ADVERTISEMENT

ಸರ್ಕಾರಿ ಶಾಲೆ ಮುಚ್ಚುವುದಕ್ಕೆ ವಿರೋಧ: ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:50 IST
Last Updated 23 ನವೆಂಬರ್ 2025, 6:50 IST
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿದರು
ವಿಜಯಪುರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿದರು   

ವಿಜಯಪುರ: ರಾಜ್ಯ ಸರ್ಕಾರವು 5,900 ಕೆಪಿಎಸ್‌ಸಿ ಶಾಲೆಗಳನ್ನು ಆರಂಭಿಸುವ ಮೂಲಕ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುಲು ನಡೆಸಿರುವ ಹುನ್ನಾರವನ್ನು ವಿರೋಧಿಸಿ ಎಐಡಿಎಸ್‌ಒ ಸಂಘಟನೆಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, ರಾಜ್ಯ ಸರ್ಕಾರವು ರಾಜ್ಯದಲ್ಲಿ 700 ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದೆ. ಸರ್ಕಾರಿ ಆದೇಶದಲ್ಲಿ ತಿಳಿಸಿರುವಂತೆ ಮ್ಯಾಗ್ನೆಟ್ ಶಾಲೆಯ 3 ರಿಂದ 5 ಕಿ.ಮೀ.ವ್ಯಾಪ್ತಿಯ ಶಾಲೆಗಳನ್ನು ಈ ಶಾಲೆಗಳಲ್ಲಿ ವಿಲೀನಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿಸುವ ಕೆಲಸ ಸರ್ಕಾರವೇ ಮಾಡುತ್ತಿದೆ ಎಂದು ಆರೋಪಿಸಿದರು.

700 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಡಿ ರಾಜ್ಯದ ಸಾವಿರಾರು ಶಾಲೆಗಳು ವಿಲೀನಗೊಳ್ಳುತ್ತವೆ. ಸಮುದಾಯದ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 5,900 ಕೆಪಿಎಸ್ - ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುವ ಉದ್ದೇಶವನ್ನು ರಾಜ್ಯ ಸರ್ಕಾರವು ಹೊಂದಿದೆ. ಹೀಗಾದಲ್ಲಿ 40 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ಅಪಾಯವಿದೆ ಎಂದು ಅವರು ಹೇಳಿದರು.

ADVERTISEMENT

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ದಾಖಲಾತಿ ಕುಸಿಯುತ್ತಿರುವುದರ ಕುರಿತು ಸರ್ಕಾರವು ಕಾಳಜಿ ವ್ಯಕ್ತಪಡಿಸಿದೆ. ಹೆಚ್ಚಿನ ಗುಣಮಟ್ಟದ ಶಿಕ್ಷಣ ಒದಗಿಸಬಹುದಾದ ಶಾಲೆಯನ್ನು ಈಗಿರುವ ಶಾಲೆಗಿಂತ ಇನ್ನಷ್ಟು ದೂರದಲ್ಲಿ ಸ್ಥಾಪಿಸಿದರೆ ಯಾವ ರೀತಿ ದಾಖಲಾತಿ ಹೆಚ್ಚಾಗಲು ಸಾಧ್ಯ ಎಂಬ ಗಂಭೀರವಾದ ಪ್ರಶ್ನೆ ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನತೆಯನ್ನು ಕಾಡುತ್ತಿದೆ ಎಂದರು.

