ADVERTISEMENT

ಅಪಘಾನಿಸ್ತಾನದ ದ್ರಾಕ್ಷಿ ತಳಿ ಆಮದಿಗೆ ಚಿಂತನೆ: ಶಿವಾನಂದ ಪಾಟೀಲ

ರಫ್ತು ಗುಣಮಟ್ಟದ ಒಣದ್ರಾಕ್ಷಿ ಉತ್ಪಾದನೆಗೆ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:08 IST
Last Updated 29 ಜುಲೈ 2025, 4:08 IST
ವಿಜಯಪುರ ನಗರದ ಡಿಸಿಸಿ ಬ್ಯಾಂಕಿನಲ್ಲಿ ನಡೆದ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಪ್ರತಿನಿಧಿಗಳ ಸಭೆಯಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿದರು 
ವಿಜಯಪುರ ನಗರದ ಡಿಸಿಸಿ ಬ್ಯಾಂಕಿನಲ್ಲಿ ನಡೆದ ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಪ್ರತಿನಿಧಿಗಳ ಸಭೆಯಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿದರು    

ವಿಜಯಪುರ: ಅಧಿಕ ಇಳುವರಿ, ವಿಶಿಷ್ಟ ಸ್ವಾದ ಹೊಂದಿರುವ ಅಪಘಾನಿಸ್ತಾನದ ಐದಾರು ದ್ರಾಕ್ಷಿ ತಳಿಗಳನ್ನು ಜಿಲ್ಲೆಗೆ ಪರಿಚಯಿಸಲು ಆಮದು ಮಾಡಿಕೊಳ್ಳುವ ಚಿಂತನೆ ಇದೆ ಎಂದು ಕೃಷಿ ಮಾರುಕಟ್ಟೆ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಡಿಸಿಸಿ ಬ್ಯಾಂಕಿನಲ್ಲಿ ನಡೆದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ದ್ರಾಕ್ಷಿ ಬೆಳೆಗಾರರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರಾಸಾಯನಿಕ ಬಳಕೆಗೆ ಬದಲಾಗಿ ವಿಷಮುಕ್ತವಾಗಿ ಹಾಗೂ ಯುರೋಪಿಯನ್ ರಾಷ್ಟ್ರಗಳಿಗೆ ಸಾಗಿಸಲು ರಫ್ತು ಗುಣಮಟ್ಟದ ಒಣ ದ್ರಾಕ್ಷಿ ಬೆಳೆಯಲು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ADVERTISEMENT

ರಾಷ್ಟ್ರೀಯ ದ್ರಾಕ್ಷಿ ಬೆಳೆಗಾರರ ಮಹಾಮಂಡಳದ ಅಧ್ಯಕ್ಷ ಸೋಪನ್ ಕಾಂಚನ್, ನಮ್ಮಲ್ಲಿ ಉತ್ಪಾದನೆಯಾಗುವ ಒಣದ್ರಾಕ್ಷಿಗೆ ಬಳಸಲಾಗುತ್ತಿರುವ ರಾಸಾಯನಿಕಗಳಿಗೆ ಮಿತಿ ಹೇರಬೇಕಾದ ಅಗತ್ಯ ಇದೆ. ಅಧಿಕ ಉತ್ಪಾದನೆ ಮಾಡಿದರೂ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ. ಈ ಕುರಿತು ದ್ರಾಕ್ಷಿ ಬೆಳೆಗಾರರು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಬೇಕಿದೆ ಎಂದರು.

ಒಣದ್ರಾಕ್ಷಿ ಉದ್ಯಮಿ ಎ.ಎಸ್.ಬಿರಾದಾರ,  ಆಫ್ರಿಕನ್ ರಾಷ್ಟ್ರಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದರೂ ತಾಂತ್ರಿಕತೆ ಇಲ್ಲದ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರ ಲಾಭ ಪಡೆಯಲು ಭಾರತೀಯ ದ್ರಾಕ್ಷಿ ಬೆಳೆಗಾರರಿಗೆ ಸುವರ್ಣಾವಕಾಶವಿದ್ದು, ಈ ನಿಟ್ಟಿನಲ್ಲಿ ಸದೃಢ ಹೆಜ್ಜೆ ಇರಿಸಬೇಕಿದೆ ಎಂದು ಸಲಹೆ ನೀಡಿದರು. 

ಮಹಾರಾಷ್ಟ್ರದ ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಮಾರುತಿ ಚವ್ಹಾಣ, ಪ್ರಸಕ್ತ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಪೂರಕ ಆಹಾರದ ಕುರಿತು ಹೆಚ್ಚು ಕಾಳಜಿ ವ್ಯಕ್ತವಾಗುತ್ತಿದೆ. ರಾಸಾಯನಿಕ ಹೊಂದಿರುವ ಒಣದ್ರಾಕ್ಷಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವೀಕೃತವಾಗುತ್ತಿಲ್ಲ. ಹೀಗಾಗಿ ವಿಷಮುಕ್ತವಾಗಿ ಸಾವಯವದಲ್ಲಿ ನೈಸರ್ಗಿಕವಾಗಿ ದ್ರಾಕ್ಷಿ ಬೆಳೆಯಲು ಆದ್ಯತೆ ನೀಡಬೇಕಿದೆ ಎಂದರು. 

ಐಐಎಚ್‍ಆರ್ ರೈತ ಪ್ರತಿನಿಧಿ ಡಾ.ಎಸ್.ಡಿ.ಶಿಖಾಮಣಿ, ದ್ರಾಕ್ಷಿ ಬೆಳೆಗಾರರ ಸಂಘಟನೆ ಉಪಾಧ್ಯಕ್ಷ ಅನಿಲ ಮೆಹರೆ,  ಕರ್ನಾಟಕ ರಾಜ್ಯದ ದ್ರಾಕ್ಷಿ ಬೆಳೆಗಾರರ ಸಂಘದ ಬಿ.ಎಂ.ಕೋಕರೆ, ದ್ರಾಕ್ಷಿ ಬೆಳೆಗಾರರಾದ ಪ್ರಕಾಶ ಗಣಿ, ಮಲ್ಲಿಕಾರ್ಜುನ ತುಂಗಳ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.