ADVERTISEMENT

ತಾಳಿಕೋಟೆ | ದುರಸ್ತಿಯಾಗದ ದೋಣಿ ಮೇಲ್ಸೇತುವೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 5:20 IST
Last Updated 31 ಜುಲೈ 2023, 5:20 IST
ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಸೇತುವೆ(ಮುಳುಗು ಸೇತುವೆ) ಮೇಲೆ ತಾತ್ಕಾಲಿಕವಾಗಿ ಸಂಚರಿಸುತ್ತಿರುವ ವಾಹನಗಳು 
ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಸೇತುವೆ(ಮುಳುಗು ಸೇತುವೆ) ಮೇಲೆ ತಾತ್ಕಾಲಿಕವಾಗಿ ಸಂಚರಿಸುತ್ತಿರುವ ವಾಹನಗಳು    

ಶರಣಬಸಪ್ಪ ಶಿ.ಗಡೇದ

ತಾಳಿಕೋಟೆ: ಪಟ್ಟಣದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಬಿಜ್ಜಳ ರಸ್ತೆಯಲ್ಲಿರುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಎರಡನೇ ಮೇಲ್ಸೇತುವೆಯ ಒಂದುಭಾಗ ಶಿಥಿಲವಾಗಿದ್ದು, ವಾಹನ ಸಂಚಾರ ನಿಷೇಧಿಸಿ ಎರಡು ವರ್ಷ ಕಳೆದರೂ ದುರಸ್ತಿ ಭಾಗ್ಯ ಕಾಣದ್ದರಿಂದ ರಸ್ತೆ ಸಂಚಾರವೇ ಸ್ಥಗಿತಗೊಳ್ಳುವ ಆತಂಕದಲ್ಲಿ ಜನತೆ ಇದ್ದಾರೆ.

ಪಟ್ಟಣದ ಬಳಿಯ ಡೋಣಿ ನದಿ ಸೇತುವೆ ವಿಜಯಪುರ, ಮುದ್ದೇಬಿಹಾಳ, ಬಾಗಲಕೋಟೆ ಹುನಗುಂದ ಸೇರಿದಂತೆ ಪ್ರಮುಖ ಪಟ್ಟಣಗಳನ್ನು ಕಲಬುರ್ಗಿ, ಬೀದರ್‌, ರಾಯಚೂರು, ಲಿಂಗಸೂರುಗಳತ್ತ ಪಯಣಿಸಲು ಸಂಪರ್ಕ ಸೇತುವೆಯಾಗಿದೆ.

ADVERTISEMENT

ಡೋಣಿ ನದಿ ಮೇಲ್ಮಟ್ಟದ ಸೇತುವೆಯ ಒಂದು ಭಾಗ ಶಿಥಿಲವಾಗಿ ಮುರಿದುಬೀಳುವ ಹಂತ ತಲುಪಿದ್ದರಿಂದ ಅದಕ್ಕೆ ಸಮಾಂತರವಾಗಿ ಕೆಳಮಟ್ಟದಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾಗಿದ್ದ ಕಮಾನುಸೇತುವೆಯನ್ನು ಬಳಸಿಕೊಂಡು ಎಡಬಲಗಳಲ್ಲಿ ₹2  ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಿಸಿದ ಲೋಕೋಪಯೋಗಿ ಇಲಾಖೆ ವಾಹನ ಸಂಚಾರಕ್ಕೆ ಕಳೆದ ವರ್ಷ ಅನುವು ಮಾಡಿಕೊಟ್ಟಿದೆ.

