ADVERTISEMENT

ರೈಲ್ವೆ ಮೇಲ್ಸೆತುವೆ: ಆಲಮಟ್ಟಿ- ನಿಡಗುಂದಿ ಒಂದು ತಿಂಗಳು ಪರ್ಯಾಯ ಮಾರ್ಗ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 2:47 IST
Last Updated 27 ಡಿಸೆಂಬರ್ 2025, 2:47 IST
ಆಲಮಟ್ಟಿ ಬಳಿ ಗದಗ- ಹುಟಗಿ ರೈಲು ಮಾರ್ಗದ ಮೇಲ್ಭಾಗದಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ
ಆಲಮಟ್ಟಿ ಬಳಿ ಗದಗ- ಹುಟಗಿ ರೈಲು ಮಾರ್ಗದ ಮೇಲ್ಭಾಗದಲ್ಲಿ ಹೊಸದಾಗಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ   

ಆಲಮಟ್ಟಿ: ಆಲಮಟ್ಟಿ ಡ್ಯಾಂ ಸೈಟ್ ಮತ್ತು ನಿಡಗುಂದಿ ಪಟ್ಟಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆಗೆ ಅಡ್ಡಲಾಗಿ ರೈಲ್ವೆ ಮೇಲ್ಸೇತುವೆ (ಮರಿಮಟ್ಟಿಯ ಹನುಮಂತ ದೇವಸ್ಥಾನದ ಬಳಿಯ) ಪಕ್ಕ ಮತ್ತೊಂದು ಸೇತುವೆ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ಈಗಿರುವ ಹಳೆ ರೈಲ್ವೆ ಹಳಿಯ ಮೇಲ್ಸೇತುವೆಗೆ ನಾಲ್ಕು ದಶಕಗಳ ಇತಿಹಾಸವಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಆಲಮಟ್ಟಿ- ಸೀತಿಮನಿ ಮಧ್ಯೆ ಬ್ರಿಟಿಷ್ ಕಾಲದಿಂದಲೂ ಮೊದಲಿದ್ದ ಹಳೆ ರೈಲ್ವೆ ಸೇತುವೆ ಮುಳುಗಡೆಯಾಗುತ್ತಿತ್ತು. ಅದಕ್ಕಾಗಿ ಆಲಮಟ್ಟಿ ಜಲಾಶಯದ ಮುಂಭಾಗದಿಂದ ಮತ್ತೊಂದು ಅರ್ಧ ಚಂದ್ರಾಕೃತಿಯ ರೀತಿ ಹೊಸ ನೂತನ ರೈಲು ಮಾರ್ಗ ನಿರ್ಮಾಣಕ್ಕೆ 1976 ರಲ್ಲಿ ಚಾಲನೆ ನೀಡಲಾಯಿತು.

ಆಗ ಆಲಮಟ್ಟಿ- ನಿಡಗುಂದಿ ಮಧ್ಯೆ ರಸ್ತೆ ಸಂಪರ್ಕಕ್ಕೆ ರೈಲು ಮಾರ್ಗ ತೊಡಕಾದಾಗ, ರೈಲ್ವೆ ಹಳಿ ಮೇಲ್ಭಾಗದಲ್ಲಿ ರಸ್ತೆಗಾಗಿ ಮೇಲ್ಸೇತುವೆ 1980ರಲ್ಲಿ ನಿರ್ಮಿಸಲಾಯಿತು. ಈಗ ಗದಗ- ಹುಟಗಿ ದ್ವಿಪಥ ರೈಲು ಮಾರ್ಗಕ್ಕೆ ಈ ರಸ್ತೆ ಮೇಲ್ಸೆಸೇತುವೆ ಚಿಕ್ಕದಾಗಿದ್ದು, ಅದರ ಪಕ್ಕದಲ್ಲಿ ಗುಡ್ಡ ಒಡೆದು ರೈಲು ಮಾರ್ಗ ವಿಸ್ತರಿಸಲು ತೊಡಕಾಗಿದೆ. ಅದಕ್ಕಾಗಿ ಈಗಿರುವ ಸೇತುವೆಯ ಪಕ್ಕದಲ್ಲಿ 60 ಅಡಿ ಉದ್ದದ ಮತ್ತೊಂದು ಸೇತುವೆ ನಿರ್ಮಿಸಲಾಗುತ್ತಿದೆ.