6ನೇ ತರಗತಿಯಿಂದಲೇ ವೃತ್ತಿ ಶಿಕ್ಷಣವನ್ನು ನೀಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷೆ ಸೇರಿದಂತೆ ಮೂಲ ವಿಷಯಗಳ ಜ್ಞಾನಾರ್ಜನೆಗೆ ಇದು ಹೊಡೆತ ಉಂಟು ಮಾಡುತ್ತದೆ. ವಿದ್ಯಾರ್ಥಿಗಳನ್ನು ಸ್ವತಂತ್ರ ಹಾಗೂ ವಿಚಾರಶೀಲ ಮನುಷ್ಯರನ್ನಾಗಿಸಿ ಅವರಲ್ಲಿ ಉನ್ನತ ವ್ಯಕ್ತಿತ್ವವನ್ನು ಬೆಳೆಸುವುದರ ಬದಲಿಗೆ ಕೇವಲ ಕೆಲವು ಕೌಶಲ ಕಲಿಕೆಗೆ ಶಿಕ್ಷಣವನ್ನು ಸೀಮಿತಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡುವುದು ಮತ್ತು ಶಾಲೆಗಳು ಸ್ವಂತ ಮೂಲದಿಂದ ಆದಾಯವನ್ನು ಸಂಗ್ರಹಿಸುವುದರ ಕುರಿತು ಕೂಡ ಗಮನ ಹರಿಸಲಾಗಿದೆ. ಸಾರ್ವಜನಿಕರ ತೆರಿಗೆಯನ್ನು ಸದ್ವಿನಿಯೋಗಗೊಳಿಸಿ ಸರ್ಕಾರವು ಶಿಕ್ಷಣವನ್ನು ಒದಗಿಸಬೇಕು ಮತ್ತು ನಿರಂತರವಾಗಿ ಗುಣಮಟ್ಟವನ್ನು ವೃದ್ಧಿಪಡಿಸಬೇಕು. ಇದರ ಬದಲಿಗೆ ಶಾಲೆಗಳು ಸ್ವಂತ ಮೂಲದಿಂದ ಆದಾಯ ಸಂಗ್ರಹಿಸಬೇಕೆಂಬುದು ಮತ್ತು ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುವುದು ಸಾರ್ವಜನಿಕ ಶಿಕ್ಷಣದ ಮೂಲ ಆಶಯಗಳಿಗೆ ದಕ್ಕೆ ಉಂಟುಮಾಡುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿಯಿದೆ. ಕೇವಲ ಒಬ್ಬರೇ ಶಿಕ್ಷಕರನ್ನು ಹೊಂದಿರುವ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 7ಸಾವಿರ ಇದೆ. 22 ಸಾವಿರಕ್ಕೂ ಅಧಿಕ ಶಾಲೆಗಳ ಕಟ್ಟಡಗಳು ಸೋರುವ ಛಾವಣಿ, ಬಿರಕುಬಿಟ್ಟ ಗೋಡೆ, ಕಿತ್ತು ಹೋಗಿರುವ ನೆಲದ ಹಾಸು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊಂದಿದ್ದು ವರ್ಷಗಳಿಂದ ದುರಸ್ತಿ ಕಂಡಿಲ್ಲ. 3500ಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆಯಿಲ್ಲ ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿನಿ ಸುಧಾರಾಣಿ ಕೋಲೂರ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೆ, ಶೌಚಾಲಯಗಳಿಲ್ಲದೆ, ಮೂಲ ಸೌಕರ್ಯಗಳಿಲ್ಲದೆ ಬೀಳು ಬೀಳುತ್ತಿವೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗಬೇಕಾದರೆ ಸರ್ಕಾರಿ ಶಾಲೆಗಳು ಉಳಿಬೇಕು‌ ನಾವು ಒಂದೇ ಒಂದು ಸರ್ಕಾರಿ ಶಾಲೆಗಳು ಮುಚ್ಚಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಕ್ಷತಾ ವಾಗ್ಮಡಿ, ವರದಾ ಧರ್ಮಶೆಟ್ಟಿ, ಸುಕನ್ಯಾ ಹೂಗಾರ, ಸಂಪೂರ್ಣ ಮಾಯಾಚಾರಿ, ರಾಧಿಕಾ ಕೆಂಗಾರ, ಸ್ವಪ್ನಾ ರಾಠೋಡ, ಸಾಕ್ಷಿ ಮಾದರ, ಲಕ್ಷ್ಮಿ ದೊಡ್ಡಮನಿ, ಅಶ್ವಿನಿ ಹಾದಿಮನಿ, ಅಕ್ಷತಾ ಗೌಡಪ್ಪಗೋಳ, ಭಾಗ್ಯಲಕ್ಷ್ಮಿ ಪೂಜಾರಿ ಇದ್ದರು.  

ರಾಜ್ಯ ಸರ್ಕಾರವು ಕೂಡಲೇ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಕೈಬಿಡಬೇಕು ಮತ್ತು ಶಿಕ್ಷಕರ ನೇಮಕಾತಿಯನ್ನು ಖಾತ್ರಿಪಡಿಸುವುದರೊಂದಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ ಬಲಪಡಿಸಬೇಕು
  ಕಾವೇರಿ ರಜಪೂತ ಜಿಲ್ಲಾ ಕಾರ್ಯದರ್ಶಿ ಎಐಡಿಎಸ್‌ಒ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.