
ಆಲಮಟ್ಟಿ: ಆಲಮಟ್ಟಿ-ಕುಷ್ಟಗಿ ಹಾಗೂ ಆಲಮಟ್ಟಿ-ಯಾದಗಿರಿ ನೂತನ ಎರಡು ರೈಲು ಮಾರ್ಗದ ನಿರ್ಮಾಣಕ್ಕೆ ಡಿಪಿಆರ್ ಹಾಗೂ ಸಮೀಕ್ಷೆಗೆ ಟೆಂಡರ್ ಕರೆಯಲಾಗಿದ್ದು, ಹಲವು ದಶಕಗಳ ಕನಸು ಮತ್ತೇ ಚಿಗುರೊಡೆದಿದೆ.
‘ಆಲಮಟ್ಟಿ-ಕುಷ್ಟಗಿ (ಅಂದಾಜು 91 ಕಿ.ಮೀ) ನೂತನ ಹೊಸ ರೈಲು ಮಾರ್ಗದ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಈ ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್) 2026 ರ ಮೇ ಒಳಗಾಗಿ ಪೂರ್ಣಗೊಳ್ಳಲಿದೆ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಡಿ.17 ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಆಲಮಟ್ಟಿ, ಕೂಡಲಸಂಗಮ, ಹುನಗುಂದ, ಇಳಕಲ್ ಮೂಲಕ ಈ ಮಾರ್ಗ ಕುಷ್ಟಗಿ ತಲುಪಲಿದೆ. ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮಕ್ಕೂ ರೈಲು ಸಂಪರ್ಕ ಒದಗಿ ಬರಲಿದೆ. ಈ ಮಾರ್ಗ ನಿರ್ಮಾಣಕ್ಕೆ ಇಳಕಲ್ ಭಾಗದ ಜನತೆಯ ಒತ್ತಡ ಹೆಚ್ಚಿತ್ತು.
ಆಲಮಟ್ಟಿಯಿಂದ ಚಿತ್ರದುರ್ಗ ಮೂಲಕ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ನೆರವಾಗುವ ಆಲಮಟ್ಟಿ-ಕುಷ್ಟಗಿ ಮಾರ್ಗ ನಿರ್ಮಾಣದ ಮೂಲಕ ವಿಜಯಪುರದಿಂದ ಬೆಂಗಳೂರಿಗೆ ಕಡಿಮೆ ಸಮಯದಲ್ಲಿ ತಲುಪಬಹುದು. ಈಗಾಗಲೇ ತಳಕಲ್ ನಿಂದ ಕುಷ್ಟಗಿ ವರೆಗೆ ಗದಗ-ವಾಡಿ ರೈಲು ಮಾರ್ಗ ಪೂರ್ಣಗೊಂಡಿದೆ. ತಳಕಲ್ ಮೂಲಕ ಹೊಸಪೇಟೆಯನ್ನು ತಲುಪಲು ಕೂಡಾ ಈ ಮಾರ್ಗ ನೆರವಾಗಲಿದೆ.
ಗದಗ-ವಾಡಿ ರೈಲು ಮಾರ್ಗ ಪೂರ್ಣಗೊಂಡರೆ ಕುಷ್ಟಗಿಯ ಮೂಲಕವೂ ವಾಡಿಗೂ ತಲುಪಲು ಈ ಮಾರ್ಗ ನೆರವಾಗಲಿದೆ.
ಆಲಮಟ್ಟಿ-ಯಾದಗಿರಿ ಮಾರ್ಗ:
ಬ್ರಿಟಿಷ್ ಆಡಳಿತದಲ್ಲಿ (1930 ರ ದಶಕದಲ್ಲಿ) ನಿರ್ಮಾಣ ಹಂತದಲ್ಲಿದ್ದು, 10 ಕಿ.ಮೀ ನಿರ್ಮಾಣ ಪೂರ್ಣಗೊಂಡ ನಂತರ ನೆನೆಗುದಿಗೆ ಬಿದ್ದಿದ್ದ ಆಲಮಟ್ಟಿ-ಯಾದಗಿರಿ ನೂತನ ರೈಲು ಮಾರ್ಗ ನಿರ್ಮಾಣದ (162 ಕಿ.ಮೀ ಉದ್ದ) ಅಂತಿಮ ಹಂತದ ಸ್ಥಳಗಳ ಸಮೀಕ್ಷೆಗೆ ನೈರುತ್ಯ ರೈಲ್ವೆ ವಲಯ ಟೆಂಡರ್ ಕರೆದಿದೆ. ಇದರಿಂದ ಈ ಮಾರ್ಗ ಹಾದು ಹೋಗುವ ಮತ್ತು ರೈಲ್ವೆ ನಿಲ್ದಾಣಗಳ ಸ್ಥಳಗಳು ನಿಗದಿಯಾಗಲಿದೆ.
ಆಲಮಟ್ಟಿ, ನಿಡಗುಂದಿ, ಹುಲ್ಲೂರು, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ ಮಾರ್ಗವಾಗಿ ಯಾದಗಿರಿಯನ್ನು ತಲುಪಲಿದೆ.
9 ದಶಕಗಳಿಂದ ಈ ರೈಲು ಮಾರ್ಗ ಹಾದುಹೋಗುವ ಬಹುತೇಕ ಪಟ್ಟಣಗಳಲ್ಲಿಯೂ ಹೋರಾಟ ನಡೆದು ಸಂಸದರ ಮೇಲೆ ಒತ್ತಡ ಹೇರಲಾಗುತ್ತಿತ್ತು. ಅದು ಕೂಡಾ ಈಗ ನನಸಾಗುವ ಹಂತಕ್ಕೆ ಬಂದು ತಲುಪಿದೆ.
ಈ ಎರಡು ನೂತನ ರೈಲು ಮಾರ್ಗ ಅನುಷ್ಠಾನಗೊಂಡರೆ ಈ ಭಾಗದ ಜನರ ಬಹುದಿನಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಕೇಂದ್ರದ ಈ ಕ್ರಮ ಸ್ವಾಗತಾರ್ಹಭರತರಾಜ ದೇಸಾಯಿ, ಅಧ್ಯಕ್ಷ ಆಲಮಟ್ಟಿ ರೈಲ್ವೆ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.