ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 16ಯ ಘಟಿಕೋತ್ಸವ ಜ. 9ರಂದು ಮಧ್ಯಾಹ್ನ 12.30ಕ್ಕೆ ವಿವಿಯ ಜ್ಞಾನಶಕ್ತಿ ಆವರಣದ ಕ್ರೀಡಾ ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಮತ್ತು ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ಪಾಲ್ಗೊಳ್ಳುವರು ಎಂದರು.
ಮೂವರಿಗೆ ಗೌರವ ಡಾಕ್ಟರೇಟ್: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಮಹನೀಯರಿಗೆ ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದರು.
ಕಲಾಕ್ಷೇತ್ರದ ಸಾಧನೆಗಾಗಿ ಶಿಗ್ಗಾವಿಯ ಗೋಟಗೋಡಿ ರಾಕ್‍ಗಾರ್ಡ್‍ನ್ ನಿರ್ವಾಹಕಿ ವೇದರಾಣಿ ದಾಸನೂರು, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕಲಬುರಗಿಯ ವಿಶ್ರಾಂತ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಾಧನೆಗಾಗಿ ಚಲನಚಿತ್ರ ನಟಿ ತಾರಾ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು ಎಂದರು.
ಮಹಿಳಾ ವಿಶ್ವವಿದ್ಯಾಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 63 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.
ಈ ಘಟಿಕೋತ್ಸವದಲ್ಲಿ ಒಟ್ಟು 13,461 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು 34 ವಿದ್ಯಾರ್ಥಿನಿಯರಿಗೆ ಪಿ.ಎಚ್‌ಡಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
1,106 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು. ಈ ಪೈಕಿ ಎಂ.ಎ.365, ಎಂ.ಕಾಂ. 296, ಎಂ.ಬಿ.ಎ 49, ಎಂ.ಎಸ್.ಸಿ 304, ಎಂ.ಇಡಿ 9, ಎಂ.ಪಿಇಡಿ- 9, ಎಂ.ಎಸ್.ಡಬ್ಲ್ಯೂ 20, ಎಂ.ಸಿ.ಎ. 40 ಮತ್ತು ಎಂ.ಎಫ್.ಎಂ. 14 ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ ಎಂದರು.
ಘಟಿಕೋತ್ಸವದಲ್ಲಿ ಒಟ್ಟು 12,350 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ ಬಿ.ಎ. 5387, ಬಿ.ಎಸ್.ಡಬ್ಲ್ಯೂ 36, ಬಿ.ಇಡಿ 1663, ಬಿ.ಪಿ.ಇಡಿ 15, ಬಿ.ಕಾಂ 3536, ಬಿಬಿಎ 122, ಬಿ.ಎಸ್.ಸಿ 1413, ಬಿ.ಸಿ.ಎ 115, ಬಿ.ಎಫ್.ಟಿ 63 ಮತ್ತು ಬಿ.ಎಫ್‍ಎಡಿ 5 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ.ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ.ತಹಮೀನಾ ಕೋಲಾರ, ಐಸಿಟಿ ಸಂಯೋಜಕ ಸಂದೀಪ್ ನಾಯಕ್ ಇದ್ದರು.
ವಿವಿ ಕುಲಪತಿಗಳ ನೇಮಕದಲ್ಲಿ ವಿವಿಧ ಕ್ಷೇತ್ರಗಳ ಪರಿಣಿತರಿಗೆ ಅವಕಾಶ ನೀಡಲು ಮುಂದಾಗಿರುವ ಯುಜಿಸಿ ಕ್ರಮದ ಸಾಧಕ ಬಾಧಕದ ಬಗ್ಗೆ ಚರ್ಚೆ ಅಗತ್ಯ.–ಪ್ರೊ.ಬಿ.ಕೆ.ತುಳಸಿಮಾಲಾ ಕುಲಪತಿ ಅಕ್ಕಮಹಾದೇವಿ ಮಹಿಳಾ ವಿವಿ ವಿಜಯಪುರ
ಮಂದಿರಾ ಸೌಜನ್ಯಾಗೆ ಮೂರು ಚಿನ್ನದ ಪದಕ
ಕನ್ನಡ ಅಧ್ಯಯನ ವಿಭಾಗದಲ್ಲಿ ಮಂದಿರಾ ತೆಲಗಡೆ ಮೂರು ಹಾಗೂ ಪೂರ್ಣಿಮಾ ರುದ್ರಾಕ್ಷಿಮಠ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಎಂ.ಪಿ.ಇಡಿನಲ್ಲಿ ಸೌಜನ್ಯಾ ಜಿಂಜರವಾಡ ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಹಿಂದಿ ಅಧ್ಯಯನ ವಿಭಾಗದಲ್ಲಿ ಅಫರಿನ್ ಆರ್. ಶಿಲೇದಾರ ಎರಡು ಎಂ.ಕಾಂನಲ್ಲಿ ಯಶೋದಾ ಪೂಜಾರಿ ಎರಡು ಎಂ.ಇಡಿಯಲ್ಲಿ ಜಯಶ್ರೀ ಎಸ್.ಖೋತಾಗೆ ಎರಡು ಭೌತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಎರಡು ರಸಾಯನ ವಿಭಾಗದಲ್ಲಿ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಆಹಾರ ಸಂಸ್ಕರಣ ಮತ್ತು ಪೋಷಕಾಂಶ ಅಧ್ಯಯನ ವಿಭಾಗದಲ್ಲಿ ವನಿತಾ ಸಾವಂತ ಪಿ. ಅವರಿಗೆ ಮೂರು ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಶಿಲ್ಪಾ ಪಡೆಪ್ಪಗೋಳಗೆ ಮೂರು ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪಲ್ಲವಿ ಯರನಾಳಗೆ ಮೂರು ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆಕೊಂಡಿದ್ದಾರೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಲ್ಲಮ್ಮ ಪೂಜಾರಿ ಮತ್ತು ದೀಕ್ಷಾ ಎಂ. ಮುಚ್ಚಂಡಿ ಅವರು ತಲಾ ಒಂದು ಚಿನ್ನದ ಪದಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.