ADVERTISEMENT

ಆಲಮಟ್ಟಿ: 2.20 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ಮತ್ತೇ ಪ್ರವಾಹದ ಆತಂಕ ಸೃಷ್ಠಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 15:24 IST
Last Updated 16 ಆಗಸ್ಟ್ 2020, 15:24 IST
ಆಲಮಟ್ಟಿ ಜಲಾಶಯದಿಂದ 2.20 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದ್ದು, ಇದರಿಂದ ಕೃಷ್ಣಾ ನದಿಯ ಅಬ್ಬರ ಹೆಚ್ಚಿದೆ
ಆಲಮಟ್ಟಿ ಜಲಾಶಯದಿಂದ 2.20 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದ್ದು, ಇದರಿಂದ ಕೃಷ್ಣಾ ನದಿಯ ಅಬ್ಬರ ಹೆಚ್ಚಿದೆ   

ಆಲಮಟ್ಟಿ(ವಿಜಯಪುರ): ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆಯಿದ್ದು, ಆಲಮಟ್ಟಿ ಜಲಾಶಯದ ಹೊರಹರಿವನ್ನು ಭಾನುವಾರ ಹೆಚ್ಚಿಸಲಾಗಿದೆ.

ಬೆಳಿಗ್ಗೆ 1.50 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿತ್ತು, ಸಂಜೆಯ ವೇಳೆಗೆ ಅದು 2.20 ಲಕ್ಷ ಕ್ಯುಸೆಕ್ ಗೆ ಏರಿಸಲಾಗಿದೆ. ಮುಂದಿನ ಎರಡು ಮೂರು ದಿನದಲ್ಲಿ ಕೃಷ್ಣಾ ನದಿಗೆ ಅಂದಾಜು 25 ಟಿಎಂಸಿ ಅಡಿಯಷ್ಟು ನೀರು ಹರಿದು ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

‘ಭಾನುವಾರ ಬೆಳಿಗ್ಗೆ 519.20 ಮೀ. ಇದ್ದ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ಮುಂಜಾಗ್ರತಾ ಕ್ರಮವಾಗಿ ಸೋಮವಾರ ಮಧ್ಯಾಹ್ನದ ವೇಳೆಗೆ 518.50 ಮೀ ಗೆ ಇಳಿಸಲಾಗುವುದು' ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದರು.

ADVERTISEMENT

ಜಲಾಶಯದ ಒಳಹರಿವು ಭಾನುವಾರ ಸಂಜೆಗೆ 1.35 ಲಕ್ಷ ಕ್ಯುಸೆಕ್ ತಲುಪಿದೆ. ಜಲಾಶಯದ ಮುಂಭಾಗದ ಕೂಡಲಸಂಗಮದ ಬಳಿಯೂ ಮಲಪ್ರಭಾ ನದಿಯ ಹರಿವು ಆರಂಭಗೊಂಡಿದೆ. ಇದರಿಂದ ಆಲಮಟ್ಟಿ ಜಲಾಶಯದ ಮುಂಭಾಗ, ನಾರಾಯಣಪುರ ಜಲಾಶಯದ ಹಿನ್ನೀರಿನ ಕೃಷ್ಣಾ ತೀರದ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ಮುಂದಿನ ಮೂರು ದಿನಗಳ ಕಾಲ ಜಲಾಶಯದ ಮುಂಭಾಗದ ಕೃಷ್ಣಾ ತೀರದಲ್ಲಿ ನೆರೆಯ ಆತಂಕ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.