ADVERTISEMENT

ಆಲಮಟ್ಟಿ ಜಲಾಶಯ ಹೊರಹರಿವು ಹೆಚ್ಚಳ

ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:26 IST
Last Updated 17 ಜೂನ್ 2025, 14:26 IST
ಆಲಮಟ್ಟಿ ಜಲಾಶಯದ ಹಿನ್ನೀರಿನ ಮಂಗಳವಾರದ ದೃಶ್ಯ
ಆಲಮಟ್ಟಿ ಜಲಾಶಯದ ಹಿನ್ನೀರಿನ ಮಂಗಳವಾರದ ದೃಶ್ಯ   

ಆಲಮಟ್ಟಿ: ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸೋಮವಾರದಿಂದ ಭಾರಿ ಮಳೆ ಮುಂದುವರಿದಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ನಿರೀಕ್ಷೆ ಇರುವುದರಿಂದ ಆಲಮಟ್ಟಿ ಜಲಾಶಯದಿಂದ ಹೊರಹರವು ಪ್ರಮಾಣವನ್ನು ಮಂಗಳವಾರದಿಂದ ಹೆಚ್ಚಳ ಮಾಡಲಾಗಿದೆ.

ಎರಡು ದಿನದೊಳಗೆ ಆಲಮಟ್ಟಿ ಜಲಾಶಯದ ಒಳಹರಿವು 50 ಸಾವಿರ ಕ್ಯೂಸೆಕ್ ದಾಟುವ ನಿರೀಕ್ಷೆ ಇದ್ದು, ಸದ್ಯ ಒಳಹರಿವು 20,895 ಕ್ಯೂಸೆಕ್ ಇದ್ದರೂ, ಹೊರಹರಿವನ್ನು 15 ಸಾವಿರ ಕ್ಯೂಸೆಕ್‌ನಿಂದ 30 ಸಾವಿರ ಕ್ಯೂಸೆಕ್ ಗೆ ಮಂಗಳವಾರ ಬೆಳಿಗ್ಗೆ 10 ಕ್ಕೆ ಹೆಚ್ಚಿಸಲಾಗಿದೆ.

519.60 ಮೀ. ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಮಂಗಳವಾರ 515.20 ಮೀ ಎತ್ತರದವರೆಗೆ ನೀರು ಇತ್ತು. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 65 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಕೊಯ್ನಾ 137 ಮಿ.ಮೀ, ನವಜಾ 128 ಮಿ.ಮೀ, ಮಹಾಬಳೇಶ್ವರ 125 ಮಿ.ಮೀ, ರಾಧಾನಗರಿ‌128 ಮಿ.ಮೀ, ವಾರಣಾ 113 ಮಿ.ಮೀ, ದೂಧಗಂಗಾ 69 ಮಿ.ಮೀ, ತರಳಿ 50 ಮಿ.ಮೀ ಮಳೆಯಾಗಿದೆ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಜಲಾಶಯಗಳು ಸರಾಸರಿ ಶೇ 40 ರಷ್ಟು ಭರ್ತಿಯಾಗಿವೆ.

ADVERTISEMENT

ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣಾ ನದಿಯ ಹರಿವು 44,125 ಕ್ಯೂಸೆಕ್ ಇದೆ. ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಬಂದು ಸೇರುವ ದೂಧಗಂಗಾ ನದಿಯ ಹರಿವು 12,000 ಕ್ಯೂಸೆಕ್ ಇದ್ದು, ಘಟಪ್ರಭಾ ನದಿಯ ಹರಿವು 8000 ಕ್ಯೂಸೆಕ್ ಇದೆ.

ಈ ನೀರು ಮುಂದಿನ 48 ಗಂಟೆಯಿಂದ 72 ಗಂಟೆಯೊಳಗೆ ಆಲಮಟ್ಟಿ ಜಲಾಶಯ ತಲುಪಲಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.

ವಿದ್ಯುತ್ ಉತ್ಪಾದನೆ: ಹೊರಹರಿವು 30 ಸಾವಿರ ಕ್ಯೂಸೆಕ್ ಗೆ ಹೆಚ್ಚಿಸಿದ್ದರಿಂದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ತಲಾ 55 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ನಾಲ್ಕು ಘಟಕಗಳು ಕಾರ್ಯಾರಂಭ ಮಾಡಿವೆ. ಅದರಿಂದ 175 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ವಿದ್ಯುತ್ ಉತ್ಪಾದನಾ ಘಟಕದ ಮೂಲಗಳು ತಿಳಿಸಿವೆ.

ಒಟ್ಟಾರೆ ಜುಲೈ ತಿಂಗಳಲ್ಲಿ ಹೊರಹರಿವು ಆರಂಭಗೊಳ್ಳುತ್ತಿತ್ತು. ಆದರೆ ಈ ವರ್ಷ ಒಂದು ತಿಂಗಳ ಮೊದಲೇ ಹೊರಹರಿವನ್ನು ಹೆಚ್ಚಿಸಲಾಗಿದೆ.

ಆಲಮಟ್ಟಿ ಜಲಾಶಯದ ಹಿನ್ನೀರಿನ ಮಂಗಳವಾರದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.