ಈ ವರ್ಷ ಜುಲೈ ಕಳೆಯುತ್ತಿದ್ದರೂ ಪ್ರವಾಹದ ಸ್ಥಿತಿಯಿಲ್ಲ. ಕಳೆದ ವರ್ಷ ಈ ಸಮಯದಲ್ಲಿ ಎರಡು ಬಾರಿ ಪ್ರವಾಹದಿಂದ ರಸ್ತೆ ಸಂಚಾರ ವಾರಕ್ಕೂ ಅಧಿಕ ಕಾಲ ಸ್ಥಗಿತವಾಗಿತ್ತು. ಮಧ್ಯೆ ಮಧ್ಯೆ ಕೂಡ ದಿನಬಿಟ್ಟು ದಿನ ಪ್ರವಾಹದಿಂದ ರಸ್ತೆ ಸಂಚಾರ ಸ್ಥಗಿತವಾಗುತ್ತಲೇ ಬಂದಿತ್ತು.

ರಸ್ತೆ ಸಂಚಾರ ನಿಷೇಧಿಸಲಾಗಿರುವ ವಿಜಯಪುರ ರಸ್ತೆಯಲ್ಲಿನ ಡೋಣಿ ಮೇಲ್ಸೇತುವೆ ರಾಜ್ಯ ಹೆದ್ದಾರಿಯು 1994ರಿಂದ ಸುಮಾರು ಒಂಬತ್ತು ವರ್ಷ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು. ಸೇತುವೆಯ ಬಾಳಿಕೆ ಅವಧಿ ತಜ್ಞರ ಪ್ರಕಾರ 120 ವರ್ಷಗಳು. ಆದರೆ, 25 ವರ್ಷಗಳಲ್ಲಿಯೇ ಈಗಾಗಲೇ ಒಂದು ಬಾರಿ ದುರಸ್ತಿ ಕಂಡ ಈ ಸೇತುವೆ ಈಗ ಮತ್ತೆ ಶಿಥಿಲಗೊಂಡಿದ್ದರಿಂದ ತಜ್ಞರು ರಸ್ತೆ ಸಂಚಾರವನ್ನೇ ತಡೆ ಹಿಡಿದಿದ್ದಾರೆ.

ತಾಳಿಕೋಟೆ ಬಳಿ ದೋಣಿ ನದಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆ ಶಿಥಿಲವಾಗಿದ್ದು ₹ 35 ಕೋಟಿ ವೆಚ್ಚದಲ್ಲಿ ಆದಷ್ಟು ಬೇಗನೆ ಹೊಸ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಹಿಂದಿನ ಶಾಸಕರು ಕೇವಲ ಹೊಸ ಸೇತುವೆ ನಿರ್ಮಾಣದ ಬದಲಿಗೆ ತಾತ್ಕಾಲಿಕ ವ್ಯವಸ್ಥೆ ಮಾತ್ರ ಮಾಡಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
ಸಿ.ಎಸ್‌.ನಾಡಗೌಡ, ಶಾಸಕ, ಮುದ್ದೇಬಿಹಾಳ

ಮೊದಲ ದೊಡ್ಡ ಸೇತುವೆಗೆ ಯಾವುದೇ ತೊಂದರೆಯಾಗಿಲ್ಲ, ಎರಡನೆಯ ಸೇತುವೆಯ ಕೊನೆಯಲ್ಲಿನ ಒಂದು ಭಾಗದ ಬೀಮ್‌ಗಳು ಕುಸಿತ ಕಂಡಿದ್ದು, ಅವುಗಳನ್ನು ಮಾತ್ರ ತೆಗೆದು ಜೋಡಿಸಿದ್ದರೆ ಸಾಕಿತ್ತು ಎನ್ನುವುದು ಜನಾಭಿಪ್ರಾಯವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆ ಶಿಥಿಲಗೊಂಡಿದ್ದ 2 ಸೇತುವೆಗಳನ್ನು ಮರು ನಿರ್ಮಾಣ ಮಾಡಲು ₹14.50 ಕೋಟಿ ಮೊತ್ತದ ಅಂದಾಜು ಪತ್ರಿಕೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.

