ADVERTISEMENT

ಅಗಸರ ಹಳ್ಳ ಸೇತುವೆ: ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ

₹1.8 ಕೋಟಿ ವೆಚ್ಚಕ್ಕೆ ಆಡಳಿತಾತ್ಮಕ ಮಂಜೂರು: ಈಡೇರಲಿದೆ ರೈತರ ದಶಕಗಳ ಬೇಡಿಕೆ

ಚಂದ್ರಶೇಖರ ಕೊಳೇಕರ
Published 11 ಫೆಬ್ರುವರಿ 2026, 5:49 IST
Last Updated 11 ಫೆಬ್ರುವರಿ 2026, 5:49 IST
ಆಲಮಟ್ಟಿ ಸಮೀಪದ ಬೇನಾಳ ಬಳಿಯ ಅಗಸರಹಳ್ಳ ರಸ್ತೆ ಸೇತುವೆಯ ಬಾಕ್ಸ್ ಕಲ್ವರ್ಟ್‌ಗಳ ಸೇತುವೆ
ಆಲಮಟ್ಟಿ ಸಮೀಪದ ಬೇನಾಳ ಬಳಿಯ ಅಗಸರಹಳ್ಳ ರಸ್ತೆ ಸೇತುವೆಯ ಬಾಕ್ಸ್ ಕಲ್ವರ್ಟ್‌ಗಳ ಸೇತುವೆ   

ಆಲಮಟ್ಟಿ: ಬೇನಾಳ ಆರ್.ಎಸ್. ಮತ್ತು ಬೇನಾಳ ಎನ್.ಎಚ್. ಮಧ್ಯೆ ಈಗಿರುವ ಅಗಸರಹಳ್ಳ ಸೇತುವೆಗೆ ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮುಂದಾಗಿದೆ.

ನೀರಿನಿಂದ ಈ ಅವಳಿ ಗ್ರಾಮಗಳು ಜಲಾವೃತಗೊಂಡು ಒಂದೆಡೆ ಪುನರ್ವಸತಿಗೊಂಡರೂ ಬೇಸಿಗೆಯಲ್ಲಿ ಜನ, ಜಾನುವಾರು, ಜಮೀನುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದರು. ಬೇನಾಳ ಆರ್.ಎಸ್.ಹತ್ತಿರ ಹರಿಯುವ ಪಾರ್ವತಿ ಕಟ್ಟೆ ಹಳ್ಳದ ಮಧ್ಯ ಆಲಮಟ್ಟಿ ಜಲಾಶಯದ ಹಿನ್ನೀರು ಆವರಿಸಿ, ಸುಮಾರು ಆರು ತಿಂಗಳ ಕಾಲ ಈ ಸೇತುವೆ ಹಿಂಭಾಗದ ಪ್ರದೇಶದಲ್ಲಿ ಹಿನ್ನೀರು ಸಂಗ್ರಹವಾಗಿರುತ್ತದೆ. ಆದರೆ, ಫೆಬ್ರುವರಿಯಲ್ಲಿ ಈ ನೀರು ಖಾಲಿಯಾಗುತ್ತಿತ್ತು. ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿತ್ತು. ಅಲ್ಲದೆ, ಸೇತುವೆ ಎರಡು ಬದಿಗೆ ಜಮೀನು ಹೊಂದಿರುವ ರೈತರ ಬೆಳೆಗಳಿಗೆ ನೀರಿಲ್ಲದೆ ಪೈರು ಒಣಗಿ ಹೋಗುತಿತ್ತು.

ರೈತರು ಕಳೆದ ಒಂದು ದಶಕದಿಂದಲೂ ಈ ಸೇತುವೆಯ ಬಾಕ್ಸ್ ಕಲ್ವರ್ಟ್‌ಗಳಿಗೆ ಗೇಟ್ ಅಳವಡಿಸಿ ಬ್ಯಾರೇಜ್ ನಿರ್ಮಿಸಲು ಸಚಿವ ಶಿವಾನಂದ ಪಾಟೀಲರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಬ್ಯಾರೇಜ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಕೆಯಾದರೂ ಅನುದಾನದ ಕೊರತೆಯ ಕಾರಣ ಸಾಧ್ಯವಾಗಿರಲಿಲ್ಲ.