ADVERTISEMENT

ಕಾಮಗಾರಿಗೆ ಮಾರ್ಚ್‌ ಗಡುವು: 60 ಅಡಿ ಉದ್ದ 27 ಅಡಿ ಅಗಲದ ಹೊಸ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಹಳೆ ಸೇತುವೆಯ ಮೇಲಿದ್ದ ನೀರಿನ ಪೈಪಲೈನ್ ಗಳಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತಿದೆ.

ಈ ಸೇತುವೆ ನಿರ್ಮಾಣಕ್ಕಾಗಿ ಆಲಮಟ್ಟಿ- ನಿಡಗುಂದಿ ರಸ್ತೆಯನ್ನು ಈಗಾಗಲೇ ಬಂದ್ ಮಾಡಲಾಗಿದೆ. ನಿಡಗುಂದಿಗೆ ಹೋಗಲು ಜನ ಆಲಮಟ್ಟಿ ಪೆಟ್ರೋಲ್ ಪಂಪ್ ಮಾರ್ಗದ ಮೂಲಕ ಸುತ್ತಿ ಹೋಗಬೇಕಿದೆ. ಜನವರಿ ತಿಂಗಳ ಕೊನೆಯಲ್ಲಿ ಹಳೆ ಸೇತುವೆಯ ಮೇಲೆಯೆ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಮಾರ್ಚ್ ಅಂತ್ಯಕ್ಕೆ ಹೊಸ ಸೇತುವೆ ಪೂರ್ಣಗೊಂಡು, ಹಳೆ ಸೇತುವೆ ಒಡೆಯಲಾಗುತ್ತದೆ ಎಂದು ತಿಳಿಸಿದ್ದು, ಅಲ್ಲಿಯೇ ಕೆಎಸ್‌ಐಎಸ್‌ಎಫ್ ಪೊಲೀಸರು ವಾಹನ ತಪಾಸಣೆಗಾಗಿ ಇರುವ ಚೆಕ್ ಪೋಸ್ಟ್ ಕೂಡಾ ಒಡೆದು ಹೊಸ ಸೇತುವೆ ಬಳಿ ಹೊಸದಾಗಿ ನಿರ್ಮಿಸಲಾಗುತ್ತದೆ ಎಂದರು.

ಹೊಸ ತಂತ್ರಜ್ಞಾನದ ಮೂಲಕ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ. ಅದಕ್ಕಾಗಿ ಭಾರಿ ಗಾತ್ರದ ಬೃಹತ್ ಯಂತ್ರಗಳು ಬಂದಿವೆ.

ಹಳೆ ಸೇತುವೆ 1980ರಲ್ಲಿ ನಿರ್ಮಾಣಗೊಂಡಿತ್ತು. ಈಗ ವಿಶಾಲವಾಗಿ ಸೇತುವೆ ನಿರ್ಮಿಸುತ್ತಿರುವುದರಿಂದ ಕೆಳಗಡೆ ರೈಲ್ವೆ ದ್ವಿಪಥ ಹಳಿ ಹಾಕಲು ಸಾಧ್ಯವಾಗಲಿದೆ
ಯಲಗೂರದಪ್ಪ ವಿಶ್ವನಾಥ ಹುಂಡೇಕಾರ, ಆಲಮಟ್ಟಿ ನಿವಾಸಿ
ಸೇತುವೆ ನಿರ್ಮಾಣಕ್ಕಾಗಿ ಬಂದಾಗಿರುವ ಆಲಮಟ್ಟಿ- ನಿಡಗುಂದಿ ರಸ್ತೆ
ನೆನಪಾಗಲಿರುವ ಹಳೆ ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.