ADVERTISEMENT

ವಿಜಯಪುರ | ಬಾಯಲ್ಲಿ ಬೂಟು ಇಟ್ಟು ಹೊಡೆದ ಪಿಎಸ್‌ಐ: ಆರೋಪ

ಆರೋಪ ಅಲ್ಲಗಳೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:00 IST
Last Updated 29 ಮೇ 2021, 21:00 IST

ವಿಜಯಪುರ: ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಜೂಜಾಡುತ್ತಿದ್ದವರ ಬಗ್ಗೆ ಫೋನ್‌ ಮಾಡಿ ಮಾಹಿತಿ ನೀಡಿದ ಯುವಕನನ್ನೇ ಪೊಲೀಸರು ಠಾಣೆಗೆ ಕರೆದೊಯ್ದು, ಬಾಯಲ್ಲಿ ಬೂಟು ಇಟ್ಟು ಹೊಡೆದು, ಬಳಿಕ ಚರಂಡಿಯಲ್ಲಿ ಎಸೆದು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ‘ಯುವಕನ ಆರೋಪ ಸಂಪೂರ್ಣ ಸುಳ್ಳು’ ಎಂದರು.

‘ಯುವಕನೊಬ್ಬ ಕುಡಿದು ಗಲಾಟೆ ಮಾಡುತ್ತಿದ್ದಾನೆ’ ಎಂದು ಪೊಲೀಸ್‌ ಕಂಟ್ರೋಲ್‌ ರೂಂಗೆ ದೂರು ಬಂದಿತ್ತು. ಈ ಸಂಬಂಧ ಪೊಲೀಸರು ಆತನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ’ ಎಂದು ಇಂಡಿ ಡಿಎಸ್‌ಪಿ ಶ್ರೀಧರ ದೊಡ್ಡಿ ಹೇಳಿದರು.

ADVERTISEMENT

ಯುವಕನ ಆರೋಪ: ‘ಗ್ರಾಮದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ನಾನೇ ಫೋನ್‌ ಮಾಡಿ ತಿಳಿಸಿದ್ದೆ. ಆದರೆ, ಇಂಡಿ ಗ್ರಾಮೀಣ ಠಾಣೆ ಪಿಎಸ್‌ಐ ಮಾಳಪ್ಪ ಪೂಜಾರಿ ಹಾಗೂ ಬೀಟ್ ಪೊಲೀಸ್ ಮಹೇಶ ಪವಾರ ಎಂಬುವವರು ನನ್ನನ್ನೇ ಠಾಣೆಗೆ ಕರೆದೊಯ್ದು ಬಾಯಿಗೆ ಬೂಟು ಇಟ್ಟು, ಹಿಗ್ಗಾಮುಗ್ಗ ಥಳಿಸಿದರು. ಬಳಿಕರಾತ್ರಿ 11ರ ಸುಮಾರಿಗೆ ಖಾಸಗಿ ವಾಹನದಲ್ಲಿ ಕರೆತಂದು ಗ್ರಾಮದ ಹೊರವಲಯದಲ್ಲಿ ಚರಂಡಿಗೆ ಎಸೆದು ಹೋಗಿದ್ದಾರೆ’ ಎಂದು ಯುವಕ ಸಂತೋಷ ನಂದ್ಯಾಳ ಆರೋಪಿಸಿದ್ದಾರೆ.

‘ಪೊಲೀಸರ ಥಳಿತದಿಂದ ಅಸ್ವಸ್ಥನಾಗಿದ್ದ ಸಂತೋಷನನ್ನು ಅಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ಈ ಸಂಬಂಧ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ಹೆದರಿಸಿ ಕಳುಹಿಸಿದ್ದಾರೆ’ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.