ADVERTISEMENT

ಆಲಮಟ್ಟಿ | 1.20 ಲಕ್ಷ ಕ್ಯೂಸೆಕ್ ಹೊರಹರಿವು

ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ; 99,000 ಕ್ಯೂಸೆಕ್‌ ಒಳಹರಿವು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:26 IST
Last Updated 29 ಸೆಪ್ಟೆಂಬರ್ 2025, 7:26 IST
ಆಲಮಟ್ಟಿ ಸಮೀಪದ ಕಿರಿಶ್ಯಾಳ ಗ್ರಾಮದಲ್ಲಿ ಮಳೆಯಿಂದಾ ಹಾಳಾದ ಬೆಳೆಯನ್ನು ತಹಶೀಲ್ದಾರ್ ಎ.ಡಿ. ಅಮರವಾದಗಿ ಅವರು  ಭಾನುವಾರ ಪರಿಶೀಲಿಸಿದರು 
ಆಲಮಟ್ಟಿ ಸಮೀಪದ ಕಿರಿಶ್ಯಾಳ ಗ್ರಾಮದಲ್ಲಿ ಮಳೆಯಿಂದಾ ಹಾಳಾದ ಬೆಳೆಯನ್ನು ತಹಶೀಲ್ದಾರ್ ಎ.ಡಿ. ಅಮರವಾದಗಿ ಅವರು  ಭಾನುವಾರ ಪರಿಶೀಲಿಸಿದರು    

ಆಲಮಟ್ಟಿ: ಇಲ್ಲಿನ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆಯಿದ್ದು, ಮುಂಜಾಗ್ರತಾ ಕ್ರಮವಾಗಿ 1.20 ಲಕ್ಷ ಕ್ಯೂಸೆಕ್ ನೀರನ್ನು ಭಾನುವಾರ ಹೊರಗೆ ಹರಿಸಲಾಯಿತು.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಎರಡು–ಮೂರು ದಿನದಲ್ಲಿ ಆಲಮಟ್ಟಿ ಜಲಾಶಯದ ಒಳಹರಿವು ಒಂದು ಲಕ್ಷ ಕ್ಯೂಸೆಕ್ ದಾಟಲಿದೆ. ಹೀಗಾಗಿ, ಭಾನುವಾರ ಬೆಳಿಗ್ಗೆ 90,000 ಕ್ಯೂಸೆಕ್ ಇದ್ದ ಹೊರಹರಿವನ್ನು ಮಧ್ಯಾಹ್ನ 1.20 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಜಲಾಶಯದ ಮೂಲಗಳು ಹೇಳಿವೆ.

519.60 ಮೀಟರ್‌ ಎತ್ತರದ ಆಲಮಟ್ಟಿ ಜಲಾಶಯದಲ್ಲಿ 519.57 ಮೀಟರ್‌ವರೆಗೆ ನೀರು ಸಂಗ್ರಹವಿದೆ. ಭಾನುವರ ಬೆಳಿಗ್ಗೆ 64,035 ಕ್ಯೂಸೆಕ್ ಇದ್ದ ಒಳಹರಿವು, ಸಂಜೆ 99,000 ಕ್ಯೂಸೆಕ್‌ಗೆ ಹೆಚ್ಚಳವಾಯಿತು.

ADVERTISEMENT

ಮಳೆಯಿಂದ ಬೆಳೆ ಹಾನಿ:  ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಸುತ್ತಲಿನ ಗ್ರಾಮಗಳ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ಬಹುತೇಕ ಗ್ರಾಮಗಳಲ್ಲಿ ಈರುಳ್ಳಿ, ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ, ಸಜ್ಜೆ ಹಾಳಾಗಿದೆ.  

ಯಲಗೂರು, ವಂದಾಲ, ಬೇನಾಳ, ಉಣ್ಣಿಭಾವಿ, ಅಬ್ಬಿಹಾಳ, ಹೆಬ್ಬಾಳ, ಗೊಳಸಂಗಿ, ಕಾಶೀನಕುಂಟಿ ಮೊದಲಾದ ಗ್ರಾಮಗಳಿಗೆ ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾದಗಿ, ಕಂದಾಯ ನಿರೀಕ್ಷಕ ಸಲೀಂ ಯಲಗೋಡ, ನಾನಾಗೌಡ ಪಾಟೀಲ, ಎ.ಆರ್. ಘಂಟಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾನುವಾರ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲಿಸಿದರು.

ಯಲಗೂರದಲ್ಲಿ ಮೆಕ್ಕೆಜೋಳ ಹೊಲದಲ್ಲಿ ಮಳೆ ನೀರು ನಿಂತಿರುವುದು
‘3 ದಿನ; 18 ಮನೆ ಕುಸಿತ’
‘ಈರುಳ್ಳಿ ಹಾಗೂ ತೊಗರಿ ಬೆಳೆ ಹೆಚ್ಚು ಬಾಧಿತವಾಗಿವೆ. ಮಳೆಯಿಂದ ಹಾನಿಗೀಡಾದ ಪ್ರತಿ ಹೊಲದ ಸಮೀಕ್ಷೆಯನ್ನು ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿದ್ದು ಒಂದು ವಾರದಲ್ಲಿ ನಿಖರ ಮಾಹಿತಿ ದೊರೆಯಲಿದೆ. ನಿಡಗುಂದಿ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಮೂರು ದಿನಗಳಲ್ಲಿ 18 ಮನೆಗಳು ಬಿದ್ದಿವೆ’ ಎಂದು ಎಂದು ತಹಶೀಲ್ದಾರ್ ಎ.ಡಿ. ಅಮರವಾದಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.