ಆದರೆ, ವರ್ಷದ ಹಿಂದೆ ಸೇತುವೆಯ ಗುಣಮಟ್ಟದ ಪರಿಶೀಲನೆ ನಡೆಸಿರುವ ಬೆಂಗಳೂರಿನ ಕಾಂಕ್ರಿಟ್ ಸ್ಟ್ರಕ್ಚರಲ್ ಪ್ಲೊರೆನ್ಸಿಕ್ ಕನ್ಸಲ್ಟಂಟ್ ನವರು ಇಡಿಯಾಗಿ ಎರಡೂ ಸೇತುವೆಗಳನ್ನು ತಳಮಟ್ಟದಿಂದಲೇ ತೆರವುಗೊಳಿಸಿ ಹೊಸದಾಗಿ ನಿರ್ಮಿಸುವಂತೆ ವರದಿ ನೀಡಿದೆ.

ಬ್ರಿಟೀಷರ ಕಾಲದಲ್ಲಿ ಕಟ್ಟಿಸಿದ ಸೇತುವೆ ಸ್ವಲ್ಪವೂ ಅಲುಗಾಡದೆ ನಿಂತಿದೆ. ಹೊಸ ಸೇತುವೆ ಕಟ್ಟಿಸಿ 30 ವರ್ಷದಲ್ಲಿ ಎರಡು ಬಾರಿ ದುರಸ್ತಿ ಕಂಡು ಈಗ ಪೂರ್ಣವಾಗಿ ತೆರವುಗೊಳಿಸುವ ಸ್ಥಿತಿ ತಲುಪಿದೆ. ಡೋಣಿ ನದಿ ಸೇತುವೆ ಪುನರ್ ನಿರ್ಮಾಣ ಬೇಗ ಪ್ರಾರಂಭಿಸಬೇಕು ಹೊಸ ಸೇತುವೆಯನ್ನಾದರೂ ಸುಸಜ್ಜಿತವಾಗಿ ಗುಣಮಟ್ಟದಿಂದ ನಿರ್ಮಿಸಲಿ.
ವೀರೇಶ ಕೋರಿ, ಮುಖ್ಯಸ್ಥರು, ಕವೀ ಫೌಂಡೇಶನ್ ತಾಳಿಕೋಟೆ

ಸೇತುವೆ ನಿರ್ಮಾಣದ ಹಂತದಲ್ಲಿ ಅವಶ್ಯಕತೆಯಿದ್ದ ಉದ್ದನೆಯ ರಾಡ್‌ಗಳು ದೊರೆಯದ್ದರಿಂದ ಒಂದರಮೇಲೆ ಒಂದು ಜೋಡಿಸಿ ಓವರ್ ಲ್ಯಾಪ್ ಮಾಡಿ ಸೇತುವೆ ನಿರ್ಮಾಣ ಮಾಡಿರುವುದು ಹಾಗೂ ಕಳಪೆ ಕಾಂಕ್ರೀಟ್ ಹಿನ್ನೆಲೆಯಲ್ಲಿ ನಿಗದಿತ ಅವಧಿಗಿಂತ ಮುಂಚೆಯೇ ಸೇತುವೆ ತನ್ನ ಶಕ್ತಿ ಕಳೆದುಕೊಂಡಿದೆ ಎಂದು ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿದೆ ಎಂದು ತಿಳಿದುಬಂದಿದೆ.

ಸೇತುವೆ ಮೇಲೆ ವಾಹನಗಳು ಸಂಚರಿಸುವಾಗ ಇಡೀ ಸೇತುವೆ ತೂಗುಯ್ಯಾಲೆ ಆಡದಂತೆ ಭಾಸವಾಗುತ್ತಿದ್ದುದಕ್ಕೆ ಇದೇ ಕಾರಣ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಡೋಣಿ ಸೇತುವೆ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆ.ಆರ್.ಡಿ.ಸಿ) ಅವರಿಗೆ ವಹಿಸಲಾಗಿದ್ದು ಅವರು ₹27.9 ಕೋಟಿಯ ಅಂದಾಜು ವೆಚ್ಚದ ಡಿಪಿಆರ್ ಮಾಡಿ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ 2022ರ ಜುಲೈ 7 ರಂದು ಸಲ್ಲಿಸಿದೆ.

