
ಆಲಮಟ್ಟಿ: ಪ್ರವಾಸಿ ತಾಣ ಆಲಮಟ್ಟಿಯ ರಾಕ್ ಉದ್ಯಾನದಲ್ಲಿರುವ ಸಿಲ್ವರ್ ಲೇಕ್‌ನಲ್ಲಿ ಕಳೆದ 9 ವರ್ಷಗಳಿಂದ ಸ್ಥಗಿತಗೊಂಡಿದ್ದ ಬೋಟಿಂಗ್ ಆರಂಭವಾಗುವ ಲಕ್ಷಣಗಳು ಗೋಚರಿಸಿದ್ದು, ಪ್ರವಾಸಿಗರಲ್ಲಿ ಹರ್ಷ ಮೂಡಿಸಿದೆ.
ಈಗಾಗಲೇ 9 ಹೊಸ ಬೋಟ್‌ಗಳು ಆಲಮಟ್ಟಿಯ ರಾಕ್ ಉದ್ಯಾನಕ್ಕೆ ಬಂದಿದ್ದು, ಎಲ್ಲಾ ಸಿದ್ಧತೆ ಪೂರ್ಣಗೊಂಡು ಬಹುತೇಕ ಡಿ.15 ರೊಳಗೆ ಬೋಟಿಂಗ್ ಆರಂಭವಾಗುವ ಸಾಧ್ಯತೆಯಿದೆ. ಕೆಬಿಜೆಎನ್‌ಎಲ್ ಅರಣ್ಯ ಇಲಾಖೆಯ ವತಿಯಿಂದ 2006 ಏಪ್ರಿಲ್ 21 ರಿಂದಲೇ ಪ್ರವಾಸಿಗರಿಗಾಗಿ ಪ್ಯಾಡೆಲ್ ಬೋಟಿಂಗ್ ಕಾರ್ಯಾಚರಣೆ ಆರಂಭಗೊಂಡಿತ್ತು. ಆಗ ಇಡೀ ಜಿಲ್ಲೆಯಲ್ಲಿಯೇ ಪ್ರವಾಸಿಗರಿಗಾಗಿ ಇದ್ದ ಏಕೈಕ ಬೋಟಿಂಗ್ ತಾಣ ಇದಾಗಿತ್ತು. ಇದು ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸಿತ್ತು. ಆದರೆ, 2016ರಲ್ಲಿ ಬೋಟಿಂಗ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಲ್ವರ್ ಲೇಕ್ ನಡಿ (9 ಅಡಿ ಆಳ ಇರುವ) ಬಿದ್ದು ಮೃತಪಟ್ಟಿದ್ದ. ಈ ಘಟನೆ ನಂತರ ಬೋಟಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ನಾನಾ ತಾಂತ್ರಿಕ, ಕಾನೂನು ಸಮಸ್ಯೆಯ ಕಾರಣ ಬೋಟಿಂಗ್ ಆರಂಭಗೊಳ್ಳಲೇ ಇಲ್ಲ. ಆಲಮಟ್ಟಿಗೆ ನಿತ್ಯ ಬರುತ್ತಿದ್ದ ಸಹಸ್ರಾರು ಪ್ರವಾಸಿಗರು ಬೋಟಿಂಗ್ ಇಲ್ಲದೇ ನಿರಾಶೆ ಹಾಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಡಿಸೆಂಬರ್ ಹಾಗೂ ಜನವರಿ ಪ್ರವಾಸಿ ಸೀಸನ್ ಆಗಿದ್ದು, ಈಗ ಬೋಟಿಂಗ್ ಆರಂಭಗೊಳ್ಳುತ್ತಿರುವುದು ಸಂತಸಕ್ಕೆ ಕಾರಣವಾಗಿದೆ.
ಬೋಟಿಂಗ್ ಶುಲ್ಕ: ಪೆಡೆಲ್ ಬೋಟ್, ಸ್ಪೀಡ್ ಬೋಟ್, ಕಯಾಕಿಂಗ್, ಚಾರ್ಬಿಂಗ್, ರಾಫ್ಟಿಂಗ್, ರೋಯಿಂಗ್, ಸೇರಿದಂತೆ ನಾನಾ ಬೋಟ್ ಗಳು ಕಾರ್ಯನಿರ್ವಹಿಸಲಿದ್ದು, ಒಂದು ರೈಡ್‌ಗೆ ಪ್ರತಿ ವ್ಯಕ್ತಿಗೆ ₹50 ಹಾಗೂ ₹100 ದರ ನಿಗದಿಗೊಳಿಸಲಾಗಿದೆ.
ವಾರ್ಷಿಕ ₹11.50 ಲಕ್ಷಗೆ ಟೆಂಡರ್ ಆಗಿದ್ದು, ಬೋಟ್ ಗಳನ್ನು ಗುತ್ತಿಗೆದಾರರೇ ತಂದು ನಿರ್ವಹಿಸಬೇಕು. ಜತೆಗೆ ಎಲ್ಲಾ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು. ಬೋಟಿಂಗ್ ಮಾಡುವ ಪ್ರತಿ ಪ್ರವಾಸಿಗರೂ ಲೈಫ್ ಜಾಕೆಟ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಬೋಟಿಂಗ್ ಟೆಂಡರ್ ಪ್ರಕ್ರಿಯೆ ಅಗ್ರಿಮೆಂಟ್ ಹಂತದಲ್ಲಿದ್ದು 15 ದಿನಗಳ ಒಳಗಡೆ ಬೋಟಿಂಗ್ ಕಾರ್ಯಾಚರಣೆ ಆರಂಭಗೊಳ್ಳಲಿದೆ–ಡಿ.ಬಸವರಾಜ, ಆಲಮಟ್ಟಿ ಅಣೆಕಟ್ಟು ವಲಯ ಮುಖ್ಯ ಎಂಜಿನಿಯರ್
ಸರ್ಕಾರದ ನಿಯಮಾವಳಿ ಪ್ರಕಾರ ಸುರಕ್ಷತೆಯ ಎಲ್ಲಾ ಮಾನದಂಡಗಳನ್ನು ಅನುಸರಿಸುತ್ತಿದ್ದು 9 ಹೊಸ ಬೋಟ್ ಗಳನ್ನೇ ಖರೀದಿಸಿ ತಂದಿರುವೆ. ಶೀಘ್ರದಲ್ಲಿಯೇ ಬೋಟಿಂಗ್ ಆರಂಭಿಸುವೆ–ಬಸವರಾಜ ಅನಗವಾಡಿ, ಬೋಟಿಂಗ್ ಗುತ್ತಿಗೆದಾರ