ADVERTISEMENT

ಹೂವಿನಹಿಪ್ಪರಗಿ: ಪಂಚಭೂತಗಳಲ್ಲಿ ಲೀನರಾದ ಕರಿಸಿದ್ದೇಶ್ವರ ಮಠದ ಅಡಿವೆಪ್ಪಜ್ಜ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 5:53 IST
Last Updated 7 ನವೆಂಬರ್ 2025, 5:53 IST
ಶ್ರೀ ಅಡಿವೆಪ್ಪ ಮಹಾರಾಜರ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು
ಶ್ರೀ ಅಡಿವೆಪ್ಪ ಮಹಾರಾಜರ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು   

ಹೂವಿನಹಿಪ್ಪರಗಿ: ವಾಕ್ ಸಿದ್ಧಿ ಮೂಲಕ ನಾಡಿನಾದ್ಯಾಂತ ಭಕ್ತರನ್ನು ಹೊಂದಿ ಶಿಷ್ಯಬಳಗ, ಭಕ್ತಬಳಗದ ಒಳಿತಿಗಾಗಿ ಮಠ ಮಂದಿರಗಳನ್ನು ಸ್ಥಾಪಿಸಿ ಭಕ್ತರಿಗಾಗಿ ಜೀವನ ಸಮರ್ಪಿಸಿಕೊಂಡಿದ್ದ ಬೂದಿಹಾಳ ಶ್ರೀ ಕರಿಸಿದ್ದೇಶ್ವರ ಮಠದ ಕೃರ್ತ ಪುರುಷ, ಶತಾಯುಷಿ ಅಡಿವೆಪ್ಪ ಮಹಾರಾಜರು (106) ಗುರುವಾರ ಪಂಚಭೂತಗಳಲ್ಲಿ ಲೀನರಾದರು.

ಬಸವನಬಾಗೇವಾಡಿ ತಾಲ್ಲೂಕಿನ ಬೂದಿಹಾಳ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ ಆರಾಧ್ಯದೈವ ಎನಿಸಿಕೊಂಡಿದ್ದ ಮಹಾರಾಜರು, ಬುಧವಾರ ರಾತ್ರಿ 2.20ಕ್ಕೆ ಶ್ರೀ ಮಠದಲ್ಲಿ ಲಿಂಗೈಕೆರಾದರು. ಹನ್ನೊಂದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 10 ದಿನಗಳಿಂದ ಆಹಾರ, ಪ್ರಸಾದ ತೆಗೆದುಕೊಂಡಿರಲಿಲ್ಲ.

ಮಹಾರಾಜರು ಅಖಂಡ ವಿಜಯಪುರ ಜಿಲ್ಲೆಯ, ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಮದಾಳ ಗ್ರಾಮದ ಶ್ರೀ ಕರಿಸಿದ್ದೇಶ್ವರರ ಪರಮ ಶಿಷ್ಯರಾಗಿ ಸೇವೆ ಸಲ್ಲಿಸಿ ಅವರಿಂದ ವರ ಪಡೆದವರು.

ADVERTISEMENT

ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಅಂತಿಮ ಯಾತ್ರೆಯಲ್ಲಿ ಹಲವಾರು ಡೊಳ್ಳಿನ ಗಾಯನ ಸಂಘದವರು ಮಹರಾಜರ ಕುರಿತು ಹಾಡಿದರು. ಪೂಜಾರಿಗಳಿಂದ ಹೇಳಿಕೆಗಳು ನಡೆದವು. ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹಿಂದೂ ಮಠಾಧೀಶರ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇಂಗಳೇಶ್ವರ, ವಡವಡಗಿಯ ಭೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಲದ ಹುಲಜಂತಿಯ ಪಟ್ಟದ ದೇವರು ಮಾಲಿಂಗರಾಯ ಮಹಾರಾಜರು, ಬಸವನ ಬಾಗೇವಾಡಿ ಶಿವಾನಂದ ಈರಕಾರ ಮುತ್ಯಾ ಸೇರಿದಂತೆ ನೂರಾರು ಪರಮಪೂಜ್ಯರು, ಸಂತರು, ರಾಜಕೀಯ ಮುಖಂಡರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.