ಬಬಲೇಶ್ವರ: ಬಬಲೇಶ್ವರ ತಾಲ್ಲೂಕಿನ ತಿಗಣಿಬಿದರಿ ಗ್ರಾಮದ ಪ್ರಗತಿಪರ ಕೃಷಿಕ ರಾಜುಗೌಡ ಬಿರಾದಾರ ತಮ್ಮ 15 ಎಕರೆ ಜಮೀನಿನಲ್ಲಿ ಕೃಷಿ ಜೊತೆ ಕಿಲಾರಿ ಹೋರಿಗಳ ಸಾಕಣೆಯಿಂದ ಕೈತುಂಬ ಆದಾಯ ಗಳಿಸುತ್ತಿದ್ದಾರೆ.
ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜುಗೌಡ ಬಿರಾದಾರ ಅವರು ಅಗತ್ಯ ಸಲಹೆ, ಮಾರ್ಗದರ್ಶನ ನೀಡುತ್ತಿದ್ದಾರೆ.
‘ರಾಮ್ಯಾ’ ಎಂಬ ಮಹಾರಾಷ್ಟ್ರದ ‘ಕೋಸಾ ಕಿಲಾರಿ’ ಎಂಬ ತಳಿ ಮತ್ತು ‘ಸಾರಂಗ’ ಎಂಬ ಕರ್ನಾಟಕದ ‘ಕಿಲಾರಿ’ ಬೀಜದ ಹೋರಿಗಳನ್ನು ಸಾಕಿದ್ದಾರೆ. ಪ್ರತಿದಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಆಕಳುಗಳನ್ನು ಕಟ್ಟಿಸಲು ಇವರಲ್ಲಿಗೆ ಹೈನುಗಾರರು ಬರುತ್ತಾರೆ. ಇವರಲ್ಲಿಗೆ ಬರುವವರು ಮುಂಚಿತವಾಗಿಯೇ ಹೆಸರು ಬರೆಸಿ, ಸಮಯ ಕಾಯ್ದಿರಿಸುತ್ತಾರೆ. ಬೀಜದ ಹೋರಿಗಳಿಂದ ವಾರ್ಷಿಕ ₹ 10 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ರಾಜುಗೌಡ ತೊಡಗಿದ್ದಾರೆ. ಕಿಲಾರಿ ಹೋರಿಗಳ ಜೊತೆ ಮೂರು ದೇಸಿ ಆಕಳು, ಮೂರು ಎಮ್ಮೆ, 20 ಆಡುಗಳನ್ನು ಸಾಕಿ ಅವುಗಳಿಂದ ಹಾಲು, ಹಾಲಿನ ಉತ್ಪನ್ನಗಳು ತಯಾರಿಸಿ, ಮಾರಾಟ ಮಾಡಿ, ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ.
ಸುಮಾರು ಆರು ಎಕರೆಯಲ್ಲಿ ಸಾವಯವ ಕಬ್ಬು, ಹಸುಗಳಿಗೆ ಬೇಕಾಗುವ ಮೇವು, ತೊಗರಿ, ಹತ್ತಿ, ಮೆಕ್ಕೆಜೋಳ ಬೆಳೆದು ವರ್ಷಕ್ಕೆ ₹ 10 ಲಕ್ಷದಿಂದ ₹ 15 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಮನೆಗೆ ಬೇಕಾಗುವ ಈರುಳ್ಳಿ, ಟೊಮೆಟೊ, ಹೀರೇಕಾಯಿ, ಚವಳಿಕಾಯಿ, ಬೆಂಡಿ ಕಾಯಿ, ಬದನೆಕಾಯಿ, ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ, ಮೆಂತೆ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇವುಗಳ ಜೊತೆ ತೆಂಗು, ಮಾವು, ದಾಳಿಂಬೆ, ಚಿಕ್ಕು, ಬಾಳೆ, ಪೇರಲ, ಬಾರಿಹಣ್ಣಿನ ಗಿಡಗಳನ್ನು ಹಚ್ಚಿ ಇದರಿಂದಲೂ ಲಾಭ ಪಡೆಯುತ್ತಿದ್ದಾರೆ.
ಕಿಲಾರಿ ಹೋರಿಗಳ ತಳಿ ಅಭಿವೃದ್ಧಿ ಸಂಬಂಧಿಸಿ ರಾಜು ಬಿರಾದಾರ ಅವರ ಮೊ: 97437 88536 ಸಂಪರ್ಕಿಸಬಹುದು.
ಕೇವಲ ಕೃಷಿಯಿಂದ ಬದುಕು ಸಾಗಿಸುವುದು ಕಷ್ಟ. ಹೈನುಗಾರಿಕೆ ಕುರಿ ಕೋಳಿ ಸಾಕಣೆಯಂತಹ ಉಪಕಸುಬ ಮಾಡಿದರೆ ಮಾತ್ರ ಲಾಭ ಸಾಧ್ಯ.–ರಾಜುಗೌಡ ಬಿರಾದಾರ, ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.