ಕರ್ನಾಟಕ ಲೋಕಾಯುಕ್ತ
(ಸಾಂಕೇತಿಕ ಚಿತ್ರ)
ವಿಜಯಪುರ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯಲ್ಲಿ ಭೂ ಒಡೆತನ ಯೋಜನೆಯಡಿ ₹ 16.84 ಕೋಟಿ ಅನುದಾನ ದುರ್ಬಳಕೆ ಆಗಿರುವುದು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಭೂ ರಹಿತ ಮಹಿಳಾ ಕಾರ್ಮಿಕರಿಗೆ ಭೂ ಒಡೆತನ ಯೋಜನೆಯಡಿ ಜಮೀನು ಹಂಚದೇ, ಫಲಾನುಭವಿಗಳ ಹೆಸರಲ್ಲಿ ನಕಲಿ ಕಾಗದ ಪತ್ರ ಸೃಷ್ಟಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ನಿಗಮದ ಜಿಲ್ಲಾ ಕಚೇರಿ ಮತ್ತು ನಿವೃತ್ತ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲಿಸಿದಾಗ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ದಾಖಲೆಪತ್ರಗಳು ಸಿಕ್ಕಿವೆ.
‘ಕಾರ್ಯಾಚರಣೆ ವೇಳೆ 33 ನಕಲಿ ಖರೀದಿ ಪತ್ರಗಳು, ನಕಲಿ ನೋಂದಣಾಧಿಕಾರಿಗಳ ಚಲನ್‌ಗಳ ಸೃಷ್ಟಿ ಮತ್ತು ₹ 16.84 ಮೌಲ್ಯದ ಅವ್ಯವಹಾರಗಳು ಪತ್ತೆಯಾಗಿವೆ’ ಎಂದು ಲೋಕಾಯುಕ್ತ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘2014ರಿಂದ 2018ನೇ ಸಾಲಿನಲ್ಲಿ ಜಮೀನು ಹಂಚಿಕೆ ಮಾಡಲಿಲ್ಲ. ಖರೀದಿಸಿದ ಜಮೀನುಗಳ ಕಾಗದಪತ್ರಗಳನ್ನು ನಿಗಮದ ಹೆಸರಿನಲ್ಲಿ ಒತ್ತೆ (ಭೋಜಾ) ರೂಪದಲ್ಲೂ ಇಡಲಿಲ್ಲ. ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿದ ನಿಯಮಗಳನ್ನು ಉಲ್ಲಂಘಿಸಿ, ಹಣ ದುರ್ಬಳಕೆ ಮಾಡಲಾಗಿದೆ’ ಎಂದು ಆರೋಪಿಸಿ ವಿಜಯಪುರದ ಇಬ್ರಾಹಿಂಪುರ ಗೇಟ್ ನಿವಾಸಿ ಶಾಸ್ತ್ರಿ ಸಂಗಮ್ಮ ಹೊಸಮನಿ ಎಂಬುವರು ದೂರು ನೀಡಿದ್ದರು.
ಅದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ನಿಗಮದ ಜಿಲ್ಲಾ ವ್ಯವಸ್ಥಾಪಕಿಯಾಗಿದ್ದ ರೇಣುಕಾ ಸಾತರ್ಲೆ ಅವರ ಮನೆ, ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಎಸ್.ಜಿ.ಹಡಪದ, ನಿವೃತ್ತ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಮಣ್ಣಿಗೇರಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಬೆಂಗಳೂರು ಕಚೇರಿ ಮತ್ತು ವಿಜಯಪುರ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಮೇಲೆ ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.