ದೇವರಹಿಪ್ಪರಗಿ: ತಾಲ್ಲೂಕಿನಾದ್ಯಂತ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಗೆ ವಿವಿಧ ಗ್ರಾಮಗಳಲ್ಲಿ ಸುಮಾರು 75ಕ್ಕೂ ಹೆಚ್ಚು ಮನೆಗಳು ಹಾಗೂ ಪುರಾತನ ಹುಡೇ ಬಿದ್ದು ಹಾನಿಗೀಡಾಗಿವೆ.
ತಾಲ್ಲೂಕಿನ ಪಟ್ಟಣ ಸಹಿತ ಹಂಚಲಿ, ದೇವೂರ, ಕಡಕೋಳ, ಕೊಂಡಗೂಳಿ, ಪಡಗಾನೂರ, ಕೋರವಾರ, ಮುಳಸಾವಳಗಿ, ಕಡ್ಲೇವಾಡ ಪಿಸಿಎಚ್, ಕೆರೂಟಗಿ, ಆಲಗೂರ, ಚಿಕ್ಕರೂಗಿ, ಕಡಕೋಳ, ಯಾಳವಾರ, ಭೈರವಾಡಗಿ, ಮಾರ್ಕಬ್ಬಿನಹಳ್ಳಿ, ಜಾಲವಾದ ಗ್ರಾಮಗಳಲ್ಲಿ ಮಣ್ಣಿನ ಮನೆಗಳು ಸತತ ಮಳೆಯಿಂದ ನೆನೆದು ಕುಸಿತಗೊಂಡಿವೆ. ಇನ್ನೂ ಶನಿವಾರ ಮಣ್ಣೂರ ಗ್ರಾಮದ ಪುರಾತನ ಹುಡೇ ಕುಸಿದು ನೆಲಕ್ಕೋರಗಿದೆ. ಆದರೆ, ಅದೃಷ್ಟಾವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ತಾಲ್ಲೂಕಿನ ಗ್ರಾಮಗಳ ಬಿದ್ದ ಮನೆಗಳಿಗೆ ಈಗಾಗಲೇ ತಹಶೀಲ್ದಾರ್ ಪ್ರಕಾಶ ಸಿಂದಗಿ ಹಾಗೂ ಆಯಾ ಗ್ರಾಮಗಳ ಗ್ರಾಮಾಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಿದ್ದಾರೆ.
ಬಿದ್ದ ಮನೆಗಳು ಹಾಗೂ ಪುರಾತನ ಹುಡೇ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲು ಮಣ್ಣೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಂಬಣ್ಣ ಆನೆಗುಂದಿ, ಸದಸ್ಯರಾದ ಅಬ್ಬಾಸಲಿ ಬಾಗವಾನ, ವಸಂತ ರಾಠೋಡ, ಬಸವರಾಜ ವಾಲಿ, ರಾಜಶೇಖರ ಮಣೂರ, ಮುಳಸಾವಳಗಿ ಗ್ರಾಮದ ಸುಭಾಸ್ ನಾಯ್ಕೋಡಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.