ADVERTISEMENT

ವಿಶ್ವದ ಶ್ರೇಷ್ಠ ಸಮಾಜ ಸುಧಾರಕ ಅಂಬೇಡ್ಕರ್: ಎ.ಎಸ್.ಪಾಟೀಲ್

₹ 50 ಲಕ್ಷ ಅನುದಾನದಲ್ಲಿ ನವೀಕೃತ ವೃತ್ತ ನಿರ್ಮಾಣ; ಅಂಬೇಡ್ಕರ್ ಮೂರ್ತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 12:43 IST
Last Updated 20 ಮಾರ್ಚ್ 2023, 12:43 IST
ಮುದ್ದೇಬಿಹಾಳ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ನವೀಕೃತ ವೃತ್ತ ಮತ್ತು ಬೃಹತ್‌ ಗಾತ್ರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು 
ಮುದ್ದೇಬಿಹಾಳ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ನವೀಕೃತ ವೃತ್ತ ಮತ್ತು ಬೃಹತ್‌ ಗಾತ್ರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು    

ಮುದ್ದೇಬಿಹಾಳ: ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಸಮಾಜ ಸುಧಾರಕ, ಮಹಾ ಮಾನವತಾವಾದಿ. ಈ ದೇಶದ ಇತಿಹಾಸವನ್ನೇ ಬದಲಾಯಿಸಿದ ಇಂತಹ ಮಹಾತ್ಮ ಶತಮಾನ ಕಳೆದರೂ ಹುಟ್ಟೋದಿಲ್ಲ. ಅವರ ಜೀವನ ಚರಿತ್ರೆಯೇ ಎಂಥವರಲ್ಲೂ ಛಲ, ಹೋರಾಟ, ಸಮಾನತೆಗಾಗಿ ತ್ಯಾಗ ಮಾಡುವ ಮನೋಭಾವ ಮೂಡಿಸುವಂತಹದು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ನವೀಕೃತ ವೃತ್ತ ಮತ್ತು ಬೃಹತ್‌ ಗಾತ್ರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅಂಬೇಡ್ಕರ್ ಓದದೇ ಇರುವ ಪುಸ್ತಕಗಳೇ ಇಲ್ಲ, ನಮ್ಮ ದೇಶಕ್ಕೆ ಇವತ್ತಿಗೂ ಅಂಬೇಡ್ಕರ್‌ ಅವಶ್ಯಕತೆ ಇದೆ. ದೇಶದಲ್ಲಿ ಇನ್ನೂ ತಾಂಡವವಾಡುತ್ತಿರುವ ಜಾತೀಯತೆ ಹೊಡೆದೋಡಿಸಲು, ಭಾರತ ಮಾತೆಯ ಸೇವೆ ಮಾಡಲು ಅಂಬೇಡ್ಕರ್ ಅಂಥವರ ಅವಶ್ಯಕತೆ ಇದೆ ಎಂದರು.

ADVERTISEMENT

ಇಂದು ಸಹ ಜನರನ್ನು ತಮ್ಮ ಕಾಲಿಗೆ ಉದ್ದ ಮಲಗಿಸಿ ನಮಸ್ಕರಿಸಿಕೊಳ್ಳುವವರು ಇದ್ದಾರೆ. ಇಂಥ ಗುಲಾಮಗಿರಿ ಹೊಡೆದೋಡಿಸಬೇಕಾದರೆ ಮತ್ತೇ ನಮಗೆ ಅಂಬೇಡ್ಕರ್ ಅವಶ್ಯಕತೆ ಇದೆ ಎಂದು ಹೇಳಿದರು.

ಸಮಾಜದಲ್ಲಿ ಅತ್ಯಂತ ಕಷ್ಟದ, ಸವಾಲಿನ ಬದುಕನ್ನು ನಡೆಸುವ ಮಹಿಳೆ ಯಾರೆಂದರೆ ಅದು ದಲಿತರ ಮನೆಯ ಮಹಿಳೆ. ಆಕೆಗೆ ಸರ್ಕಾರದ ಎಸ್‍ಸಿಪಿ, ಟಿಎಸ್‍ಪಿ ಹಣದಲ್ಲಿ ಮಾಸಿಕ ಕನಿಷ್ಠ ₹ 1ಸಾವಿರ ಮಾಸಾಶನ ಕೊಡಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಅಧಿವೇಶನದಲ್ಲಿ ಹಕ್ಕೊತ್ತಾಯ ಮಂಡಿಸಿದ್ದೆ. ಅದನ್ನು ಈಗಿನ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ ಎಂದರು.

ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ಮಾತನಾಡಿ, ಅಂಬೇಡ್ಕರ್ ವೃತ್ತ ನಿರ್ಮಾಣ, ಪುತ್ಥಳಿ ನಿರ್ಮಾಣ ಬೇಡಿಕೆಯನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಈಡೇರಿಸಿದ್ದಾರೆ. ಯಾರು ಒಳ್ಳೇಯ ಕೆಲಸ ಮಾಡುತ್ತಾರೆಯೋ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೈಸೂರಿನ ಬಂತೇಜಿ ಬೋಧಿದಮ್ಮ, ಅಂಬೇಡ್ಕರ್ ಅವರ ತತ್ವಗಳು ಜಗತ್ತಿಗೇ ಬೆಳಕಾಗಿವೆ. ಜೈ ಭೀಮ್ ಅನ್ನುವ ಪದದ ಮಹತ್ವವನ್ನು ನಾವು ಅರಿತುಕೊಂಡು ಅದನ್ನು ಬಳಸಬೇಕು. ಬಾಬಾಸಾಹೇಬರ ಅನುಯಾಯಿಗಳಾಗುವ ಅರ್ಹತೆ ನಾವೆಲ್ಲರೂ ಸಂಪಾದಿಸಬೇಕು. ಅವರು ನಮ್ಮ ಜನರಲ್ಲಿ ನೆಲೆಯೂರಿದ್ದ ಅಜ್ಞಾನ ಹೊಡೆದೋಡಿಸಲು ಶ್ರಮಿಸಿದ ಮಾದರಿಯಲ್ಲೇ ನಾವೆಲ್ಲರೂ ಸಮಾಜದಲ್ಲಿ ಇನ್ನೂ ಇರುವ ಅಜ್ಞಾನ ಹೊಡೆದೋಡಿಸಲು ಶ್ರಮಿಸಬೇಕು ಎಂದು ಹೇಳಿದರು.

ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಬಿ.ಚಲವಾದಿ ಮಾತನಾಡಿ, ಶಾಸಕ ನಡಹಳ್ಳಿ ಜಾತ್ಯತೀತ, ಧರ್ಮಾತೀತ, ರಾಜಕಾರಣಿಯಾಗಿದ್ದು, ಮಾನವೀಯತೆಯ ಸರದಾರ ಎನ್ನಿಸಿಕೊಂಡಿದ್ದಾರೆ ಎಂದರು.

ಶಾಸಕರ ತಂದೆ ಸಂಗನಗೌಡ ಪಾಟೀಲ ನಡಹಳ್ಳಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಸದಾಶಿವ ಮಾಗಿ, ಬಸಪ್ಪ ತಟ್ಟಿ, ಅಶೋಕ ವನಹಳ್ಳಿ, ರಾಜಶೇಖರ ಹೊಳಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ, ದಲಿತ ಸಂಘಟನೆಗಳ ಮುಖಂಡರಾದ ಹರೀಶ ನಾಟೀಕಾರ, ಯಮನಪ್ಪ ಹಂಗರಗಿ, ಛಲವಾದಿ ಸಮಾಜದ ಅಧ್ಯಕ್ಷ ರೇವಣೆಪ್ಪ ಚಲವಾದಿ, ಭೋವಿ ಸಮಾಜದ ಅಧ್ಯಕ್ಷ ಪರಶುರಾಮ ನಾಲತವಾಡ, ಅಲ್ಪಸಂಖ್ಯಾತ ಸಮುದಾಯದ ಮುಖಂಡ ಮಹಿಬೂಬ ಕುಂಟೋಜಿ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಉಮೇಶ ಚಲವಾದಿ, ಮಲ್ಲಪ್ಪ ಬಸರಕೋಡ, ಹೊಳೆಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಪರಶುರಾಮ ಮುರಾಳ, ಸಿ.ಜಿ.ವಿಜಯಕರ್ ಇದ್ದರು.

****
ನನ್ನ ಜೀವನದಲ್ಲಿ ಯಾವತ್ತಿಗೂ ಮೇಲು, ಕೀಳು ಅನ್ನೋ ಭೇದ ಮಾಡಿಲ್ಲ. ನನ್ನ ಅಡುಗೆ ಮನೆ, ದೇವರ ಕೋಣೆಯವರೆಗೂ ದಲಿತರಿಗೆ ಪ್ರವೇಶವಿದೆ.

-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.