
ಆಲಮಟ್ಟಿ: ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ನಿರಾಶ್ರಿತ ಬಡ ಕುಟುಂಬಗಳಿಗೆ ಆಶ್ರಯ ಒದಗಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಕೊಲ್ಹಾರ ಭಾಗದ ಜನರು ಆಲಮಟ್ಟಿಯ ಯುಕೆಪಿ ಪುನರ್ವಸತಿ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ‘ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಕೊಲ್ಹಾರ ಹಳೆಯ ಗ್ರಾಮ ಮುಳುಗಡೆಯಾಗಿ ಹೊಸದಾಗಿ ನಿರ್ಮಿಸಿರುವ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಸಂತ್ರಸ್ತರಿಗೆ ತಮ್ಮ ಇಲಾಖೆಯಿಂದ ನಿವೇಶನಗಳು ಮಂಜೂರಾಗಿದೆ. ಆದರೆ ಕೆಲವು ಬಡ ಕುಟುಂಬಗಳಿಗೆ ಸಹೋದರರು ಹಾಗೂ ಮಕ್ಕಳು ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಸಮೀಕ್ಷೆಯ ವರದಿಯ ಅನುಸಾರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರಿಗೆ ಇದುವರೆಗೂ ನಿವೇಶನಗಳು ದೊರಕದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಅಲ್ಲದೇ ಪುನರ್ವಸತಿ ಕೇಂದ್ರದಲ್ಲಿ ಉದ್ಯೋಗ ಆಶ್ರಯಿಸಿ ಬಡ ಕುಟುಂಬಗಳು ಕಳೆದ 20-25 ವರ್ಷಗಳಿಂದ ಪಟ್ಟಣದಲ್ಲಿಯೇ ವಾಸವಾಗಿದ್ದರೂ ಮತ್ತು ಕೊಲ್ದಾರ ಗ್ರಾಮದವರೇ ಆಗಿದ್ದರೂ ತಾಂತ್ರಿಕ ತೊಂದರೆಯಿಂದಾಗಿ ಪುನರ್ವಸತಿ ಇಲಾಖೆಯಿಂದ ಯಾವುದೇ ನಿವೇಶನ, ಮೂಲಸೌಲಭ್ಯ ಸಿಗುತ್ತಿಲ್ಲ. ಅಂತಹ ಮೂರುನೂರು ಕುಟುಂಬಗಳ ಕೆಲವರು ಸರ್ಕಾರಿ ಜಾಗದಲ್ಲಿ, ಕೆಲವರು ರಸ್ತೆ ಬದಿಯಲ್ಲಿ, ಇನ್ನೂ ಕೆಲವರು ಹಳೇ ಗ್ರಾಮದಲ್ಲಿ ಯುಕೆಪಿ ಕಾರ್ಯಾಲಯದ ಹತ್ತಿರ, ಪ್ರವಾಸಿ ಮಂದಿರದ ಹತ್ತಿರ, ಬನ್ನಿ ಹಳ್ಳದ ಸುತ್ತಮುತ್ತ, ಮಹದೇವಪ್ಪ ದಿಬ್ಬದ ಹತ್ತಿರ, ಮತ್ತೆ ಕೆಲವು ಜಾಗಗಳಲ್ಲಿ ಪತ್ರಾಸ್ ಶೆಡ್‌ಗಳನ್ನು ಹಾಕಿಕೊಂಡು ಜನವಸತಿ ಪ್ರದೇಶವನ್ನಾಗಿ ನಿರ್ಮಾಣ ಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದಾರೆ’ ಎಂದರು.
‘ಕಳೆದ 30 ವರ್ಷಗಳಿಂದ ಕೊಲ್ದಾರ ಪುನರ್ವಸತಿ ಕೇಂದ್ರದಲ್ಲಿ ನೆಲೆ ನಿಂತು ಇಲ್ಲಿನ ರಹವಾಸಿಗಳಾಗಿ ಆಧಾರ್, ಪಡಿತರ ಚೀಟಿ, ಮತದಾರರ ಯಾದಿ, ವಿದ್ಯುತ್ ಸಂಪರ್ಕದ ಆರ್‌ಆರ್ ಸಂಖ್ಯೆಯನ್ನು ಹೊಂದಿದ್ದಾರೆ. ಇಲ್ಲಿನ ಮೂಲ ನಿವಾಸಿಗಳು ಆಗಿರುವುದರಿಂದ ಈ ಎಲ್ಲ ಕುಟುಂಬಗಳ ನಿರಾಶ್ರಿತರ ಬದುಕಿಗೆ ಪುನರ್ವಸತಿ ಕೇಂದ್ರದಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ವಿಜಯ ಪೂಜಾರ್, ಮುಸ್ತಾಫ ಮುಲ್ಲಾ, ಬಸಲಿಂಗಪ್ಪ ಕಾಜಗಾರ, ಅಮೀರ ಹಾದಿಮನಿ, ಸಿಕಂದರ ಬಡೆಘರ, ಮೌಲಾಸಾಬ ಶೇಖ್, ಪ್ರಶಾಂತ ಪವಾರ, ಹಸನಸಾಬ ಮಂಗಳವಾಡೆ, ಹಸನಸಾಬ ಕೊರ್ತಿ, ಮೈಬೂಬ ಮುಲ್ಲಾ, ಮೌಲಾಲಿ ಮಂಗಳವಾಡೆ, ಹುಸೇನಸಾಬ ಯಂಡಿಗೇರಿ, ಆದಮ್ ಮುಜಾವರ, ಅಲ್ಲಾಭಕ್ಷ ಹೊನ್ಯಾಳ, ಸಾಧಿಕ್ ಯಾದವಾಡ, ಎಚ್.ಎಂ.ಅವಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.