ಆಲಮಟ್ಟಿ: ಬಹುನಿರೀಕ್ಷಿತ ಗದಗ-ಹುಟಗಿ ರೈಲು ಮಾರ್ಗದಲ್ಲಿನ ಬಾಗಲಕೋಟೆ- ಆಲಮಟ್ಟಿ ನಡುವಿನ 35 ಕಿ.ಮೀ ರೈಲ್ವೆ ದ್ವಿಪಥ ಮಾರ್ಗ ಪೂರ್ಣಗೊಂಡಿದ್ದು, ಸೋಮವಾರದಿಂದ ಸಂಚಾರ ಆರಂಭಗೊಂಡಿದೆ. ಇದರಿಂದ ದಶಕಗಳ ಕನಸು ನನಸಾದಂತಾಗಿದೆ.
ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಅಗತ್ಯವಿರುವ ಕಲ್ಲಿದ್ದಲು ಹೊತ್ತ ಗೂಡ್ಸ್ ರೈಲು ಸಂಚಾರಕ್ಕಾಗಿ ಈ ಮಾರ್ಗ ದ್ವಿಪಥಗೊಳ್ಳುವುದು ಅಗತ್ಯವಿತ್ತು. ಗೂಡ್ಸ್ ರೈಲು ಸಂಚಾರಕ್ಕಾಗಿ ಹಲವು ಪ್ರಯಾಣಿಕ ರೈಲುಗಳು ತ್ವರಿತ ಸಂಚಾರಕ್ಕೆ ಅಡ್ಡಿಯಾಗಿತ್ತು. ಅದಕ್ಕಾಗಿ ಕೂಡಗಿ ಎನ್‌ಟಿಪಿಸಿ ಘಟಕದವರೂ ಈ ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ರೈಲ್ವೆ ಇಲಾಖೆ ನೀಡಿತ್ತು. ಆಗ ಈ ರೈಲು ದ್ವಿಪಥ ಮಾರ್ಗ ನಿರ್ಮಾಣಕ್ಕೆ ವೇಗ ದೊರಕಿತ್ತು. ಕಳೆದ 8 ವರ್ಷಗಳಿಂದ ಈ ಕಾಮಗಾರಿ ನಡೆದಿತ್ತು. ಈ ರೈಲ್ವೆ ಮಾರ್ಗದಲ್ಲಿ ಬಾಗಲಕೋಟೆಯಿಂದ ಗದಗ ವರೆಗೆ ಮತ್ತು ವಂದಾಲದಿಂದ ಹುಟಗಿಯ ವರೆಗೆ ಪೂರ್ಣಗೊಂಡು ಹಲವು ವರ್ಷಗಳೇ ಕಳೆದಿದ್ದವು. ಆದರೆ, ಕೃಷ್ಣಾ ನದಿಯ ಕಾರಣ ಬಾಗಲಕೋಟೆ-ಆಲಮಟ್ಟಿ-ವಂದಾಲ ವರೆಗೆ ಸುಮಾರು 45 ಕಿ.ಮೀ ಮಾರ್ಗ ಮಾತ್ರ ಬಾಕಿಯಿತ್ತು. ಅದರಲ್ಲಿ ಸದ್ಯ ಆಲಮಟ್ಟಿ-ಬಾಗಲಕೋಟೆ 35 ಕಿ.ಮೀ ದ್ವಿಪಥ ಮಾರ್ಗ ಪೂರ್ಣಗೊಂಡಂತಾಗಿದೆ.
ರೈಲು ಸಂಚಾರ ಆರಂಭ
ಆಲಮಟ್ಟಿ-ಬಾಗಲಕೋಟೆ ಮಾರ್ಗ ಮಧ್ಯದ ಈ ಕಾಮಗಾರಿಯ ಅಂತಿಮ ಕಾರ್ಯಾಚರಣೆಗಾಗಿ ಕಳೆದ 10 ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಹುತೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ರೈಲ್ವೆ ಸುರಕ್ಷಾ ವಿಭಾಗದ ಅಧಿಕಾರಿಗಳು(ಕಮಿಷನರ್ ಆಫ್ ರೈಲ್ವೆ ಸೇಫ್ಟಿಸ್) ಈ ಮಾರ್ಗದ ತಪಾಸಣೆ ನಡೆಸಿ, ಗಂಟೆಗೆ 120 ಕಿ.ಮೀ ವೇಗದಲ್ಲಿ ರೈಲು ಓಡಿಸಿ ಹೊಸ ರೈಲು ಮಾರ್ಗದಲ್ಲಿ ರೈಲು ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ್ದರು.