ಈಗಾಗಲೇ ವರ್ಷ ಕಳೆದಿದೆ. ಹೊಸದಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಸೇತುವೆ ದುರಸ್ತಿ ಬಗ್ಗೆ ಈ ಹಿಂದೆ ಬಲವಾದ ಧ್ವನಿಯಾಗಿ ನಿಂತಿದ್ದ ಇಂದಿನ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೊಸ ಸೇತುವೆ ನಿರ್ಮಾಣಕ್ಕೆ ತುರ್ತಾಗಿ ಗಮನಹರಿಸಬೇಕು ಎಂಬುದು ಜನತೆಯ ಒತ್ತಾಸೆಯಾಗಿದೆ.

ಡೋಣಿ ನದಿ ಪ್ರವಾಹವುಂಟಾದರೆ ಮುಖ್ಯ ಸೇತುವೆಗೆ ಪರ್ಯಾಯವಾಗಿ ಸಂಚಾರಕ್ಕೆ ಹಡಗಿನಾಳ ಮಾರ್ಗದಲ್ಲಿ ಡೋಣಿ ನದಿಗೆ ಅಡ್ಡಲಾಗಿ ಸುಭದ್ರವಾದ ಸೇತುವೆ ನಿರ್ಮಾಣವಾಗಿದ್ದರೂ ಮಿಣಜಗಿ, ಬಸವನ ಬಾಗೆವಾಡಿ, ವಿಜಯಪುರಗಳತ್ತ ಹೋಗುವವರಿಗೆ ಐದು ಕಿ.ಮೀ ಬದಲಾಗಿ 15 ಕಿ.ಮೀ ಹೆಚ್ಚುವರಿಯಾಗಿ ಸುತ್ತುಬಳಸಿ ಹೋಗಬೇಕು. ಆದಾಗ್ಯೂ, ಮೂಕಿಹಾಳ ಸಂಪರ್ಕಿಸುವ ಐದು ಕಿಮೀ ರಸ್ತೆ ಆಳದ ತೆಗ್ಗುಗಳಿಂದ ತುಂಬಿರುವುದಲ್ಲದೇ ಮೂಕಿಹಾಳ ಹತ್ತಿರದ ಸೋಗಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ನೆಲಮಟ್ಟದ ಸೇತುವೆ ನಿರೀಕ್ಷೆಯಷ್ಟು ಗಟ್ಟಿಯಾಗಿಲ್ಲ. ಕಳೆದ ವರ್ಷವೇ ನಿರ್ಮಾಣ ಮಾಡಿದ್ದ ನೆಲಮಟ್ಟದ ಸೇತುವೆ ಒಂದೇ ತಿಂಗಳಲ್ಲಿ ದೊಡ್ಡ ಮಳೆಗೆ ಕಿತ್ತುಹೋಗಿ ತಿಂಗಳ ಕಾಲ ರಸ್ತೆ ಸಂಚಾರವೇ ಸ್ಥಗಿತವಾಗಿತ್ತು. ಅದು ದುರಸ್ತಿ ಭಾಗ್ಯ ಕಾಣಬೇಕಿದೆ.

ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ನದಿಗೆ 30 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಎರಡನೇ ಮೇತ್ಸೇತುವೆ ಬಿರುಕು ಬಿಟ್ಟು ಶಿಥಿಲವಾಗಿರುವುದರಿಂದ ಸದ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ
ತಾಳಿಕೋಟೆ ಪಟ್ಟಣದ ಸಮೀಪ ಡೋಣಿ ನದಿಗೆ 30 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಎರಡನೇ ಸೇತುವೆ ಬಿರುಕು ಬಿಟ್ಟಿರುವುದರಿಂದ ಸದ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.