ADVERTISEMENT

ಆಲಮಟ್ಟಿ: ಸೇನಾ ಅಧಿಕಾರಿಗಳ ಭೇಟಿ

ಪ್ರವಾಹ ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 7:31 IST
Last Updated 7 ಜೂನ್ 2025, 7:31 IST
ಕೃಷ್ಣಾ ತೀರದ ಪ್ರವಾಹ ನಿರ್ವಹಿಸಲು ಅಗತ್ಯ ಮಾಹಿತಿ ಸಂಗ್ರಹಿಸಲು ಭೂಸೇನೆಯ ಅಧಿಕಾರಿಗಳ ತಂಡ ಬುಧವಾರ ಪ್ರವಾಹ ಉಂಟಾಗಬಹುದಾದ ಗ್ರಾಮಗಳಿಗೆ ತೆರಳಿ ಸಮೀಕ್ಷೆ ನಡೆಸಿ ಅಗತ್ಯ ಸಿದ್ಧತೆಯ ಬಗ್ಗೆ ತಾಲ್ಲೂಕು ಆಡಳಿತದೊಂದಿಗೆ ಚರ್ಚಿಸಿದರು
ಕೃಷ್ಣಾ ತೀರದ ಪ್ರವಾಹ ನಿರ್ವಹಿಸಲು ಅಗತ್ಯ ಮಾಹಿತಿ ಸಂಗ್ರಹಿಸಲು ಭೂಸೇನೆಯ ಅಧಿಕಾರಿಗಳ ತಂಡ ಬುಧವಾರ ಪ್ರವಾಹ ಉಂಟಾಗಬಹುದಾದ ಗ್ರಾಮಗಳಿಗೆ ತೆರಳಿ ಸಮೀಕ್ಷೆ ನಡೆಸಿ ಅಗತ್ಯ ಸಿದ್ಧತೆಯ ಬಗ್ಗೆ ತಾಲ್ಲೂಕು ಆಡಳಿತದೊಂದಿಗೆ ಚರ್ಚಿಸಿದರು   

ಆಲಮಟ್ಟಿ: 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ 55.4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 5885 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಗುರುವಾರ ಸಂಜೆಯಿಂದ ಹೊರಹರಿವು ಸ್ಥಗಿತಗೊಂಡಿದೆ. 

ಮೇ 19 ರಿಂದ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಮೇ 19 ರಿಂದ ಜೂ 5 ರ ವರೆಗೆ 36 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಮೇ 29 ರಿಂದ ಜಲಾಶಯದಿಂದ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದ್ದು, ಇಲ್ಲಿಯವರೆಗೆ ಸುಮಾರು 4 ಟಿಎಂಸಿ ಅಡಿ ನೀರನ್ನು ಹೊರಬಿಡಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

68 ಟಿಎಂಸಿ ಅಡಿ ನೀರು ಅಗತ್ಯ

ADVERTISEMENT

ಜಲಾಶಯ ಭರ್ತಿಯಾಗಲು ಇನ್ನೂ 68 ಟಿಎಂಸಿ ಅಡಿ ನೀರು ಅಗತ್ಯ. ಆದರೂ ಜಲಾಶಯದಿಂದ ನೀರು ಬಿಟ್ಟಾಗ ಕೃಷ್ಣಾ ತೀರದ ಪ್ರವಾಹ ಉಂಟಾಗುವ ಸ್ಥಳಗಳಿಗೆ ಮೂರ್ನಾಲ್ಕು ಬಾರಿ ತಾಲ್ಲೂಕು ಆಡಳಿತದ ಅಧಿಕಾರಿಗಳು ಭೇಟಿ ಮಾಡಿ, ನೀರಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಜಲಾಶಯದಿಂದ ನೀರು ಬಿಟ್ಟಾಗಲೂ ಡಂಗೂರದ ಮೂಲಕ ನದಿ ತೀರದ ಜನರಿಗೆ ನದಿಗೆ ಇಳಿಯದಂತೆ ತಿಳಿಸಲಾಗುತ್ತಿದೆ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರಾವದಗಿ ತಿಳಿಸಿದರು.

ಆರೋಗ್ಯ ಇಲಾಖೆಗೂ ಸೂಚನೆ ನೀಡಿದ್ದು, ಆರೋಗ್ಯ ಕಾರ್ಯಕರ್ತರು ಲಾರ್ವಾ ಸಮೀಕ್ಷೆ ಸೇರಿದಂತೆ ಕೃಷ್ಣಾ ತೀರದ ಗ್ರಾಮಸ್ಥರ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎಂದರು.

ಅಗ್ನಿಶಾಮಕ ದಳದಲ್ಲಿ ಬೋಟ್ ಕೂಡಾ ಇದ್ದು, ತುರ್ತು ಅಗತ್ಯವಿದ್ದರೆ, ಬೋಟ್ ಅನ್ನು ತರಿಸಲಾಗುವುದು ಎಂದರು.

ಸೇನಾ ಅಧಿಕಾರಿಗಳ ಭೇಟಿ

ಒಂದು ವೇಳೆ ಪ್ರವಾಹ ಸ್ಥಿತಿ ಹೆಚ್ಚಿದರೇ ಜಿಲ್ಲಾಡಳಿತದಿಂದಲೂ ನಿಯಂತ್ರಣಕ್ಕೆ ಸಾಧ್ಯವಾಗದಿದ್ದರೇ ಭಾರತೀಯ ಸೇನೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿದ್ಧತೆ ನಡೆಸಲು ಭೂಸೇನೆಯ ಅಧಿಕಾರಿಗಳಾದ ಅಭಯ ಯಾದವ ಹಾಗೂ ಸಂಜೀವ ಅವರ ತಂಡ ಬುಧವಾರ ಕೃಷ್ಣಾ ತೀರದ ಗ್ರಾಮಗಳಿಗೆ ಭೇಟಿ ನೀಡಿ, ತಾಲ್ಲೂಕು ಆಡಳಿತದೊಂದಿಗೂ ಚರ್ಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.