ADVERTISEMENT

2012ರಲ್ಲಿ ಈ ಎರಡು ಪುನರ್ವಸತಿ ಕೇಂದ್ರಗಳನ್ನು ಸಂರ್ಪಕಿಸುವ ಉದ್ದೇಶದಿಂದ ಅಗಸರಹಳ್ಳಕ್ಕೆ ಸುಮಾರು ₹8.5 ಕೋಟಿ ವೆಚ್ಚದಲ್ಲಿ ಬಾಕ್ಸ್ ಕಲ್ವರ್ಟ್ ಮಾದರಿಯ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಗೆ ಗೇಟ್ ಅಳವಡಿಸಿದರೆ, ಜಲಾಶಯದ ಹಿನ್ನೀರು ಸೇತುವೆಯ ಹಿಂಭಾಗ ನಿಲ್ಲುತ್ತದೆ. ಇದರಿಂದ ಬೇಸಿಗೆಯಲ್ಲಿ ಜನ, ಜಾನುವಾರುಗಳು ಹಾಗೂ ಜಮೀನಿಗೆ ನೀರುಣಿಸಲು ಸಾಧ್ಯವಾಗಲಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಜತೆಗೆ ಬೇಸಿಗೆಯಲ್ಲಿ ಬೇನಾಳ ಅವಳಿ ಗ್ರಾಮಗಳು, ವಂದಾಲ, ಗೋನಾಳ ಗ್ರಾಮಗಳ ಜಮೀನಿಗೆ ಬೇಸಿಗೆಯಲ್ಲಿ ನೀರು ಪೂರೈಕೆಗೆ ಸಹಕಾರಿಯಾಗಲಿದೆ.

ಇದರ ಜತೆ ಬಾಕ್ಸ್ ಕಲ್ವರ್ಟ್‌ಗಳ ಎರಡೂ ಬದಿ ಕಟ್ಟಲಾಗಿದ್ದ ರಕ್ಷಣಾ ಗೋಡೆಯೂ ರಭಸದ ನೀರಿಗೆ ಕೊಚ್ಚಿದೆ. ಅದನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಆಡಳಿತಾತ್ಮಕ ಅನುಮೋದನೆ:

ಸ್ಥಳೀಯ ಶಾಸಕರೂ ಆದ ಸಚಿವ ಶಿವಾನಂದ ಪಾಟೀಲರ ಇಚ್ಛಾಶಕ್ತಿಯ ಕಾರಣ, ಈ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಕಳುಹಿಸಿ, ಅಲ್ಲಿಂದ ಅನುಮೋದನೆ ಪಡೆದಿದ್ದಾರೆ. ಅಗಸರ ಹಳ್ಳ ಸೇತುವೆಗೆ ಬ್ಯಾರೇಜ್ ನಿರ್ಮಿಸಲು ₹1.80 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಆಲಮಟ್ಟಿ ಸಮೀಪದ ಬೇನಾಳ ಬಳಿ ಇರುವ ಅಗಸರಹಳ್ಳ ರಸ್ತೆ ಸೇತುವೆಯ ಬಾಕ್ಸ್ ಕಲ್ವರ್ಟ್‌ಗಳ ಸೇತುವೆ
ಸಚಿವ ಶಿವಾನಂದ ಪಾಟೀಲರ ಪ್ರಯತ್ನದ ಫಲವಾಗಿ ಈ ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಇದರಿಂದ ದಶಕಗಳ ಬೇಡಿಕೆ ಈಡೇರಿದ್ದು ಬೇಸಿಗೆಯ ನೀರಿನ ಸಮಸ್ಯೆ ನಿವಾರಣೆಯಾಗಲಿದೆ
ರಮೇಶ ವಂದಾಲಅಧ್ಯಕ್ಷ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.