ಸೋಮವಾರದಿಂದ ಹೊಸ ಜೋಡಿ ರೈಲು ಮಾರ್ಗದಲ್ಲಿ ರೈಲು ಓಡಾಟ ಆರಂಭಗೊಂಡಿವೆ. ಕಳೆದ 10 ದಿನಗಳಿಂದ ಸ್ಥಗಿತಗೊಂಡಿದ್ದ ಎಲ್ಲಾ ರೈಲುಗಳು ಮೊದಲಿನ ವೇಳಾಪಟ್ಟಿಯಂತೆ ಕಾರ್ಯಾರಂಭ ಮಾಡಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
ಇದರಿಂದ ಆಲಮಟ್ಟಿ-ಬಾಗಲಕೋಟೆ ಮಧ್ಯೆ ಈಗ ಜೋಡಿ ರೈಲು ಮಾರ್ಗ ಆರಂಭಗೊಂಡಂತಾಗಿದೆ. ಕೇವಲ 40 ನಿಮಿಷಗಳಲ್ಲಿ ಆಲಮಟ್ಟಿಯಿಂದ ಬಾಗಲಕೋಟೆ ತಲುಪಬಹುದು.
10 ಕಿ.ಮೀ ಮಾತ್ರ ಬಾಕಿ
ಆಲಮಟ್ಟಿಯಿಂದ- ವಂದಾಲ ವರೆಗೆ 10 ಕಿ.ಮೀ ರೈಲ್ವೆ ದ್ವಿಪಥ ಮಾರ್ಗ ನಿರ್ಮಾಣ ಮಾತ್ರ ಬಾಕಿಯಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿಯಲ್ಲಿ ಪಾರ್ವತಿ ಕಟ್ಟೆ (ಬೇನಾಳ ಬ್ರಿಜ್) ಬಳಿ ಸೇತುವೆ (440 ಮೀ ಉದ್ದದ ಸೇತುವೆ) ನಿರ್ಮಾಣ ಕಾಮಗಾರಿ ಬಾಕಿಯಿದ್ದು, ಅದಕ್ಕಾಗಿ ಈ ಮಾರ್ಗ ಪೂರ್ಣಗೊಂಡಿಲ್ಲ. ಹಿನ್ನೀರಿನಲ್ಲಿಯೇ ಇರುವ ಈ ಸೇತುವೆ ಪೂರ್ಣಗೊಳ್ಳಲು ಇನ್ನೂ ಕನಿಷ್ಠ 8 ತಿಂಗಳಾದರೂ ಬೇಕು ಎನ್ನಲಾಗಿದೆ.
‘ವಂದೇ ಭಾರತ್’ ರೈಲು ಸೇರಿದಂತೆ ಮತ್ತೀತರ ವಿಶೇಷ ಹೊಸ ರೈಲು ಸಂಚಾರಕ್ಕೆ ಈ 10 ಕಿ.ಮೀ ಮಾರ್ಗ ಮಾತ್ರ ಅಡ್ಡಿಯಾಗಿದೆ.
ಹಸಿರು ಹಾಸಿನ ಮಾರ್ಗ
ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿ ಕೃಷ್ಣಾ ನದಿಯಲ್ಲಿ 610 ಮೀಟರ್ ಉದ್ದದ ಸೇತುವೆ (60 ಅಡಿ ಉದ್ದದ 44 ಸ್ಪ್ಯಾನ್‌ಗಳುಳ್ಳ ಸೇತುವೆ) ಬಾಗಲಕೋಟೆ ತಾಲ್ಲೂಕಿನ ಮುಗಳೊಳ್ಳಿ ಸಮೀಪ 18 ಮೀಟರ್ ಮತ್ತು 36 ಮೀಟರ್ ಉದ್ದದ ಎರಡು ಸೇರಿ ಒಟ್ಟು ಮೂರು ಮೇಜರ್ ಸೇತುವೆ ನಿರ್ಮಾಣಕ್ಕಾಗಿ ಕಾಮಗಾರಿ ತಡವಾಗಿತ್ತು. ಈಗ ಅವು ಪೂರ್ಣಗೊಂಡು ಸಂಚಾರ ಆರಂಭಗೊಂಡಿದೆ. ಆಲಮಟ್ಟಿ ಜಲಾಶಯದ ಹಿನ್ನೀರು ಹೆಚ್ಚಿರುವ ಈ ಮಾರ್ಗದುದ್ದಕ್ಕೂ ಸಂಚರಿಸಿದರೇ ನೀರು ಹಾಗೂ ಹಸಿರು ಪರಿಸರ ಕಲ್ಲು ಗುಡ್ಡಗಳ ಮಧ್ಯದಲ್ಲಿ ಸಾಗಿದ ಅನುಭವ ಕಾಣಸಿಗುತ್ತದೆ. ಬಾಗಲಕೋಟೆ ಮುಗಳೊಳ್ಳಿ ಕಡ್ಲಿಮಟ್ಟಿ ಜಡ್ರಾಮಕುಂಟಿ ಸೀತಿಮನಿ ಕೂಡಲಸಂಗಮ ಕ್ರಾಸ್ ಆಲಮಟ್ಟಿ ರೈಲು ನಿಲ್ದಾಣಗಳನ್ನೊಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.