
ಮುದ್ದೇಬಿಹಾಳ: ‘ಬಸವ ಕಲ್ಯಾಣದ ಬಸವಣ್ಣನವರ ಅರಿವಿನ ಮನೆಯಲ್ಲಿರುವ ಹಡಪದ ಅಪ್ಪಣ್ಣನವರ ಅರಿವಿನ ಮನೆ ಬೋರ್ಡ್ ಅಳಿಸಿ ಹಾಕಿ, ಮೂರ್ತಿ ಸ್ಥಾನಪಲ್ಲಟಗೊಳಿಸಲು ಪಂಚ ಕಮಿಟಿಯವರು ಯೋಜಿಸಿದ್ದಾರೆ. ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಧಿಕಾರಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತಡೆಗಟ್ಟಲು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ತೋರಿಸಿದರೆ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡುವುದರ ಜೊತೆಗೆ ಬೆಂಗಳೂರುವರೆಗೂ ಪಾದಯಾತ್ರೆ ನಡೆಸಬೇಕಾಗುತ್ತದೆ’ ಎಂದು ತಂಗಡಗಿಯಲ್ಲಿರುವ ಹಡಪದ ಅಪ್ಪಣ್ಣನವರ ಮಹಾಸಂಸ್ಥಾನದ ಪೀಠಾಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಹೇಳಿದರು.
ತಂಗಡಗಿ ಮಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪಣ್ಣನವರ ಅರಿವಿನ ಮನೆಯಲ್ಲಿ ಬಸವಣ್ಣನವರ ಪತ್ನಿಯವರಾದ ಶರಣೆ ಗಂಗಾಂಬಿಕೆ, ನೀಲಾಂಬಿಕೆ ಅವರ ಹೆಸರು ಸಮೇತ ಮೂರ್ತಿ ಅನಾವರಣ ಮಾಡಲು ಪಂಚ ಕಮಿಟಿಯವರು ಯೋಜಿಸಿದ್ದಾರೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಅಪ್ಪಣ್ಣನವರ ಹೆಸರು ಅಳಿಸಿ ಹಾಕಲು ಯತ್ನಿಸುತ್ತಿರುವುದಕ್ಕೆ ತೀವ್ರ ವಿರೋಧ ಇದೆ. ಅಪ್ಪಣ್ಣನವರ ಅರಿವಿನ ಮನೆ ಮೊದಲಿನಂತೆ ಉಳಿಯಬೇಕು ಎಂದರು.
ಭಾಲ್ಕಿಯ ಪಟ್ಟದ್ದೇವರು, ಹುಣಸೂರು ಶ್ರೀಗಳು ಮಾತನಾಡಿ, ‘ಅರಿವಿನ ಮನೆಯಲ್ಲಿ ಅಪ್ಪಣ್ಣನವರನ್ನು ಕೂಡಿಸದಿದ್ದರೆ ಆ ಮನೆಗೆ ಅಸ್ತಿತ್ವವೇ ಇರುವುದಿಲ್ಲ’ ಎಂದರು.
ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವಪ್ಪ ಹಡಪದ, ಉಪಾಧ್ಯಕ್ಷ ಸುರೇಶ ಹಡಪದ, ಕಾರ್ಯಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು, ಪ್ರಧಾನ ಕಾರ್ಯದರ್ಶಿ ಚಿದಾನಂದ ಬಸರಕೋಡ, ಖಜಾಂಚಿ ಸಂಜೀವ ಶಿವಣಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.