ADVERTISEMENT

ಮುದ್ದೇಬಿಹಾಳ | ಬಣಜಿಗರಿಂದ ಶರಣರ ಸಂದೇಶ ಪ್ರಸಾರ

ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಸಂಸದ ಜಗದೀಶ ಶೆಟ್ಟರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 7:29 IST
Last Updated 29 ಸೆಪ್ಟೆಂಬರ್ 2025, 7:29 IST
ಮುದ್ದೇಬಿಹಾಳಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮಕ್ಕೆ ಸಂಸದ ಜಗದೀಶ ಶೆಟ್ಟರ್ ಚಾಲನೆ ನೀಡಿದರು
ಮುದ್ದೇಬಿಹಾಳಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮಕ್ಕೆ ಸಂಸದ ಜಗದೀಶ ಶೆಟ್ಟರ್ ಚಾಲನೆ ನೀಡಿದರು   

ಮುದ್ದೇಬಿಹಾಳ: ‘ಬಣಜಿಗ ಸಮಾಜದವರು ನಿಗರ್ವಿಗಳಾಗಿದ್ದು, ಎಲ್ಲ ಸಮಾಜದವರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅಮೆರಿಕದ ಡೆಟ್ರಾಯ್ ನಗರದಲ್ಲಿ ಬಣಜಿಗ ಸಮಾಜದವರು ಬಸವಾದಿ ಶರಣ ಸಂದೇಶ ಪಸರಿಸುತ್ತಿದ್ದಾರೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂಧ ಭಾನುವಾರ ನಡೆದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯ ಸರ್ಕಾರವು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದೆ. ಈವರೆಗೆ ಕೇವಲ ಶೇ 6ರಷ್ಟು ಮಾತ್ರ ಸಮೀಕ್ಷೆ ನಡೆಡಿದ್ದು, ಗಡುವಿನೊಳಗೆ ಶೇ 100ರಷ್ಟು ಗುರಿ ತಲುಪುವುದು ಅಸಾಧ್ಯ. ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದ್ದು, ಒಳಪಂಗಡಗಳನ್ನು ಒಡೆಯುವ ಕುತಂತ್ರದಿಂದಾಗಿ ರಾಜ್ಯ ಸರ್ಕಾರ ಸಮೀಕ್ಷೆಗೆ ಮುಂದಾಗಿದೆ’ ಎಂದು ಟೀಕಿಸಿದರು.

ADVERTISEMENT

‘ವೀರಶೈವರು, ಲಿಂಗಾಯತರು ಬೇರೆ ಬೇರೆಯಾಗಿ ಹೋದರೆ ಯಾವ ಸೌಲಭ್ಯವೂ ಸಿಗುವುದಿಲ್ಲ. ವೀರಶೈವ ಲಿಂಗಾಯತ ಎರಡೂ ಒಂದೇ. ಇದು ಅಧಿಕೃತವಾಗಿ ಘೋಷಣೆ ಆಗಬೇಕಾದರೆ ಇನ್ನೂ ಹೆಚ್ಚಿನ ಕೆಲಸ ನಡೆಯಬೇಕಿದೆ. ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ, ಉಪಜಾತಿ ಕಾಲಂನಲ್ಲಿ ಬಣಜಿಗ ಎಂಬುದಾಗಿ ಬರೆಯಿಸಿ’ ಎಂದು ಹೇಳಿದರು.

ಶಾಸಕ ಸಿ.ಎಸ್. ನಾಡಗೌಡ ಮಾತನಾಡಿ, ‘ಬಣಜಿಗ ಸಮಾಜದವರು ದಾನ, ಧರ್ಮ, ದೈವೀಭಕ್ತಿಯೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು. ಎಲ್ಲರನ್ನೂ ಒಪ್ಪಿಕೊಳ್ಳುವ ಸಮಾಜದವರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮುದ್ದೇಬಿಹಾಳದಲ್ಲಿ ಕುಡಿಯುವ ನೀರಿನ ಯೋಜನೆಗೆ ₹9.50 ಕೋಟಿ ಮೊತ್ತದ ಪರಿಷ್ಕೃತ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದರು. ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿ ಆಗಿದ್ದಾಗ ಮುದ್ದೇಬಿಹಾಳ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಅನುದಾನ ಕೊಟ್ಟಿದ್ದಾರೆ’ ಎಂದರು.

ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ‘ಹಿಂದೂಗಳನ್ನು ವಿಭಜಿಸುವ ಕೆಲಸವನ್ನು ನಮ್ಮವರೇ ಕೆಲವರು ಮಾಡುತ್ತಿದ್ದಾರೆ. ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ಬರೆಯಿಸಿದರೆ ರಾಜ್ಯದ 162 ಕ್ಷೇತ್ರಗಳಲ್ಲಿ ಬಹುಮತ ಪಡೆದುಕೊಳ್ಳುವಷ್ಟು ಸಾಮರ್ಥ್ಯ ಸಮಾಜಕ್ಕಿದೆ. ಆದರೆ, ನಮ್ಮವರೇ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ₹17,230 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿತ್ತು. ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಚಿಮ್ಮಲಗಿ, ಮುಳವಾಡ ಏತ ನೀರಾವರಿ ಯೋಜನೆಗಳಿಗೆ ₹800 ಕೋಟಿ ನೀಡಿದ್ದರು. ಅದರ ಫಲವಾಗಿ ರೈತರ ಜಮೀನುಗಳಿಗೆ ನೀರು ಹರಿಯುತ್ತಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಹೊಸಮಠದ ಅಮರೇಶ್ವರ ದೇವರು, ಪ್ರಭುಗೌಡ ದೇಸಾಯಿ, ಬಣಜಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಚಟ್ಟೇರ, ಶಿಕ್ಷಕ ರುದ್ರೇಶ ಕಿತ್ತೂರ, ಪ್ರಭುರಾಜ ಕಲ್ಬುರ್ಗಿ ಮಾತನಾಡಿದರು. ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು.

ಸಮಾಜದ ಗೌರವಾಧ್ಯಕ್ಷ ಎಂ.ಎಸ್.ನಾವದಗಿ, ಪ್ರಧಾನ ಕಾರ್ಯದರ್ಶಿ ರಾಜು ಬಳ್ಳೊಳ್ಳಿ, ಮುಖಂಡರಾದ ಎಂ.ಬಿ.ನಾವದಗಿ,ಬಿ.ಸಿ.ಮೋಟಗಿ, ಸಂಗಮೇಶ ನಾವದಗಿ, ಯುವ ಘಟಕದ ಅಧ್ಯಕ್ಷ ಶಂಕರ ಕಡಿ, ಉಪಾಧ್ಯಕ್ಷ ಶಿವು ದಡ್ಡಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಾಗಠಾಣ ಇದ್ದರು.

ಫೋಟೋ:28-ಎಂ.ಬಿ.ಎಲ್‌01ಎ ಮುದ್ದೇಬಿಹಾಳ ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು.ಮಾಜಿ ಸಿಎಂ ಜಗದೀಶ ಶೆಟ್ಟರ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಇದ್ದರು.
‘ಸಮಾಜದವರ ಸ್ವಾಭಿಮಾನಕ್ಕೆ ಧಕ್ಕೆ ತಂದವರು ಯಾರೇ ಇದ್ದರೂ ಅವರ ನಡೆಯನ್ನು ಖಂಡಿಸುತ್ತೇನೆ. ಸಮಾಜದಲ್ಲಿನ ಉಳ್ಳವರು ಬಡವರಿಗೆ ನೆರವಾಗಬೇಕು
ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಜಿ ಸಚಿವ
ಧರ್ಮ ಕಾಲಂ
ಭಿನ್ನ ಹೇಳಿಕೆ ಸಂಸದ ಜಗದೀಶ ಶೆಟ್ಟರ್ ಅವರು ಮಾತನಾಡುವಾಗ ‘ವೀರಶೈವ ಲಿಂಗಾಯತ ಸಮಾಜಕ್ಕೆ ಅಧಿಕೃತವಾಗಿ ಧರ್ಮದ ಮಾನ್ಯತೆ ಇನ್ನೂ ದೊರಕಿಲ್ಲ. ಹಾಗಾಗಿ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು’ ಎಂದರು. ಅದಕ್ಕೆ ಅಪ್ಪು ಪಟ್ಟಣಶೆಟ್ಟಿ ನಡಹಳ್ಳಿ ಸಮ್ಮತಿಸಿದರು. ಆದರೆ  ಶಾಸಕ ಸಿ.ಎಸ್. ನಾಡಗೌಡ ಮಾತನಾಡುವಾಗ ‘ನಮ್ಮ ದಾಖಲೆಗಳಲ್ಲಿ ಲಿಂಗಾಯತ ಧರ್ಮ ಎಂದೇ ಇದೆ. ನಾವೆಲ್ಲ ಬಸವಣ್ಣನವರ ಅನುಯಾಯಿಗಳಾಗಿರುವ ಕಾರಣ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಯಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.