪಕ್ಕದಲ್ಲಿ ನಿವೇಶನ ಹೊಂದಿರುವ ತಿಕೋಟಾ ತಾಲ್ಲೂಕಿನ ಬರಟಗಿ ಸರ್ಕಾರಿ ಮಾದರಿ ಪ್ರಾಥಮಕ ಶಾಲೆಯ ಶಿಕ್ಷಕ ಚಿದಾನಂದ ಸಿದ್ದಪ್ಪ ಜಿಗಜೇವಣಿ ಮತ್ತು ವಿಜಯಪುರ ಗ್ರಾಮೀಣ ಠಾಣೆ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಅಶೋಕ ದುಂಡಪ್ಪ ಮಿಂಚನಾಳ ನಡುವೆ ನಿವೇಶನ ಒತ್ತುವರಿ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿದೆ.

ಈ ಸಂಬಂಧ ಮೇ 10ರಂದು ಪೊಲೀಸ್‌ ಕಾನ್‌ಸ್ಟೆಬಲ್‌ ಶಿಕ್ಷಕರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ.

ಘಟನೆಯ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಕ ಚಿದಾನಂದ, ‘ನನ್ನ ನಿವೇಶನಕ್ಕೆ ಸಂಬಂಧಿಸಿದ ಒಂದೂವರೆ ಅಡಿ ಜಾಗವನ್ನು ಪೊಲೀಸ್‌ ಕಾನ್‌ಸ್ಟೆಬಲ್‌ ಅಶೋಕ ಒತ್ತುವರಿ ಮಾಡಿದ್ದಾರೆ. ಇದರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಜಾತಿ ನಿಂದನೆ ಕೇಸ್‌ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಇದೇ ವಿಷಯವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಅವರು ಆರೋಪಿಸಿದರು.

‘ನಾನೂ ಸರ್ಕಾರಿ ನೌಕರ ಇದ್ದೇನೆ. ಅವರೂ ಸರ್ಕಾರಿ ನೌಕರರಿದ್ದಾರೆ. ಅಕ್ಕಪಕ್ಕದವರು ಸೌಹಾರ್ದದಿಂದ ಇರಬೇಕು. ತಂಟೆ ತಕರಾರು ಮುಂದುವರಿಸುವುದು ಬೇಡ ಎಂಬ ಕಾರಣಕ್ಕೆ ಹಾಗೂ ಅವರು ಪೊಲೀಸ್‌ ಕಾನ್‌ಸ್ಟೆಬಲ್‌ ಇರುವುದರಿಂದ ದೂರು ನೀಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೇನೆ’ ಎಂದು ಶಿಕ್ಷಕ ಚಿದಾನಂದ ಅಸಹಾಯಕತೆ ವ್ಯಕ್ತಪಡಿಸಿದರು.

‘ಪೊಲೀಸ್‌ ಕಾನ್‌ಸ್ಟೆಬಲ್‌ ಅವರಿಂದ ನನಗೆ ಜೀವಕ್ಕೆ ಬೆದರಿಕೆ ಇದೆ. ನನಗೆ ಸೂಕ್ತ ರಕ್ಷಣೆ ಬೇಕು. ನನಗೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.