
ವಿಜಯಪುರ: ‘ವಿಜಯಪುರದಲ್ಲಿ ಅತೀ ಹೆಚ್ಚು ಭೂ ಅಕ್ರಮ ನಡೆದಿರುವುದೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವಧಿಯಲ್ಲಿ ಮತ್ತು ರಾಜಕೀಯದಲ್ಲಿ ಯತ್ನಾಳರಷ್ಟು ದೊಡ್ಡ ಭ್ರಷ್ಟಾಚಾರಿ ಯಾರೂ ಇಲ್ಲ’ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಯತ್ನಾಳ ಈಚೆಗೆ ಭೂ ಕಬಳಿಕೆ ವಿಷಯವಾಗಿ ಮಾತನಾಡುವ ವೇಳೆ ಭೂ ಕಬಳಿಕೆ ಹಿಂದೆ ಮಾಜಿ ಶಾಸಕರಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾದರೆ, ಆ ಮಾಜಿ ಶಾಸಕ ಯಾರು ಎಂಬುದನ್ನು ಬಹಿರಂಗ ಪಡಿಸಲಿ’ ಎಂದು ಒತ್ತಾಯಿಸಿದರು.
‘ನಾನು ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಕೇವಲ ಮಾಜಿ ಶಾಸಕ ಎಂದು ಹೇಳಿದರೆ ಸಾಲದು, ಅವರ ಹೆಸರನ್ನು ಹೇಳಬೇಕು. ಯಾಕೆಂದರೆ, ಇಂತಹ ಭೂ ಅಕ್ರಮದ ವಿರುದ್ಧ ಮೊದಲು ಧ್ವನಿ ಎತ್ತಿ, ಹೋರಾಟ, ಪ್ರತಿಭಟನೆಗಳನ್ನೂ ಮಾಡಿಕೊಂಡು ಬಂದಿದ್ದೇನೆ. ಈಗ ಕೇವಲ ಮಾಜಿ ಶಾಸಕ ಎಂದರೆ ಜನರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗಲಿದೆ. ಹೀಗಾಗಿ ಅವರ ಹೆಸರನ್ನು ಬಹಿರಂಗವಾಗಿ ಹೇಳಬೇಕು’ ಎಂದರು.
‘ವಿಜಯಪುರದಲ್ಲಿ ಭೂ ಕಬಳಿಕೆಯ ಆರಂಭವಾಗಿರುವುದೇ ಯತ್ನಾಳ ಶಾಸಕರಾದ ನಂತರ. ಅವರೊಬ್ಬ ದೊಡ್ಡ ಭ್ರಷ್ಟಾಚಾರಿಯಾಗಿದ್ದು, ಅವರ ಅವಧಿಯಲ್ಲೇ ಅತಿ ಹೆಚ್ಚು ಭೂ ಮಾಫಿಯಾ ನಡೆದಿದೆ. ಕಳೆದ 15 ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದು, ಅದೆಲ್ಲ ಹೇಗೆ ಸಂಪಾದನೆ ಮಾಡಿದ್ದಾರೆ? ಬೆಂಗಳೂರಿನಲ್ಲಿ ₹15 ಕೋಟಿ ಕೊಟ್ಟು ಇತ್ತೀಚೆಗೆ ಮನೆ ಖರೀದಿ ಮಾಡಿದ್ದಾರೆ, ಮನೆಯಲ್ಲಿ ಹತ್ತಾರು ಕಾರುಗಳಿವೆ? ಸಕ್ಕರೆ ಕಾರ್ಖಾನೆ ಮಾಡಿದ್ದಾರೆ. ಇದಕ್ಕೆಲ್ಲ ಎಲ್ಲಿಂದ ಹಣ ಬಂತು’ ಎಂದು ಪ್ರಶ್ನಿಸಿದರು.
‘2004ರಲ್ಲಿ ನಾನು ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕನಾಗಿದ್ದೆ. ನಂತರ 2008ರ ಚುನಾವಣೆಯಲ್ಲಿ ನನ್ನನ್ನು ಕೆಡವಲು ಯತ್ನಾಳ ತನ್ನ ಸ್ವತಃ ಅಣ್ಣನನ್ನೇ ನಿಲ್ಲಿಸಿದ್ದರು. ಆದರೆ, ನಾನು ಒಳ್ಳೆಯ ಕೆಲಸ ಮಾಡಿದ್ದ ಕಾರಣಕ್ಕೆ ಮತ್ತೆ ಗೆಲುವು ಸಧಿಿಸಿದ್ದೆ. ನನ್ನ ಎಂಟು ವರ್ಷಗಳ ಅವಧಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ’ ಎಂದರು.
‘ವಿಜಯಪುರ ಅಭಿವೃದ್ಧಿ ನಾನೊಬ್ಬನೇ ಮಾಡಿದ್ದು, ಬೇರೆಯವರು ಏನೂ ಮಾಡಿಲ್ಲ ಎಂದು ಯತ್ನಾಳ ಹೇಳಿಕೊಳ್ಳುವುದು ಸುಳ್ಳು. ಹಲವು ದೂರುಗಳು ಬಂದರೂ ಇದುವರೆಗೂ ಸಬ್ ರಿಜಿಸ್ಟ್ರಾರ್ ಬದಲಾಯಿಸಲು ಯತ್ನಾಳರಿಂದ ಆಗಿಲ್ಲ’ ಎಂದು ಕುಟುಕಿದರು.
‘ಹಿಂದುತ್ವದ ಬಗ್ಗೆ ಮಾತನಾಡುವ ಯತ್ನಾಳ ಕನೇರಿ ಶ್ರೀಗಳ ವಿಷಯದಲ್ಲಿ ಯಾಕೆ ಸುಮ್ಮನಾದರು? ಬಬಲೇಶ್ವರದಲ್ಲಿ ಸಮಾವೇಶ ಮಾಡುತ್ತೇನೆ ಎಂದು ಬೆಳಗಾವಿಯಲ್ಲಿ ಮೊದಲು ಘೋಷಣೆ ಮಾಡಿದ್ದೇ ಯತ್ನಾಳ. ಆದರೂ, ಬಬಲೇಶ್ವರದಲ್ಲಿ ನಡೆದ ಸಮಾವೇಶಕ್ಕೆ ಯಾಕೆ ಬರಲಲ್ಲ? ಇದಕ್ಕೆ ಕಾರಣವೇನು ಎಂಬುವುದನ್ನೂ ಬಹಿರಂಗ ಪಡಿಸಲಿ’ ಎಂದು ಪಟ್ಟಣಶೆಟ್ಟಿ ಸವಾಲು ಹಾಕಿದರು.
‘2028ಕ್ಕೆ ಜೆಸಿಬಿ ಪಕ್ಷ ಅಧಿಕಾರಕ್ಕೆ ಬರಲಿದೆ, ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹಾದಿ, ಬೀದಿಯಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆ’ ಎಂದು ಹೇಳಿದರು.
ಯತ್ನಾಳ ವರ್ತನೆ ಹುಚ್ಚಾಟದಿಂದ ಬೇಸತ್ತು ಮುಖಂಡರಾದ ಪರಶುರಾಮ ರಜಪೂತ ರಾಘು ಅಣ್ಣಿಗೇರಿ ನಂದು ಗಡಗಿ ಸೇರಿದಂತೆ ಅನೇಕ ಯುವಕರು ದೂರವಾಗಿದ್ದಾರೆ. ಇನ್ನಷ್ಟು ಜನ ಶೀಘ್ರ ಹೊರಬರಲಿದ್ದಾರೆಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